ಆನಂದ್ ಎಂ. ಸೌದಿ

ಯಾದಗಿರಿ [ಸೆ.06]:  ಸಾಲಬಾಧೆ ಹಾಗೂ ಬೆಳೆನಷ್ಟದಿಂದ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಗೋವಿಂದಪ್ಪನ ಕುಟುಂಬ ತೀರ ಸಂಕಷ್ಟದಲ್ಲಿದೆ. ದುಡಿದು ತರಲೇಬೇಕು ಅನ್ನೋ ಅನಿವಾರ್ಯತೆ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಕೂಲಿಗೆ ತೆರಳುವಂತೆ ಮಾಡಿದೆ. 

ಗ್ರಾಮದಲ್ಲಿ ತನಗಿದ್ದ ಒಂದು ಎಕರೆ ಮೂರು ಗುಂಟೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ಗೋವಿಂದಪ್ಪ ಕಪ್ಲಿಬೆಂಚಿ (40) ಬೆಳೆನಷ್ಟದ ಹಿನ್ನೆಲೆಯಲ್ಲಿ ಕಂಗಾಲಾಗಿ ಆ.11, 2018 ರಂದು ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದರು. ಬಿತ್ತನೆ ಮಾಡಿದ್ದ ಹತ್ತಿ, ಮೆಣಸಿನಕಾಯಿ ಬೆಳೆಗಳು ಕೈಗೆಟುಕದೆ ಇದ್ದಾಗ, ಸುಮಾರು 6 ಲಕ್ಷ ರು.ಗಳವರೆಗಿನ ಸಾಲ ಹೇಗೆ ತೀರಿಸುವುದು ಅನ್ನೋ ಆತಂಕ ಅವರನ್ನು ಸಾವಿಗೆ ದೂಡುವಂತೆ ಮಾಡಿತ್ತು.

 ಹೊಲದಲ್ಲಿ ಮಧ್ಯಾಹ್ನ ಊಟ ಒಯ್ದ ಪತ್ನಿ ಮರೆಮ್ಮಗೆ ಗೋವಿಂದಪ್ಪ ಒದ್ದಾಡುತ್ತಿರುವ ದೃಶ್ಯ ಕಂಡು ಅಕ್ಕಪಕ್ಕದವರ ನೆರವಿನೊಂದಿಗೆ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗಿ, ಕ್ರಿಮಿನಾಶಕ ಸೇವಿಸಿದ್ದ ಆತ ಮಾರ್ಗ ಮಧ್ಯೆಯೆ ತೀರಿಕೊಂಡಿದ್ದ. ಹೊಲದಲ್ಲಿನ ಬೆಳೆ ನಿರ್ವಹಣೆಗೆ ಹಾಗೂ ಲೀಜ್‌ಗಾಗಿ ಮಾಡಿದ ಸುಮಾರು 6 ಲಕ್ಷ ರು.ಗಳ ಸಾಲ ರೈತನ ಜೀವವನ್ನೇ ಕಸಿದುಕೊಂಡು ಬಿಟ್ಟಂತಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಗನ ಮುಂಚೆ ನಾನೇ ಹೋಗಬೇಕಾಗಿತ್ತಲ್ಲ ಎಂದು ಕೊರಗುತ್ತಿರುವ ಗೋವಿಂದಪ್ಪನ ವಯೋವೃದ್ಧ ತಂದೆ ಭೀಮಣ್ಣ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳ ‘ವಿಷ್ಯಕ್ಕಾಗಿ ಗಟ್ಟಿ ಮನಸು ಮಾಡಿದಂತಿದೆ. ಅವರ ಬದುಕಾದರೂ ಹಸನಾಗಲಿ ಅನ್ನೋ ಕಾರಣಕ್ಕೆ ತಾನೂ ಸಹ ಸಾವಿಗೆ ಶರಣಾಗಬೇಕೆಂಬ ತೀರ್ಮಾನವನ್ನು ಕೈಬಿಟ್ಟು, ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಅನ್ನದಾತನ ಬದುಕು ಅತಂತ್ರ : ದನದ ಕೊಟ್ಟಿಗೆಯಲ್ಲಿ ಕುಟುಂಬ ವಾಸ !

ಗೋವಿಂದಪ್ಪನ ಪತ್ನಿ ಮರೆಮ್ಮ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಹೊಟ್ಟೆಪಾಡಿಗೆ ದುಡಿಯಲೇ ಬೇಕು ಅನ್ನೋ ಅನಿವಾರ‌್ಯತೆ ಇಬ್ಬರು ಮಕ್ಕಳನ್ನೂ ಶಾಲೆಯಿಂದ ಬಿಡಿಸಿ, ಕೂಲಿಗೆ ಹಚ್ಚಬೇಕಾಗದ ಪ್ರಮೇಯ ಬಂದೊದಗಿದೆ. ಪಿಯುಸಿ ಓದುತ್ತಿದ್ದ ಹಿರಿಮಗ ಶರಬಣ್ಣ ಹಾಗೂ ೯ನೇ ತರಗತಿ ಓದುತ್ತಿದ್ದ ಬಸವರಾಜ್ ಮನೆಯ ತಾಪತ್ರಯ ನೀಗಿಸಲು ಶಾಲೆಗೆ ಬೆನ್ನು ಮಾಡಿ, ತಾಯಿ ಜೊತೆ ಕೂಲಿಯತ್ತ ಮುಖಮಾಡಿದ್ದಾರೆ.

"
ಗೂಡಂಗಡಿಯಂತಹ ಹರುಕು ಮುರುಕು ಗುಡಿಸಲು ಇವರೀಗ ವಾಸಿಸುವ ಸ್ಥಳ. ಮಳೆ ಬಂದರೆ ಮನೆ ಬೀಳುವ ಭೀತಿಯಿಂದ ಪಕ್ಕದ ಸಂಬಂಧಿ ಮನೆಯಲ್ಲೇ ಆಶ್ರಯ. ಮಳೆ ನಿಂತ ಮೇಲೆ ಮತ್ತೇ ವಾಪಸ್ಸಾಗುವ ದುಸ್ಥಿತಿ ಇವರದ್ದು. ವಿಧವಾ ವೇತನ ಸೇರಿದಂತೆ ಸರ್ಕಾರದ ಮೂಲಸೌಲಭ್ಯಗಳು ಇವರಿಗೆ ಮರೀಚಿಕೆಯಾಗಿವೆ. 

ಸಾಲದ ದಾಖಲೆಯಿಲ್ಲದ ಕಾರಣಕ್ಕೆ ಗೋವಿಂದಪ್ಪ ಕುಟುಂಬಕ್ಕೆ ಪರಿಹಾರ ತಿರಸ್ಕೃತಗೊಂಡಿದೆ. ಈ ಬಗ್ಗೆ ಅರಿವಿರದ ಇನ್ನೂ ಅವರುಗಳು, ಕಚೇರಿ ಕಚೇರಿ ಅಲೆದಾಡುತ್ತಿದ್ದಾರೆ. ಗೋವಿಂದಪ್ಪನ ಹೆಸರಿನಲ್ಲಿ ಜಮೀನು ಇದ್ದರೂ, ಸಾಲದ ದಾಖಲೆಗಳು ಇಲ್ಲ. ಕೈಗಡ ಸಾಲ (ಖಾಸಗಿಯವರ ಬಳಿ)ಕ್ಕೆ ದಾಖಲೆಗಳು ಇಲ್ಲವಾದ್ದರಿಂದ ಇವರಿಗೆ ಪರಿಹಾರ ವಂಚಿತಗೊಂಡಿದೆ. ತನ್ನ ಒಂದು ಎಕರೆಯಲ್ಲದೆ, ಬೇರೆಯವರ ಐದು ಎಕರೆ ಹೊಲವನ್ನು ಲೀಜ್ ಪಡೆದಿದ್ದ ಗೋವಿಂದಪ್ಪ ಅಲ್ಲಿಯೂ ನಷ್ಟ ಅನು‘ವಿಸಿದ್ದ ಎನ್ನಲಾಗಿದೆ. 

ಯಾದಗಿರಿ : ಅನ್ನ ನೀಡಿದ ಕೈಗಳ ಬದುಕು ಅತಂತ್ರ !

ಸಾಲದ ಬಾಧೆಗೆ ಆತ್ಮಹತ್ಯೆಯೊಂದೇ ಮಾರ್ಗವಲ್ಲ ಎಂಬುದನ್ನರಿತಿದ್ದ ಗೋವಿಂದಪ್ಪ, ಖಾಸಗಿ ಸಾಲ ನೀಡಿದವರ ಕಿರುಕುಳ ಹೆಚ್ಚಾದಾಗ ಹಾಗೂ ಬೆಳೆಯೂ ಬಾರದೆ ಹಣ ಸಿಗದೆ ಇದ್ದಾಗ, ಕ್ರಿಮಿನಾಶಕ ಸೇವಿಸುವ ಮೂಲಕ ತಾನು ಆಡಿದ್ದ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಎಂದು ತಂದೆ ಭೀಮಣ್ಣ ಹಿಂದಿನದ್ದನ್ನು ನೆನೆಸಿಕೊಂಡು ಕಣ್ಣೀರಿಡುತ್ತಾರೆ.

ವಿಷ ಸೇವಿಸಿದ್ದ ಗಂಡ ಕಣ್ಣೆದುರೇ ವಿಲಿವಿಲಿ ಒದ್ದಾಡುತ್ತಿದ್ದ, ಸಾಲದ ‘ಯ ಆತನ ಜೀವ ನುಂಗಿತು. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಆತನ ಸಾವು ನಮ್ಮನ್ನು ಬೀದಿಗೆ ತಳ್ಳಿದಂತಾಗಿದೆ. 

ಮರೆಮ್ಮ, ಆತ್ಮಹತ್ಯೆ ಮಾಡಿಕೊಂಡ ಗೋವಿಂದಪ್ಪನ ಪತ್ನಿ, ವಿಭೂತಿಹಳ್ಳಿ ಗ್ರಾಮ. 

ವಯಸ್ಸಾದ ನನ್ನ ಜೀವ ಹೋಗಬೇಕಾಗಿತ್ತು, ಬದಲಿಗೆ ನನ್ನ ಮಗನೇ ಸಾವನ್ನಪ್ಪಿದ. ಸೊಸೆ ಹಾಗೂ ಮೊಮ್ಮಕ್ಕಳ ಮುಖ ನೋಡಿಕೊಳ್ಳಲು ಅವರಿಗೆ ನೆರವಾಗಲೆಂದು ಮಾತ್ರ ಬದುಕಿರುವೆ. 

ಭೀಮಣ್ಣ, ಮೃತ ರೈತ ಗೋವಿಂದಪ್ಪನ ತಂದೆ. 

ಗೋವಿಂದಪ್ಪನ ಸಾವಿನಿಂದಾಗಿ ಇಡೀ ಕುಟುಂಬ ಅತಂತ್ರದಲ್ಲಿದೆ. ಸಾಲಬಾಧೆ ಹಾಗೂ ಬೆಳೆನಷ್ಟದಿಂದ ಕಂಗಾಲಾಗಿದ್ದ ಆತ ವಿಷ ಸೇವಿಸಿ ಸಾವನ್ನಪ್ಪಿರುವುದು ನಮಗೆಲ್ಲ ಸಿಡಿಲು ಬಡಿದಂತಾಗಿದೆ. 

ಕಾಮಣ್ಣ, ಮೃತ ಗೋವಿಂದಪ್ಪನ ಅಣ್ಣ, ಶಹಾಪುರ.