ಶಿವಕುಮಾರ ಕುಷ್ಟಗಿ

ಗದಗ [ಡಿ.13]:  2001ರ ಡಿಸೆಂಬರ್‌ 13ರಂದು ಸಂಸತ್‌ ಭವನದ ಮೇಲೆ ಉಗ್ರರು ದಾಳಿ ಮಾಡಿದಾಗ ಅವರ ವಿರುದ್ಧ ಹೋರಾಡಿ, ಸಂಸದರು ಸೇರಿದಂತೆ ಅಪಾರ ಸಂಖ್ಯೆಯ ಜನರ ರಕ್ಷಣೆಯಲ್ಲಿ ಭಾಗಿಯಾಗಿದ್ದ ಯೋಧರೊಬ್ಬರು ಗದಗದಲ್ಲಿ ಖಾಸಗಿ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್‌ ಆಗಿ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

ಸಂಸತ್‌ ಭವನದ ಮೇಲಿನ ದಾಳಿಗೆ 18 ವರ್ಷವಾದ ಹಿನ್ನೆಲೆಯಲ್ಲಿ ಅವರು ತಮ್ಮ ಅಂದಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೂಲತಃ ಗದಗ ತಾಲೂಕಿನ ಹೊಂಬಳ ಗ್ರಾಮದ ನಿವಾಸಿಯಾದ ಶಿವಪುತ್ರಪ್ಪ ಬಾರಕೇರ ಅವರು ಉಗ್ರರ ವಿರುದ್ಧ ಹೋರಾಡಿದ ಯೋಧರಾಗಿದ್ದಾರೆ. ಇವರು, ಸಿಆರ್‌ಪಿಎಫ್‌ನಲ್ಲಿ ಯೋಧರಾಗಿ 1984ರಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. 2001ರ ಡಿಸೆಂಬರ್‌ 13ರಂದು ಉಗ್ರರು ಪಾರ್ಲಿಮೆಂಟ್‌ ಮೇಲೆ ದಾಳಿ ಮಾಡಿದ್ದಾಗ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಶಿವಪುತ್ರಪ್ಪ ಅವರು 12 ಗಂಟೆಗಳ ಕಾಲ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಉಗ್ರರನ್ನು ಸದೆಬಡಿಯಲಾಗಿತ್ತು. ಒಟ್ಟು 17 ಜನರಿಗೆ ಗುಂಡುಗಳು ತಾಕಿದ್ದವು ಎಂದು ತಮ್ಮ ಹೋರಾಟವನ್ನು ಶಿವಪುತ್ರಪ್ಪ ಮೆಲುಕು ಹಾಕಿದರು.

5 ಗುಂಡು ಬಿದ್ದಿತ್ತು:

ಉಗ್ರರರೊಂದಿಗೆ ನಿರಂತರವಾಗಿ ನಡೆದ ಹೋರಾಟದಲ್ಲಿ ಸೈನಿಕ ಶಿವಪುತ್ರಪ್ಪ ಅವರ ಬಲಗೈ, ಎಡಗಾಲು ಹಾಗೂ ಬೆನ್ನಿಗೆ ಸೇರಿದಂತೆ ಒಟ್ಟು 5 ಗುಂಡುಗಳು ತಗಲಿದ್ದವು. ಆದರೂ, ವಿಚಲಿತರಾಗದೇ ಉಗ್ರರೊಂದಿಗೆ ಹೋರಾಡಿದ್ದಾರೆ. 120 ಗುಂಡುಗಳನ್ನು ಫೈರಿಂಗ್‌ ಮಾಡಿದ್ದರು. ಅಂದು ಕಾಲಿಗೆ ಗುಂಡು ಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಓಡಲು ಆಗುವುದಿಲ್ಲ.

ನನಗೆ ಸರ್ಕಾರದಿಂದ ಸಿಗಬೇಕಿದ್ದ ಎಲ್ಲ ಸೌಲಭ್ಯಗಳೂ ಲಭಿಸಿವೆ. ಮನೆಯಲ್ಲಿ ಸುಮ್ಮನೆ ಇರಬೇಕೆಂಬ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವುದಾಗಿ ಶಿವಪುತ್ರಪ್ಪ ತಿಳಿಸಿದ್ದಾರೆ.

ಸಂಸತ್‌ ಮೇಲೆ ಅಂದು ನಡೆದ ದಾಳಿ ನೆನಪಿಸಿಕೊಂಡರೆ ಇಂದಿಗೂ ಆಕ್ರೋಶ ಉಕ್ಕಿ ಬರುತ್ತದೆ. ಸಂಸತ್‌ ಮೇಲೆ ದಾಳಿ ಮಾಡಲು ಬಂದಾಗ ಅವರೊಂದಿಗೆ ನಡೆದ ಹೋರಾಟದಲ್ಲಿ ನಾನು ಭಾಗಿಯಾಗಿದ್ದೆ ಎನ್ನುವುದೇ ಹೆಮ್ಮೆಯ ವಿಷಯ. ಸೇನೆಯಿಂದ 2010ರಲ್ಲಿಯೇ ನಿವೃತ್ತಿಯಾಗಿ ಬಂದಿದ್ದೇನೆ. ಕಾಲಿಗೆ ಗುಂಡು ಬಿದ್ದ ಹಿನ್ನೆಲೆಯಲ್ಲಿ ಓಡಲು ಆಗುವುದಿಲ್ಲ, ನಡೆಯಲು ಯಾವುದೇ ತೊಂದರೆ ಇಲ್ಲ.

-ಶಿವಪುತ್ರಪ್ಪ ಬಾರಕೇರ, ಸಿಆರ್‌ಪಿಎಫ್‌ ಮಾಜಿ ಯೋಧ