ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ಎರಡೂ ಮನೆಯೊಳಗೆ ಏಕಾಏಕಿ ದೊಡ್ಡ ಸ್ಫೋಟ ಸಂಭವಿಸಿದೆ. ಇದರಿಂದ ಲೈಕಾ ಮತ್ತು ಮುಬಾಶಿರಾ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರು ಕೂಡಲೇ ಮನೆ ಪ್ರವೇಶಿಸಿ ಗಾಯಾಳುಗಳನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬೆಂಗಳೂರು(ಮಾ.17): ಜಲಮಂಡಳಿ ಕಾಮಗಾರಿ ವೇಳೆ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ನ (ಗೇಲ್‌) ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾದ ಪರಿಣಾಮ ಗ್ಯಾಸ್‌ ಸೋರಿಕೆಯಾಗಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಚ್‌ಎಸ್‌ಆರ್‌ ಲೇಔಟ್‌ 2ನೇ ಹಂತದ 23ನೇ ಕ್ರಾಸ್‌ ನಿವಾಸಿಗಳಾದ ಲೈಕಾ ಅಂಜುಂ(46) ಮತ್ತು ಮುಬಾಶಿರಾ(40) ಗಾಯಗೊಂಡವರು. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಈ ಅವಘಡ ನಡೆದಿದೆ. ಇಬ್ಬರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Raichur: ಮನೆಯಲ್ಲಿನ ಎಸಿ ಶಾರ್ಟ್ ಸಕ್ಯೂಟ್ ನಿಂದ ಸ್ಫೋಟ, ಮಂಡ್ಯದ ಮೂವರು ಸಜೀವ ದಹನ

ಇಲ್ಲಿನ ಮದೀನ ಮಸೀದಿ ಬಳಿ ಬೆಂಗಳೂರು ಜಲಮಂಡಳಿಯಿಂದ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಅಗೆಯಲಾಗಿದೆ. ಈ ವೇಳೆ ಗೇಲ್‌ನ ಗ್ಯಾಸ್‌ ಪೈಪ್‌ ಲೈನ್‌ಗೆ ಹಾನಿಯಾಗಿದ್ದು, ಗ್ಯಾಸ್‌ ಸೋರಿಕೆಯಾಗಿದೆ. ಸೋರಿಕೆಯಾದ ಗ್ಯಾಸ್‌ ಸ್ಯಾನಿಟರಿ ಪೈಪ್‌ ಮೂಲಕ ಲೈಕಾ ಅಂಜುಂ ಮತ್ತು ಮುಬಾಶಿರಾ ಅವರ ಮನೆಗೆ ಹರಡಿಕೊಂಡಿದೆ. ಬೆಳಗ್ಗೆ 9.30ರ ಸುಮಾರಿಗೆ ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ಎರಡೂ ಮನೆಯೊಳಗೆ ಏಕಾಏಕಿ ದೊಡ್ಡ ಸ್ಫೋಟ ಸಂಭವಿಸಿದೆ. ಇದರಿಂದ ಲೈಕಾ ಮತ್ತು ಮುಬಾಶಿರಾ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರು ಕೂಡಲೇ ಮನೆ ಪ್ರವೇಶಿಸಿ ಗಾಯಾಳುಗಳನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಎರಡು ಮನೆಗಳಿಗೆ ಹಾನಿ

ಸ್ಫೋಟದಿಂದ ಎರಡೂ ಮನೆಗಳಿಗೆ ಸಾಕಷ್ಟುಹಾನಿಯಾಗಿದೆ. ಮನೆಯ ಪೀಠೋಪಕರಣ, ಅಡುಗೆ ಸಾಮಾಗ್ರಿಗಳು, ಬಟ್ಟೆ, ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಬಹುತೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಫೋಟದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಕಾಮಗಾರಿ ಕೈಗೊಳ್ಳುವ ಮುನ್ನ ಗೇಲ್‌ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಕಾಮಗಾರಿ ವೇಳೆ ಗೇಲ್‌ ಗ್ಯಾಸ್‌ ಪೈಪ್‌ ಲೈನ್‌ಗೆ ಹಾನಿಯಾಗಿ ಗ್ಯಾಸ್‌ ಸೋರಿಕೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿಗೆ ಅನುಮತಿ ಪಡೆದಿಲ್ಲ: ಗೇಲ್‌ ಕಂಪನಿ

ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ ಕಾಮಗಾರಿ ನಡೆಸಲು ಗುತ್ತಿಗೆದಾರ ಗೇಲ್‌ ಸಂಸ್ಥೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಕಾಮಗಾರಿ ವೇಳೆ ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾಗಿ ಗ್ಯಾಸ್‌ ಸೋರಿಯಾದರೂ ಯಾವುದೇ ಮಾಹಿತಿ ನೀಡದೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಫೋಟದ ಸುದ್ದಿ ತಿಳಿದ ಕೂಡಲೇ ಗೇಲ್‌ ಸಂಸ್ಥೆಯ ಕ್ಷಿಪ್ರ ಸ್ಪಂದನಾ ತಂಡ ಹಾಗೂ ಅಗ್ನಿಶಾಮ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಈ ಹಿಂದೆ ಸಹ ಗುತ್ತಿಗೆದಾರರು ಗೇಲ್‌ ಸಂಸ್ಥೆಯ ಅನುಮತಿ ಪಡೆಯದೆ ಇಂತಹ ಘಟನೆಗಳು ನಡೆದಿವೆ. ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಿದ್ದು, ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಗ್ಯಾಸ್‌ ಪೈಪ್‌ಲೈನ್‌ ಬಳಿ ಭೂಮಿ ಅಗೆಯುವ ಕಾಮಗಾರಿ ಕೈಗೊಳ್ಳುವ ಮೊದಲು ಗೇಲ್‌ ಸಂಸ್ಥೆಯ ಪೂರ್ವಾನುಮತಿ ಪಡೆಯಬೇಕು. ಸಂಬಂಧಪಟ್ಟ ಸಂಸ್ಥೆಗಳು ಗುತ್ತಿಗೆದಾರರಿಗೆ ಈ ಸಂಬಂಧ ಸಲಹೆ ನೀಡಬೇಕು. ಗ್ಯಾಸ್‌ ಪೈಪ್‌ಲೈನ್‌ ಬಳಿ ಕಾಮಗಾರಿ ನಡೆಸುವಾಗ ಎಚ್ಚರವಹಿಸಬೇಕು ಎಂದು ಗೇಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.