ಬೆಂಗಳೂರು[ಮಾ.02]: ಕಾನ್‌ಸ್ಟೇಬಲ್‌ ಸೋಗಿನಲ್ಲಿ ಮಹಿಳಾ ಹೋಂ ಗಾರ್ಡ್‌ಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ 36 ವರ್ಷದ ಮಹಿಳಾ ಹೋಂ ಗಾರ್ಡ್‌ ಕಮರ್ಷಿಯಲ್‌ ಪೊಲೀಸ್‌ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಿಳೆಯು ನಗರದ ಠಾಣೆಯೊಂದರಲ್ಲಿ ಹೋಂಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನಾ ಸ್ಥಳದ ಬಂದೋಬಸ್ತ್ ಗೆ ಮಹಿಳೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯ ಕಾನ್‌ಸ್ಟೇಬಲ್‌ ಮಹೇಶ್‌ ಎಂಬುವರ ಪರಿಚಯವಾಗಿತ್ತು. ಪರಿಚಯವಾದ 15 ದಿನದ ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ ಕಾನ್‌ಸ್ಟೇಬಲ್‌ ಮಹೇಶ್‌ ಹೆಸರಿನಲ್ಲಿ ಮಹಿಳೆ ಜೊತೆ ಮಾತನಾಡಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ರೀತಿ ಮೂರ್ನಾಲ್ಕು ಬಾರಿ ಮಾತನಾಡಿದ್ದ. ನಂತರ ಮತ್ತೊಂದು ಸಂಖ್ಯೆಯಲ್ಲಿ ಕರೆ ಮಾಡಿದ್ದ ಆರೋಪಿ, ನಾನು ಕಾನ್‌ಸ್ಟೇಬಲ್‌ ಮಹೇಶ್‌ ಸ್ನೇಹಿತ. ‘ನಿನ್ನ ಎಲ್ಲಾ ವಿಷಯ ನನಗೆ ಗೊತ್ತಿದೆ. ನೀನು ಏಕೆ ಮಹೇಶ್‌ ಜೊತೆ ಅಸಭ್ಯವಾಗಿ ವರ್ತಿಸಿ ತೊಂದರೆ ಕೊಡುತ್ತಿದ್ದೀಯಾ. ನಿನ್ನ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇವೆ. ನೀನು ಇನ್ನು ಮುಂದೆ ಇದೇ ರೀತಿ ಮಾಡಿದರೆ ವಿಡಿಯೋ ಮತ್ತು ಪೋಟೋಗಳನ್ನು ನಿನ್ನ ಪತಿ ಮತ್ತು ಕುಟುಂಬದವರಿಗೆ ಕಳುಹಿಸಿ, ನಿನ್ನ ಮಾನ ಹರಾಜು ಹಾಕುತ್ತೇನೆ. ನೀನು ಹಣ ನೀಡಿದರೆ ಸುಮ್ಮನೆ ಆಗುತ್ತೇನೆ’ ಎಂದು ಬೆದರಿಕೆವೊಡ್ಡಿದ್ದ. ಫೆ.16ರಂದು ಕರೆ ಮಾಡಿ ‘ನಾನು ನಿನ್ನ ಭೇಟಿ ಮಾಡಬೇಕು. ಎಲ್ಲಿ ಸಿಗುತ್ತೀಯಾ’ ಎಂದು ಕೇಳಿದ್ದ. ಭೇಟಿಯಾಗಲು ದೂರುದಾರರು ನಿರಾಕರಿಸಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದನು.

ಈ ಸಂಬಂಧ ಮಹಿಳಾ ಹೋಂ ಗಾರ್ಡ್‌ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಕಾನ್ಸ್‌ಟೇಬಲ್‌ ಪಾತ್ರ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೋಂ ಗಾರ್ಡ್‌ಗೆ ಆರೋಪಿ ಕರೆ ಮಾಡಿದ್ದ ಮೊಬೈಲ್‌ ಸಂಖ್ಯೆ ಸ್ವಿಚ್‌ ಆಫ್‌ ಆಗಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು.