ಬೀದರ್: ರ‍್ಯಾಲಿಯಲ್ಲಿ ಸಿಎಂಗೆ ಅಪ್ಪು ಫೋಟೋ ನೀಡಿದ ಅಭಿಮಾನಿ..!
ಜನ ಸಂಕಲ್ಪ ಯಾತ್ರೆಯ ರ‍್ಯಾಲಿ ವೇಳೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು ಅವರ ಫೋಟೋ ನೀಡಲು ಮುಂದಾದಾಗ ಅದನ್ನು ಗಮನಿಸಿದ ಸಿಎಂ, ಫೋಟೋ ಪಡೆದು ಅದ್ಧೂರಿಯಾಗಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಲಾರಿ ಮುಂದೆ ಇಟ್ಟು ಅಪ್ಪು ಅಭಿಮಾನಿಗಳಿಗೆ ಸ್ಪಂದಿಸಿ ಗಮನ ಸೆಳೆದರು.
ಔರಾದ್(ಅ.19): ಔರಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಗೆ ಭರ್ಪೂರ್ ಜನ ಸೇರಿದ್ದರು. ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತೆರೆದ ಲಾರಿಯಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಸಿಎಂಗೆ ಪುನೀತ್ ರಾಜ್‌ಕುಮಾರ್ ಅವರ (ಅಪ್ಪು) ಫೋಟೋವನ್ನು ಅಭಿಮಾನಿಗಳು ನೀಡಿದ ಘಟನೆ ನಡೆಯಿತು.
ಮಂಗಳವಾರ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯ ರ‍್ಯಾಲಿ ವೇಳೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು ಅವರ ಫೋಟೋ ನೀಡಲು ಮುಂದಾದಾಗ ಅದನ್ನು ಗಮನಿಸಿದ ಸಿಎಂ, ಫೋಟೋ ಪಡೆದು ಅದ್ಧೂರಿಯಾಗಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಲಾರಿ ಮುಂದೆ ಇಟ್ಟು ಅಪ್ಪು ಅಭಿಮಾನಿಗಳಿಗೆ ಸ್ಪಂದಿಸಿ ಗಮನ ಸೆಳೆದರು.
ಬೇಲ್ ಮೇಲಿರುವ ರಾಹುಲ್, ಭ್ರಷ್ಟಾಚಾರದ ಮಾತು: ಸಿಎಂ ಬೊಮ್ಮಾಯಿ ವ್ಯಂಗ್ಯ
ನಾಲ್ಕು ಸೀಟು ಪಕ್ಕಾ, ಸಿಎಂ ಬೊಮ್ಮಾಯಿ ವಿಶ್ವಾಸ
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4 ವಿಧಾನ ಸಭಾ ಕ್ಷೇತ್ರಗಳಲ್ಲಷ್ಟೇ ತಮ್ಮ ಗೆಲವಿದೆ ಎಂದು ನಂಬಿ ಎರಡು ಕ್ಷೇತ್ರಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅನುಮಾನ ಹೊಂದಿರುವುದು ಸ್ಪಷ್ಟವಾಗಿದೆ.
ಔರಾದ್‌ನಲ್ಲಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿ ಅವರು, ಬೀದರ್ ಜಿಲ್ಲೆಯಲ್ಲಿ ಕನಿಷ್ಟ4 ಸೀಟುಗಳನ್ನ ಗೆದ್ದೇ ಗೆಲ್ಲುತ್ತೇವೆ. ನಮ್ಮ ಕೆಲಸದ ರಿಪೋಟ್ ಕಾರ್ಡ್ ಇಟ್ಟು ನಿಮ್ಮ ಆಶೀರ್ವಾದ ಕೇಳ್ತೇವೆ. ಕರ್ನಾಟಕದಲ್ಲಿ ಜನ ಸಂಕಲ್ಪ ಯಾತ್ರೆ ಮತ್ತೇ ಬಿಜೆಪಿಯ ಕಮಲ ಅರಳಿಸಿ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣದತ್ತ ಸಾಗುತ್ತದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೇ ಜಿಲ್ಲೆಗೆ ಬರ್ತೇನೆ ಆಗ ಎಲ್ಲ ಕ್ಷೇತ್ರಗಳಿಗೆ ಬರ್ತೇನೆ. ಎಲ್ಲ ವರ್ಗದ ಜನರ ವಿಶ್ವಾಸ ಗಳಿಸೋಣ. ರೈತರು, ಮಹಿಳೆಯರ ವಿಶ್ವಾಸ ಗಳಿಸೋಣ. ಸ್ತ್ರೀ ಸಾಮರ್ಥ್ಯ ಕಾರ್ಯಕ್ರಮಕ್ಕೆ 500 ಕೋಟಿ ರು. ಒದಗಿಸಿದ್ದೇನೆ. ಇದರಿಂದ 5ಲಕ್ಷ ಮಹಿಳೆಯರಿಗೆ ಕೆಲಸ ಸಿಗುತ್ತದೆ. ಒಟ್ಟಾರೆಯಾಗಿ, ಸಧ್ಯ ಈಗ ಔರಾದ್ ಹಾಗೂ ಬಸವಕಲ್ಯಾಣ ಕ್ಷೇತ್ರಗಳು ಸೇರಿದಂತೆ ಒಟ್ಟು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಇನ್ನೆರಡೇ ಕ್ಷೇತ್ರದತ್ತ ಸಿಎಂ ಭರವಸೆ ಹೊಂದಿದಂತೆ ಇತ್ತು ಅವರ ಮಾತು.
ಒಟ್ಟಾರೆಯಾಗಿ, ಒಬ್ಬ ಕೇಂದ್ರ ಸಚಿವ, ಒಬ್ಬ ರಾಜ್ಯದ ಕ್ಯಾಬಿನೆಟ್ ಸಚಿವ ಹಾಗೂ ಶಾಸಕ, ಮತ್ತೋರ್ವ ವಿಧಾನಸಭಾ ಸದಸ್ಯ, ಇಬ್ಬರು ವಿಧಾನ ಪರಿಷತ್ ಸದಸ್ಯರು ಅಲ್ಲದೆ ಹಲವಾರು ನಿಗಮ ಮಂಡಳಿ ಅಧ್ಯಕ್ಷರನ್ನು ಹೊಂದಿರುವ ಬಿಜೆಪಿಯು ಬೀದರ್ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸವಿಟ್ಟಿದ್ದು ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿಲ್ಲ ಎಂಬುವದು ಧೃಢವಾದಂತಾಗಿದೆ.