ಬೆಳಗಾವಿ(ಡಿ.21): ಮಿಲಿಟರಿ ಅಧಿಕಾರಿಯ ಸೋಗಿನಲ್ಲಿ ಜನರನ್ನು ನಂಬಿಸಿ ಮೋಸ ಮಾಡಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಕ್ಯಾಂಪ್‌ ಠಾಣೆಯ ಪೊಲೀಸರು, ಆತನಿಂದ ಎರಡು ನಕಲಿ ಪಿಸ್ತೂಲ್‌ ಮತ್ತು ದಾಖಲಾತಿ ವಶಕ್ಕೆ ಪಡೆದಿದ್ದಾರೆ.

ಮೂಲತಃ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಹಾಲಿ ಅನಗೋಳದ ನಿವಾಸಿಯಾಗಿರುವ ಸಾಗರ ಪರಶುರಾಮ ಪಾಟೀಲ ಬಂಧಿತ ಆರೋಪಿ. ಮಿಲಿಟರಿ ಭರ್ತಿ ರಾರ‍ಯಲಿ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಸಿಪಿಎಡ್‌ ಮೈದಾನದಲ್ಲಿ ತನ್ನ 5 ಜನ ಗೆಳೆಯರೊಂದಿಗೆ ರನ್ನಿಂಗ್‌ ಪ್ರಾಕ್ಟಿಸ್‌ ಮಾಡುತ್ತಿದ್ದ ವೇಳೆ ಆರೋಪಿಯು ಮಿಲಿಟರಿ ಡ್ರೆಸ್‌ ಹಾಕಿಕೊಂಡು ಆಗಮಿಸಿದ. ಮೈದಾನಕ್ಕೆ ಬಂದು ಕೆಲವು ಯುವಕರಿಗೆ ನಾನು ಮಿಲಿಟರಿ ಅಧಿಕಾರಿಯಾಗಿದ್ದು, ನಿಮಗೆ ನಾನೇ ತರಬೇತಿ ನೀಡುತ್ತೇನೆ. ನಿಮ್ಮನ್ನು ಭರ್ತಿ ಮಾಡಿಸುತ್ತೇನೆ ಎಂದು ಹೇಳಿ ತರಬೇತಿ ನೀಡಿದಂತೆ ನಾಟಕವಾಡಿದ.

ಅಲ್ಲದೇ, ಮಿಲಿಟರಿಯಲ್ಲಿ ಭರ್ತಿಯಾಗಲು ಹಣ ನೀಡಬೇಕು ಎಂದು ದೂರುದಾರರಿಂದ ಅಕ್ಟೋಬರ್‌ 28 ರಂದು 1.10 ಲಕ್ಷ ಪಡೆದಿದ್ದ. ಜತೆಗೆ ಇನ್ನೂ ಕೆಲವು ಯುವಕರಿಂದಲೂ ಹಣವನ್ನು ವಸೂಲಿ ಮಾಡಿದ್ದ. ಆದರೆ, ಯಾರೊಬ್ಬರನ್ನು ಮಿಲಿಟರಿಯಲ್ಲಿ ಭರ್ತಿ ಮಾಡದೇ, ಹಣವನ್ನು ಮರಳಿ ನೀಡದೇ ಮೋಸ ಮಾಡಿದ್ದ. ತಾನು ಮಿಲಿಟರಿ ಅಧಿಕಾರಿಯೆಂದು ನಟಿಸುತ್ತಿದ್ದ. ಈತನಿಂದ ಮೋಸ ಹೋದ ಯುವಕರು ಕ್ಯಾಂಪ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹಣ ಪಡೆದುಕೊಂಡಿದ್ದ ಆರೋಪಿ ಸಾಗರ ಪಾಟೀಲ ತಲೆಮರೆಸಿಕೊಂಡಿದ್ದ. ಖಡೆಬಜಾರ್‌ ಉಪವಿಭಾಗದ ಎಸಿಪಿ ಎ.ಚಂದ್ರಪ್ಪ ಮಾರ್ಗದರ್ಶನದಲ್ಲಿ ಕ್ಯಾಂಪ್‌ ಪೊಲೀಸ್‌ ಠಾಣೆಯ ಪಿಐ ಡಿ.ಸಂತೋಷಕುಮಾರ ನೇತೃತ್ವದಲ್ಲಿ ಸಿಬ್ಬಂದಿ ಬಿ.ಆರ್‌.ಡೂಗ, ಎಂ.ವೈ.ಹುಕ್ಕೇರಿ, ಸಿ.ಎಸ್‌.ಸಿದಗೌಡರ, ಜೆ.ಎಂ.ಮಗದುಮ್ಮ, ಬಿ.ಬಿ.ಗೌಡರ, ಎಂ.ಎ.ಪಾಟೀಲ, ಬಿ.ಎಂ.ಕಲ್ಲಪ್ಪನವರ ಮತ್ತು ಬಿ.ಎಂ. ನರಗುಂದ ಮತ್ತಿತರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಕೆಲವು ಕಾಗದ ಪತ್ರ ಹಾಗೂ 2 ನಕಲಿ ಪಿಸ್ತೂಲ್‌ಗಳನ್ನು ಜಪ್ತಿ ಮಾಡಿದ್ದಾರೆ.