ಬೆಂಗಳೂರು (ಮಾ.30):   ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್‌ ಅವರನ್ನು ವರ್ಗಾವಣೆ ಮಾಡಿದ್ದ ಪ್ರಕರಣವನ್ನು ನಾಗರಿಕ ಸೇವಾ ಮಂಡಳಿಗೆ (ಸಿಎಸ್‌ಬಿ) ವರ್ಗಾವಣೆ ಮಾಡಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ಆಡಳಿತಾತ್ಮಕ ಸದಸ್ಯ ರಾಕೇಶ್‌ ಕುಮಾರ್‌ ಗುಪ್ತಾ ಮತ್ತು ನ್ಯಾಯಾಂಗ ಸದಸ್ಯ ಸುರೇಶ್‌ ಕುಮಾರ್‌ ಮೊಂಗ ಅವರಿದ್ದ ಪೀಠ, ಈ ಆದೇಶ ನೀಡಿದೆ.

ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ, ಸಿಎಸ್‌ಬಿ ಶಿಫಾರಸ್ಸಿನಂತೆ ಸಕ್ಷಮ ಪ್ರಾಧಿಕಾರವು ಶರತ್‌ ವರ್ಗಾವಣೆ ಆದೇಶವನ್ನು ಮರು ಪರಿಶೀಲನೆ ಮಾಡಿ, ಮುಂದಿನ ಒಂದು ತಿಂಗಳ ಒಳಗಾಗಿ ಸೂಕ್ತ ಆದೇಶ ಪ್ರಕಟಿಸಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಹೆಣ್ಣಾಗಿ ಹುಟ್ಟಿ ಬದುಕುವುದೇ ದೊಡ್ಡ ಸವಾಲು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಕಳೆದ ವರ್ಷ ಆಗಸ್ಟ್‌ 28ಕ್ಕೆ ಮೈಸೂರು ಜಿಲ್ಲಾ​ಧಿಕಾರಿ ಹುದ್ದೆಗೆ ನಿಯೋಜಿಸಿದ ತಮ್ಮನ್ನು ಸಕಾರಣ ನೀಡದೆ ಸೆ.28ಕ್ಕೆ ಸರ್ಕಾರ ವರ್ಗಾವಣೆ ಮಾಡಿದೆ. ರೋಹಿಣಿ ಸಿಂಧೂರಿಯವರಿಗೆ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡುವ ಉದ್ದೇಶದಿಂದ ಏಕಾಏಕಿ ವರ್ಗಾಯಿಸಲಾಗಿದೆ. ಇದು ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದ್ದು, ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿ ಬಿ.ಶರತ್‌ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು.