ಬೆಳಗಾವಿ[ಜು. 21] ದೂರಾದ ಪತಿಯ ಮನಸ್ಸನ್ನು ಬದಲಿಸುತ್ತೆನೆ ಎಂದು ಹೇಳಿ ಮಹಿಳೆಯಿಂದ ಹಣಪಡೆದಿದ್ದ ಡೋಂಗಿ ಜ್ಯೋತಿಷಿಯನ್ನು ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಬಂಧಿಸಿ, ಆತನಿಂದ 1.30ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮದ ವಿಜಯಕುಮಾರ ರಾಮಣ್ಣಾ ಸುಗತೆ (40) ಬಂಧಿತ ಡೊಂಗಿ ಜ್ಯೋತಿಷಿ. ದಿನಪತ್ರಿಕೆಗಳಲ್ಲಿ ಬರುವ ಕರ ಪತ್ರದಲ್ಲಿ ಮುದ್ರಿತ ಜೋತಿಷ್ಯನ್ನು ನಂಬಿದ ಬೆಳಗಾವಿ ನಗರದ ಗೃಹಣಿಯೊಬ್ಬರು ಆ ಜೋತಿಷ್ಯಿಯ ಮುಂದೆ ತನಗಾದ ನೋವು ತೋಡಿಕೊಂಡಿದ್ದರು. ಪತಿ ತನ್ನಿಂದ ದೂರಾದ ಬಗ್ಗೆ ತಿಳಿಸಿದ್ದರು.

ಇದನ್ನೇ ಬಂಡವಾಳವಾಗಿಸಿಕೊಂಡ ಜ್ಯೋತಿಷಿ ತನ್ನನ್ನು ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ಸಾಯಿ ದುರ್ಗಾದೇವಿ ಜ್ಯೋತಿಷ್ಯಂ ಪಂಡಿತ ವಿ.ಆರ್. ಗುರೂಜಿ ಎಂದು ಸುಳ್ಳು ವಿವರ ನೀಡಿ, ನೊಂದ ಮಹಿಳೆಯಿಂದ ಪೂಜೆ ಇತ್ಯಾದಿಗಳಿಗಾಗಿ ಹಂತ ಹಂತವಾಗಿ ಸುಮಾರು 2.60 ಲಕ್ಷ ರೂ. ಹಣವನ್ನು ಫೋನ್ ಮುಖಾಂತರ ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಅವಳಿಗೆ ಸುಳ್ಳುಗಳನ್ನು ಹೇಳುತ್ತ ಮೋಸ ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡ ಮಹಿಳೆ ನಗರದ‌ ಎಪಿಎಂಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.