ಬದುಕು ಕಷ್ಟಕರ ಎನಿಸಿದರೂ ಮೇದಾರರ ವೃತ್ತಿ ನಿರಂತರ
ಜೀವನ ಎಂದ ಮೇಲೆ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ಸಮಸ್ಯೆ ಸಹಜ. ಈ ಎಲ್ಲಾ ಸಮಸ್ಯೆಯನ್ನು ಎದುರಿಸುವೆವು ಎಂಬ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುವುದು ವೃತ್ತಿ
ಮೈಸೂರು : ಜೀವನ ಎಂದ ಮೇಲೆ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ಸಮಸ್ಯೆ ಸಹಜ. ಈ ಎಲ್ಲಾ ಸಮಸ್ಯೆಯನ್ನು ಎದುರಿಸುವೆವು ಎಂಬ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುವುದು ವೃತ್ತಿ.
ಇಂತಹ ಆತ್ಮವಿಶ್ವಾಸ ತುಂಬುವ ಎಷ್ಟೋ ವೃತ್ತಿಗಳು ಅಳಿವಿನಂಚಿನಲ್ಲಿದ್ದರೂ, ಈಗಲೂ ಕೆಲವೇ ಕೆಲವು ವೃತ್ತಿಗಳು ಬದುಕುಳಿದಿವೆ. ಇದಕ್ಕೆ ಮೈಸೂರಿನ (Mysuru) ನಂಜುಮಳಿಗೆಯಲ್ಲಿರುವ ಮೇದಾರರೇ ಸಾಕ್ಷಿ. ಮನೆಯ ಅಂಗಳದಲ್ಲಿ ನಡೆಯುತ್ತಿದ್ದ ವೃತ್ತಿ, ಈಗ ಬೀದಿ ಬದಿಗೆ ಬಂದಿದೆ.
ಒಂದು ಸಾರಿ ನಂಜುಮಳಿಗೆಯನ್ನು (Market ) ಸುತ್ತಿದರೆ ಸಾಕು ಹಲವಾರು ರೀತಿಯ ವ್ಯಾಪಾರ ವೃತ್ತಿಗಳನ್ನು ನೋಡುತ್ತೇವೆ. ಅದರಲ್ಲಿ ಕೆಲವರ ವ್ಯಾಪಾರ ಭರದಿಂದ ಸಾಗಿದರೆ ಇನ್ನು ಕೆಲವು ಅಂಗಡಿಗಳು ರಸ್ತೆ ಬದಿಯಲ್ಲಿ ತೆರೆದಿರುತ್ತವೆ. ಕೆಲವು ಅಂಗಡಿಗಳಲ್ಲಿ ಸದಾ ಜನ ತುಂಬಿದ್ದರೆ, ಮತ್ತೆ ಕೆಲವು ಅಂಗಡಿಗಳು ವ್ಯಾಪಾರಿಗಳು ಹಣೆಗೆ ಕೈ ಹಚ್ಚಿ ಕುಳಿತಿರುತ್ತಾರೆ.
ಇಂತಹವರ ಪೈಕಿ ಚಾಪೆ, ಮೊರ, ಪೊರಕೆ ಮಾಡುವ ತಲೆಮಾರುಗಳ ಇತಿಹಾಸ ಹೊಂದಿರುವ ಮೇದಾರರೇ ಹೆಚ್ಚು. ಮೊರ, ಚಾಪೆ ಮಾಡಲು ಬಿದುರಿನ ಬಂಬುಗಳನ್ನು ಕಚ್ಚಾ ವಸ್ತುವಾಗಿ ಬಳಸುತ್ತಾರೆ. ಅದು ಕೂಡ ದೊರೆಯುವುದು ಕಷ್ಟವಾಗಿದೆ. ಪ್ರತಿ ಬಿದುರಿನ ಬಂಬಿಗೆ . 600 ರಿಂದ 700 ವೆಚ್ಚವಾಗುತ್ತದೆ. ಅದನ್ನು ಬಳಸಿ ಮೊರ, ಚಾಪೆ ಮಾಡುವುದಕ್ಕೆ ಸುಮಾರು 3 ದಿನಗಳ ಕಾಲ ತೆಗೆದುಕೊಳ್ಳಲಾಗುತ್ತದೆ.
ಈ ಎಲ್ಲಾ ವಸ್ತುಗಳು ಮಾರುಕಟ್ಟೆಬರುತ್ತವೆ. ಮಾರುಕಟ್ಟೆಯಲ್ಲಿ ಜನ ಇದರ ಹತ್ತಿರ ಸುಳಿಯುವುದು ವಿರಳ. ದೊಡ್ಡ ಪ್ರಮಾಣದಲ್ಲಿ ನಡೆದ ಸ್ವದೇಶಿ ಆಂದೋಲನಗಳು ಆ ಕಾಲಕ್ಕೆ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದವು. ಏಕೆಂದರೆ ವಿದೇಶಿ ವಸ್ತುಗಳ ಆಕರ್ಷಣೆಯ ಮುಂದೆ ಸ್ವದೇಶಿ ವಸ್ತುಗಳು ನಲುಗುವುದಕ್ಕೆ ಇದು ಉದಾಹರಣೆ. ಇದು ವಿಪರ್ಯಾಸವೂ ಹೌದು. ಅದರಲ್ಲೂ ಆರಂಭದಲ್ಲಿ ಮನೆಯಲ್ಲಿಯೇ ಮೊರ, ಚಾಪೆ ತಯಾರಿಸಿ ಮಾರುತ್ತಿದ್ದ ವ್ಯಾಪಾರಿಗಳು ವ್ಯಾಪಾರವಿಲ್ಲದೆ ರಸ್ತೆ ಬದಿಗೆ ಬಂದಿದ್ದಾರೆ. ದಿನಕ್ಕೆ ಒಂದೋ, ಎರಡೋ ಚಾಪೆ ಅಥವಾ ಮೊರ ಮಾರಾಟವಾಗುತ್ತದೆ ಎಂಬ ಭರವಸೆಯಲ್ಲಿ ನೆಲೆಯೂರಿದ್ದಾರೆ.
ಮೇದಾರರ ಬದುಕಿಗೆ ಪ್ಲಾಸ್ಟಿಕ್ ವಸ್ತುಗಳೇ ಮಾರಕ
ಇತ್ತೀಚಿನ ದಿನ ಕಳೆದೆಂತೆಲ್ಲಾ ವಿದ್ಯಾವಂತರಾದರೂ ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳನ್ನು ಅರಿತರೂ ಅದರ ಮೊರೆಯನ್ನೇ ಹೊಗುತ್ತಿದ್ದಾರೆ. ಪ್ಲಾಸ್ಟಿಕ ಹೂವು, ಬುಟ್ಟಿಮತ್ತು ಚಾಪೆಯ ಮುಂದಿ ಬಿದಿರಿನ ಸ್ವದೇಶಿ ಚಾಪೆಗಳು, ಮೊರಗಳು ಮಾಸಿ ಹೋಗುತ್ತಿವೆ. ಇದು ಕೂಡ ಮೇಧಾರರ ಸ್ವದೇಶಿ ಉತ್ಪನ್ನದ ಮಾರಾಟದ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಬಹುದು.
ವೃತ್ತಿ ಬದಲಿಸುತ್ತಿರುವ ಮೇದಾರರು
ವ್ಯಾಪಾರವಿಲ್ಲದೆ ತಮ್ಮ ವೃತ್ತಿಯನ್ನು ಬಿಟ್ಟು ಬೇರೆ ಕೆಲಸಗಳತ್ತ ಮೇದಾರರು ವಾಲುತ್ತಿದ್ದಾರೆ. ಆದ್ದರಿಂದ ಇವತ್ತಿನ ದಿನಮಾನಗಳಲ್ಲಿ ಕೆಲವೊಂದು ವೃತ್ತಿಗಳು ಬರಿ ವೃತ್ತಿಗಳಾಗಿಲ್ಲ. ನಮ್ಮ ಜೀವನದ ಸಂಸ್ಕೃತಿಗಳಾಗಿವೆ. ಅವಿಭಾಜ್ಯ ಅಂಗಗಳಾಗಿವೆ. ಆದ್ದರಿಂದ ಸಮಾಜವು ಮುಂದಿನ ಪೀಳಿಗೆಗಾಗಿ ಈ ಸಂಸ್ಕೃತಿಯ ಉಳಿವಿಗಾಗಿ, ಬೆಳವಣಿಗಗಾಗಿ ಇದರ ಬೆನ್ನಿಗೆ ನಿಲ್ಲಬೇಕಿದೆ.
ಇಂತಿಷ್ಟುಸಮಸ್ಯಗಳ ನಡುವೆ ತಮ್ಮ ವೃತ್ತಿಯನ್ನೇ ಅನುಸರಿಸುತ್ತ ದೇವರು ಇಟ್ಟಂತೆ ಆಗಲಿ ಎಂದು ಜೀವನದ ಆಟದಲ್ಲಿ ಇನ್ನು ಸ್ವಲ್ಪ ಜನ ಮೆದಾರರು ದಿನ ಸವೆಸುತ್ತಿದ್ದಾರೆ. ಇದೆಲ್ಲದರ ನಡುವೆ ಒಂದಲ್ಲಾ ಒಂದು ದಿನ ನಮ್ಮ ವೃತ್ತಿ ಕೈ ಹಿಡಿದೇ ಹಿಡಿಯುತ್ತದೆ ಎಂಬ ಅಚಲ ನಂಬಿಕೆಯಲ್ಲಿ ದೃಢವಾದ ಆತ್ಮವಿಶ್ವಾಸದಲ್ಲಿ ದಿನಕಳೆಯುತ್ತಿದ್ದಾರೆ.
ಹೊರಗಡೆಯಿಂದ ಬೇಗ ಕಚ್ಚಾ ಸಾಮಗ್ರಿಗಳು ದೊರೆಯುವುದಿಲ್ಲ. ದೊರೆತರೂ ಚೆನ್ನಾಗಿ ವ್ಯಾಪಾರ ನಡೆಯುತ್ತಿಲ್ಲ. ತಲೆಮಾರುಗಳಿಂದ ಈ ವೃತ್ತಿಯನ್ನು ಮಾಡುಕೊಂಡಿದ್ದೇವೆ ಎಂಬ ಕಾರಣಕ್ಕೆ ಏನಾದ್ರೂ ಆಗಲಿ ಅಂತ ಈ ವೃತ್ತಿಯನ್ನೇ ಮಾಡುತ್ತಿದ್ದೇನೆ. ಇಷ್ಟಸಂಕಷ್ಟದಲ್ಲಿದರು ಯಾವ ಸರ್ಕಾರವಾಗಲಿ ನಮ್ಮ ಬವಣೆ ಕೇಳುತ್ತಿಲ್ಲ. ನಮಗೆ ಸ್ಪಂದಿಸುತ್ತಿಲ್ಲ.
- ಮರಿಯಕ್ಕ, ಬಿದುರಿನ ಚಾಪೆ, ಮೊರಗಳ ವ್ಯಾಪಾರಿ
ಸರ್ಕಾರಗಳು ಇವತ್ತು ಸ್ವದೇಶಿ ವಸ್ತುಗಳ ಮಾರಾಟಕ್ಕೆ ಅಂತಾನೆ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಆ ಕಾರ್ಯಕ್ರಮಗಳು ಹೆಸರಿಗಷ್ಟೆ. ನಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೋತಿವೆ. ಅದಕ್ಕಾಗಿಯೇ ಇಂದು ಸ್ವದೇಶೀ ವೃತ್ತಿಗಳು ಮರೆಯಾಗುತ್ತಿವೆ.
- ಸಿದ್ದಣ್ಣ, ವ್ಯಾಪಾರಿ