Covid-19 Death: ವೈರಸ್‌ಗೆ ಬಲಿಯಾದ ಕುಟುಂಬಗಳಿಗೆ ಇನ್ನೂ ಸಿಗದ ಪರಿಹಾರ..!
* ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕೊರೋನಾಗೆ 69 ಜನ ಬಲಿ
* ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬದವರ ಗೋಳು ಕೇಳೋರಿಲ್ಲ
* ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯ ಸರ್ಕಾರ ಮಾಡಬೇಕಿತ್ತು
ಅಶೋಕ ಸೊರಟೂ
ಲಕ್ಷ್ಮೇಶ್ವರ(ಡಿ.11): ಕೊರೋನಾ(Coronavirus) ಸೋಂಕಿನಿಂದ ಸಂಬಂಧಿಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ತಾಲೂಕಿನ 69 ಕುಟುಂಬಗಳಿಗೆ ಪರಿಹಾರವೂ ಮರೀಚಿಕೆಯಾಗಿದೆ!.
ಗದಗ(Gadag) ಜಿಲ್ಲೆಯ ಲಕ್ಷ್ಮೇಶ್ವರ(Lakshmeshwara) ತಾಲೂಕಿನಲ್ಲಿ ಕೊರೋನಾದಿಂದ ಸುಮಾರು 69 ಜನ ಬಲಿಯಾಗಿದ್ದಾರೆ. ತಾಲೂಕಿನಲ್ಲಿ 69 ಜನರ ಅರ್ಜಿಗಳ ಪೈಕಿ ಇದುವರೆಗೆ ಕೇವಲ 29 ಅರ್ಜಿಗಳನ್ನು ಮಾತ್ರ ತಾಲೂಕು ಆಡಳಿತವು ಆನ್‌ಲೈನ್ ಮೂಲಕ ಪರಿಹಾರಕ್ಕೆ(Compensation)ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದೆ. ಅದರಲ್ಲಿ 18 ಬಿಪಿಎಲ್(BPL) ಕುಟುಂಬ ಹಾಗೂ 11 ಎಪಿಎಲ್(APL) ಕುಟುಂಬಗಳ ಮಾಹಿತಿ ಇದೆ. ಉಳಿದ 40 ಕುಟುಂಬಗಳ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸರ್ಕಾರಕ್ಕೆ ಹೋಗಿಲ್ಲ. ಇದರಿಂದ ಆ ಕುಟುಂಬಗಳಿಗೆ ಪರಿಹಾರ ದೊರೆಯುವುದು ಕನಸಿನ ಮಾತೆ ಸರಿ.
ಗ್ರಾಪಂ ಗುತ್ತಿಗೆ ನೌಕರರಿಗೂ ಕೋವಿಡ್ ಪರಿಹಾರ: ಸಚಿವ ಈಶ್ವರಪ್ಪ
ಕೋವಿಡ್‌ನಿಂದ(Covid19) ಮೃತಪಟ್ಟಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ(Central Government) ತಲಾ 50 ಸಾವಿರ, ರಾಜ್ಯ ಸರ್ಕಾರ .1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಪರಿಹಾರ ಇನ್ನೂ ದೊರಕದಿರುವುದು ಸಂತ್ರಸ್ತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ. ಕುಟುಂಬಸ್ಥರನ್ನು ಕಳೆದುಕೊಂಡು ದುಃಖ ಒಂದೆಡೆಯಾದರೆ ಪರಿಹಾರದ ಹಣ ಸಿಗುತ್ತದೆ ಎನ್ನುವ ಭರವಸೆಯಲ್ಲಿದ್ದ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೆರವಿಗೆ ಬರಲಿ:
ಕೊರೋನಾದಿಂದ ಮೃತಪಟ್ಟಿರುವ ಕುಟುಂಬಗಳ ಕಷ್ಟ ಪರಿಹರಿಸುವ ಮತ್ತು ಅವರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಸರ್ಕಾರ ಮಾಡಬೇಕಿತ್ತು. ಆದರೆ ರಾಜಕೀಯ(Politics) ತೆವಲಿಗೋಸ್ಕರ ಪೊಳ್ಳು ಭರವಸೆ ನೀಡುವ ಮೂಲಕ ಅಮಾಯಕ ಜನರಿಗೆ ಮೋಸ ಮಾಡುವುದು ಸರಿಯಲ್ಲ. ಅವರ ಶಾಪ ಸುಮ್ಮನೆ ಬಿಡುವುದಿಲ್ಲ. ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಲಕ್ಷ್ಮೇಶ್ವರ ತಾಲೂಕು ಜೆಡಿಎಸ್ ಅಧ್ಯಕ್ಷ ಪದ್ಮರಾಜ ಪಾಟೀಲ ಆಗ್ರಹಿಸಿದರು.
ಜಿಲ್ಲಾಡಳಿತಕ್ಕೆ(District Administration) ಕೋವಿಡ್‌ನಿಂದ ಮೃತಪಟ್ಟಿರುವ 69 ವ್ಯಕ್ತಿಗಳ ಸಂಪೂರ್ಣ ಮಾಹಿತಿ ಕಳುಹಿಸಿಕೊಡಲಾಗಿದೆ. ಆದರೆ ಜಿಲ್ಲಾಸ್ಪತ್ರೆಯಿಂದ ಮೃತಪಟ್ಟವರ ಹೆಸರು ಹಾಗೂ ವಿವರವಾದ ಮಾಹಿತಿಯ ಅರ್ಜಿಗಳು
ಆನ್‌ಲೈನ್ ಮೂಲಕ ನಮ್ಮ ಕಚೇರಿಗೆ ಬರುತ್ತವೆ. ಅಂತಹ ಅರ್ಜಿಗಳ ಬಗ್ಗೆ ಮತ್ತೆ ಸರ್ಕಾರಕ್ಕೆ ಕಳುಹಿಸಿ ಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಮೃತಪಟ್ಟಿರುವ ಎಲ್ಲ ಕುಟುಂಬಗಳ ಮಾಹಿತಿ ಜಿಲ್ಲಾಸ್ಪತ್ರೆಯಿಂದ ಇನ್ನೂ ಬಂದಿಲ್ಲ. ಅರ್ಜಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ತಹಸೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.
ಕೊರೋನಾ ಪರಿಹಾರಕ್ಕೆ ಕಠಿಣ ನಿಯಮ ಅಡ್ಡಿ
ಬೆಂಗಳೂರು: ಕೋವಿಡ್‌ನಿಂದ ಕುಟುಂಬದ ಸದಸ್ಯನನ್ನು ಕಳೆದುಕೊಂಡು ಕಣ್ಣೀರಿಡುತ್ತಾ ಸಂಕಷ್ಟದಲ್ಲಿರುವ ಕುಟುಂಬಗಳು ಈಗ ಸರ್ಕಾರ ನೀಡಲಿರುವ ಪರಿಹಾರ ಪಡೆಯಲು ಹರಸಾಹಸ ಪಡಬೇಕಾಗಿದೆ. ಪರಿಹಾರ ಪಡೆಯಲು ಸಲ್ಲಿಸಬೇಕಾದ ದಾಖಲೆಗಳಿಗಾಗಿ ಪಡಿಪಾಟಲು ಎದುರಿಸುತ್ತಿದ್ದಾರೆ. ಸರ್ಕಾರ ವಿಧಿಸಿರುವ ಕಠಿಣ ನಿಯಮಗಳಿಂದಾಗಿ ಮೃತರ ವಾರಸುದಾರರು ಅರ್ಜಿ ಸಲ್ಲಿಸಲು ಹೆಣಗಾಡುವಂತಾಗಿದೆ.
40,000 ಶಾಲಾ ಸಿಬ್ಬಂದಿಗಿಲ್ಲ ಕೋವಿಡ್ ನೆರವು
ರಾಜ್ಯ ಸರ್ಕಾರ(Government of Karnataka) ಕೊರೋನಾದಿಂದ ಮೃತ ವ್ಯಕ್ತಿಯ ಕುಟುಂಬಸ್ಥರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿ ಒಂದು ತಿಂಗಳು ಕಳೆದಿದೆ. ಬಿಬಿಎಂಪಿ(BBMP) ಮಾಹಿತಿ ಪ್ರಕಾರ ಪಾಲಿಕೆಯ ಎಂಟು ವಲಯಗಳಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಈವರೆಗೆ 14,193 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 1878 ಮಾತ್ರ. ಇದಕ್ಕೆ ಸರ್ಕಾರಗಳ ಕಠಿಣ ಮಾರ್ಗಸೂಚಿಗಳೇ(Guidelines) ಕಾರಣವೆನ್ನಲಾಗಿದೆ.
ವ್ಯಕ್ತಿಗೆ ಸೋಂಕು ದೃಢಪಟ್ಟ ನಂತರ ಬಿಯು ಸಂಖ್ಯೆಯನ್ನು ಐಸಿಎಂಆರ್‌ನಲ್ಲಿ(ICMR) ನೋಂದಣಿ ಮಾಡುವುದು ಕಡ್ಡಾಯ. ಆದರೆ, ಕೆಲವರ ಎಸ್‌ಆರ್‌ಎಫ್(SRF) ಅಥವಾ ಬಿಯು(BU)ಸಂಖ್ಯೆಗಳು ಐಸಿಎಂಆರ್‌ನಲ್ಲಿ ನೋಂದಣಿಯಾಗಿಲ್ಲ. ನೋಂದಣಿ ಸಂಖ್ಯೆ ಇಲ್ಲದಿದ್ದರೆ ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಆಗುವುದಿಲ್ಲ. ಪ್ರಯೋಗ ಶಾಲೆಗಳ ಸಿಬ್ಬಂದಿ ಎಸ್‌ಆರ್‌ಎಫ್ (ಬಿಯು) ಸಂಖ್ಯೆಯನ್ನು ಐಸಿಎಂಆರ್‌ನಲ್ಲಿ ಅಪ್‌ಲೋಡ್ ಮಾಡದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ. ಇಂತಹ ನೂರಾರು ಅರ್ಜಿಗಳು ಕಚೇರಿಗಳಲ್ಲಿ ಮೂಲೆ ಸೇರಿವೆ.