ನಮ್ಮ ಮೆಟ್ರೋ ಪ್ರಯಾಣಿಕರ ದರ ಏರಿಕೆಯಾಗಿ ತೀವ್ರ ಟೀಕೆ ಎದುರಿಸುತ್ತಿರುವ ವೇಳೆ ಕೆಲ ದಿನಗಳ ಹಿಂದೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ₹5ಕೋಟಿ ಮೊತ್ತದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿರುವುದು.

ಬೆಂಗಳೂರು (ಮಾ.14): ನಮ್ಮ ಮೆಟ್ರೋ ಪ್ರಯಾಣಿಕರ ದರ ಏರಿಕೆಯಾಗಿ ತೀವ್ರ ಟೀಕೆ ಎದುರಿಸುತ್ತಿರುವ ವೇಳೆ ಕೆಲ ದಿನಗಳ ಹಿಂದೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ₹5ಕೋಟಿ ಮೊತ್ತದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿರುವುದು ಪ್ರಶ್ನೆಗೆ ಕಾರಣವಾಗಿದ್ದು, ಬಿಎಂಆರ್‌ಸಿಎಲ್‌ ನೌಕರರ ಸಂಘವು ‘ಅನಗತ್ಯ ಖರ್ಚು’ ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರ ಬಹಿರಂಗವಾಗಿದೆ. ಮೆಟ್ರೋ ತಾಂತ್ರಿಕ ಅಧಿಕಾರಿಗಳ ಬದಲು ಹಣಕಾಸು ವಿಭಾಗದ ಅಧಿಕಾರಿಯೊಬ್ಬರು ತಾಂತ್ರಿಕ ಉಪಕರಣ ತಪಾಸಣೆ ನೆಪದಲ್ಲಿ ಪತ್ನಿ ಜೊತೆ ಜರ್ಮನಿಗೆ ತೆರಳಿದ್ದು, ಬೆಳಕಿಗೆ ಬಂದು ಈಚೆಗಷ್ಟೇ ವಿವಾದವಾಗಿತ್ತು. 

ಇದೀಗ ಹೈ-ಎಂಡೆಡ್‌ ದುಬಾರಿ ಕಾರು ಖರೀದಿ ಮಾಡಿರುವುದನ್ನು ಬಿಎಂಆರ್‌ಸಿಎಲ್‌ ನೌಕರರ ಸಂಘ ಪ್ರಶ್ನಿಸಿದೆ. ದರ ಪರಿಷ್ಕರಣೆಗೂ ಕೆಲ ದಿನಗಳ ಮೊದಲೇ ಸಂಘವು ವ್ಯವಸ್ಥಾಪಕರಿಗೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದೆ. ‘ಬಿಎಂಆರ್‌ಸಿಎಲ್‌ ನಿರ್ದೇಶಕರು, ಕಾರ್ಯನಿರ್ವಾಹಕ ನಿರ್ದೇಶಕರಿಗೆ ಈಚೆಗೆ ಹತ್ತಕ್ಕೂ ಹೆಚ್ಚು ಕಾರು ಖರೀದಿ ಮಾಡಲಾಗಿದೆ. ಎಂಜಿ ಹೆಕ್ಟರ್‌, ಟಾಟಾ ಹ್ಯಾರಿಯರ್‌ ನಂತಹ ಐಷಾರಾಮಿ ಕಾರುಗಳನ್ನು ಖರೀದಿ ಮಾಡಲಾಗಿದೆ. ಇದಕ್ಕೆ ₹5ಕೋಟಿಗೂ ಅಧಿಕ ಖರ್ಚಾಗಿದೆ ಎಂದು ಸಂಘವು ದೂರಿದೆ.

ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ತಮ್ಮ ಐಷಾರಾಮಿತನಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಕಾರುಗಳ ಬಗ್ಗೆ ತನಿಖೆ ನಡೆಸಬೇಕು. ಈ ಬಗ್ಗೆ ಆಂತರಿಕ ತನಿಖೆ ನಡೆಸಬೇಕು. ಜನತೆಯ ಹಣ ನ್ಯಾಯಯುತವಾಗಿ ಬಳಕೆ ಆಗುವಂತೆ ಕ್ರಮ ವಹಿಸಬೇಕು ಎಂದು ಪತ್ರ ಬರೆಯಲಾಗಿದೆ. ಹಿಂದೆ ಬೇರೆ ಕಾರುಗಳಲ್ಲಿ ಸಂಚರಿಸುವಾಗ ವಿಧಾನಸೌಧ ಸೇರಿದಂತೆ ಇತರೆಡೆ ಭದ್ರತಾ ಸಿಬ್ಬಂದಿ ತಡೆಯುತ್ತಿದ್ದರು. ಇದರಿಂದ ತೊಂದರೆ ಆಗುತ್ತಿತ್ತು. ಅನಿವಾರ್ಯವಾಗಿ ಬೇರೆ ಕಾರು ಬೇಕಾಗಿತ್ತು’ಎಂದು ಬಿಎಂಆರ್‌ಸಿಲ್‌ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿರುವುದಾಗಿ ನೌಕರರ ಸಂಘ ಹೇಳಿದೆ.

ಹೊತ್ತಿನ ಊಟಕ್ಕಿಂತಲೂ ಹೆಚ್ಚು ದುಬಾರಿಯಾದ ಮೆಟ್ರೋ ಪ್ರಯಾಣ: ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ನಮಗೆ ಬೋನಸ್ ಕೊಡದ ಸಂಸ್ಥೆ ದುಂದುವೆಚ್ಚ: ದೇಶದ ಇತರೆಡೆಯ ಮೆಟ್ರೋ ಸಂಸ್ಥೆಗಳು ನೌಕರರಿಗೆ ಎಕ್ಸ್‌ ಗ್ರೇಷಿಯಾ ಎಂದು ಬೋನಸ್ ರೀತಿಯ ಮೊತ್ತ ನೀಡುತ್ತವೆ. ಆದರೆ, ಬಿಎಂಆರ್‌ಸಿಎಲ್‌ ನೌಕರರಿಗೆ ಯಾವುದೇ ಕಾರಣ ನೀಡದೆ ಈ ಸೌಲಭ್ಯ ನೀಡುತ್ತಿಲ್ಲ. ಬದಲಾಗಿ ಉನ್ನತ ಮಟ್ಟದ ಅಧಿಕಾರಿಗಳು ತಮಗಿಷ್ಟ ಬಂದಂತೆ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ದೂರಿದ್ದಾರೆ.