Asianet Suvarna News Asianet Suvarna News

ಮತದಾನದ ಹಕ್ಕು ಎಲ್ಲರಿಗೂ ದೊರೆಯಬೇಕು

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ತಿದ್ದುಪಡಿ ವೇಳೆ ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮೇಜರ್ ಮಣಿವಣ್ಣನ್ ಪಿ. ಅವರು ಸೂಚಿಸಿದರು.

Everyone should have the right to vote snr
Author
First Published Dec 4, 2023, 11:01 AM IST

 ತುಮಕೂರು :  ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ತಿದ್ದುಪಡಿ ವೇಳೆ ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮೇಜರ್ ಮಣಿವಣ್ಣನ್ ಪಿ. ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- 2024 ರ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಹ ಮತದಾರರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ದೊರೆಯಲು ಅವಕಾಶ ಕಲ್ಪಿಸಬೇಕು.

ಅನರ್ಹ ಮತದಾರರನ್ನು ಪಟ್ಟಿಯಿಂದ ಆಯೋಗದ ನಿಯಮಾನುಸಾರ ಕೈಬಿಡಬೇಕು.

ಒಬ್ಬ ಮತದಾರ ಎರಡು ಕಡೆ ನೋಂದಾಯಿತನಾಗಿದ್ದರೆ ಚುನಾವಣಾ ತಂತ್ರಾಂಶದ ಮೂಲಕ ರಾಷ್ಟ್ರಮಟ್ಟದಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಎರಡು ಕಡೆ ನೋಂದಾಯಿತವಾಗಿರುವ, ಮೃತ ಹಾಗೂ ವರ್ಗಾವಣೆಗೊಂಡ ಮತದಾರರನ್ನು ಕೈಬಿಟ್ಟು ನಿಖರ ಮತದಾರರ ಪಟ್ಟಿ ಪರಿಷ್ಕರಿಸುವಂತೆ ಸೂಚಿಸಿದರು.

ಪ್ರಶಂಸನಾ ಪತ್ರ: ಮತದಾರರ ಸೇರ್ಪಡೆ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ, ಹೆಸರು ತೆಗೆದು ಹಾಕುವಿಕೆ, ಮತದಾರರ ನಿವಾಸ ಬದಲಾವಣೆ, ಪ್ರಸ್ತುತ ಮತದಾರರ ನಮೂದು ತಿದ್ದುಪಡಿ, ಯಾವುದೇ ತಿದ್ದುಪಡಿ ಇಲ್ಲದೆ ಬದಲಿ ಎಪಿಕ್ ನೀಡುವಿಕೆ, ಮೊದಲಾದ ಚುನಾವಣೆ ಕರ್ತವ್ಯ ನಿರ್ವಹಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ನೌಕರರನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡುವಂತೆ ಸೂಚಿಸಿದರು.

ನಾಗರಿಕರಿಗೆ ಕರೆ: ಮತದಾರರ ಸಹಾಯವಾಣಿ ೦೮೧೬-೧೯೫೦ಗೆ ಜಿಲ್ಲೆಯ ಸಾರ್ವಜನಿಕರು ಕರೆ ಮಾಡಿ ದಾಖಲಿಸಿರುವ ಮತದಾರರ ಪಟ್ಟಿ ದೂರುಗಳ ಪರಿಶೀಲಿಸಿದ ಅವರು, ಕೊರಟಗೆರೆ ಕ್ಷೇತ್ರದ ಪಾರತಮ್ಮ, ಕುಣಿಗಲ್‌ನ ವೆಂಕಟೇಶ್, ವಿನಯ್ ಸೇರಿದಂತೆ ವಿವಿಧ ಮತದಾರರಿಗೆ ಕರೆ ಮಾಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಮನೆ ವಿಳಾಸದಲ್ಲಿ ವಾಸವಿಲ್ಲದ ಮತದಾರರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಗುರುತಿಸಿ ಪರಿಷ್ಕರಣೆ ನಡೆಸಬೇಕು ಹಾಗೂ ಪಕ್ಷಗಳ ಪರವಾಗಿ ಗುರುತಿಸಿಕೊಂಡು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ವರ್ಗಾವಣೆಗೊಳಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ 1123062 ಪುರುಷ ಮತದಾರರು, 113016 ಮಹಿಳಾ ಮತದಾರರು ಹಾಗೂ ಇತರೆ 104 ಸೇರಿದಂತೆ ಒಟ್ಟು 2255182 ಮತದಾರರಿದ್ದು, ಇ-ಜನ್ಮ ತಂತ್ರಾಂಶ ಆಧರಿಸಿ ಜಿಲ್ಲೆಯಲ್ಲಿ ಮರಣ ಹೊಂದಿದ 1,32,000 ಮತದಾರರಲ್ಲಿ ಈಗಾಗಲೇ 1,೦೦,೦೦೦ ಮತದಾರರನ್ನು ಕೈಬಿಟ್ಟಿದ್ದು, ಬಾಕಿ 32,೦೦೦ ಮೃತ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಅಗತ್ಯ ಕ್ರಮವಹಿಸಲಾಗಿದೆ. ಹೊಸ ಎಪಿಕ್ ಕಾರ್ಡ್‌ಗಳ ಮುದ್ರಣ ಮುಗಿದಿದ್ದು, ಅವುಗಳನ್ನು ರವಾನಿಸಲಾಗುತ್ತಿದೆ ಎಂದರು.

ಪಾಲಿಕೆ ಆಯುಕ್ತೆ ಅಶ್ವಿಜ, ಜಿ.ಪಂ. ಉಪಕಾರ್ಯದರ್ಶಿ ಹಾಲ ಸಿದ್ಧಪ್ಪ ಪೂಜೇರಿ, ತಹಸೀಲ್ದಾರ್ ಸಿದ್ದೇಶ್, ಚುನಾವಣಾ ತಹಸೀಲ್ದಾರ್ ಗೌರಮ್ಮ, ಕೊರಟಗೆರೆ ತಾಪಂ ಇಒ ಅಪೂರ್ವ ಸಿ. ಅನಂತರಾಮು, ಕಾಂಗ್ರೆಸ್ ಪಕ್ಷದ ಸುಜಾತ, ಟಿ.ಎ.ಮಹೇಶ್, ಕಮ್ಯೂನಿಸ್ಟ್ ಪಕ್ಷದ ಎನ್.ಕೆ.ಸುಬ್ರಮಣ್ಯ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾ. ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪ರ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಜರ್ ಮಣಿವಣ್ಣನ್ ಮಾತನಾಡಿದರು.

Latest Videos
Follow Us:
Download App:
  • android
  • ios