Mandya: ಕಾಮಗಾರಿ ಹೆಸರಿನಲ್ಲಿ ಬೆಟ್ಟಗುಡ್ಡಗಳ ಬಗೆದು ಪರಿಸರ ನಾಶ
ಕಾಮಗಾರಿ ಹೆಸರಿನಲ್ಲಿ ತಾಲೂಕಿನ ಹಲವು ಬೆಟ್ಟಗುಡ್ಡಗಳ ಒಡಲನ್ನು ಬಗೆದು ಗುತ್ತಿಗೆದಾರರು ಪರಿಸರ ನಾಶದಲ್ಲಿ ತೊಡಗಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ವಹಿಸದೆ ಮೌನವಾಗಿದೆ.
ಕೆ.ಆರ್.ಪೇಟೆ (ಜ.01): ಕಾಮಗಾರಿ ಹೆಸರಿನಲ್ಲಿ ತಾಲೂಕಿನ ಹಲವು ಬೆಟ್ಟಗುಡ್ಡಗಳ ಒಡಲನ್ನು ಬಗೆದು ಗುತ್ತಿಗೆದಾರರು ಪರಿಸರ ನಾಶದಲ್ಲಿ ತೊಡಗಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ವಹಿಸದೆ ಮೌನವಾಗಿದೆ. ತಾಲೂಕಿನ ಹೊಸಹೊಳಲು ಚಿಕ್ಕಕೆರೆ ಪ್ರವಾಸಿ ತಾಣವನ್ನಾಗಿಸುವ ಸಲುವಾಗಿ 10 ಕೋಟಿ ರು. ವೆಚ್ಚದಲ್ಲಿ ಕೆರೆಯ ಒಡಲಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಕೆರೆ ಕಾಮಗಾರಿಗೆ ಅಗತ್ಯವಾದ ಮಣ್ಣನ್ನು ಪರಿಸರಕ್ಕೆ ಧಕ್ಕೆಯಾಗದಂತೆ ಗುತ್ತಿಗೆದಾರರು ಖಾಸಗಿ ವ್ಯಕ್ತಿಗಳ ಜಮೀನಿನಿಂದ ಖರೀದಿಸಿ ತರಬೇಕು.
ಸರ್ಕಾರಿ ಭೂಮಿಯಾದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆಗಳಿಂದ ಅನುಮತಿ ಪಡೆದು ನಿಯಮಾನುಸಾರ ಪ್ರತಿ ಟನ್ ಮಣ್ಣಿಗೆ ರಾಜಧನ ಪಾವತಿಸಿ ಮಣ್ಣಿನ ಗಣಿಗಾರಿಕೆ ನಡೆಸಿ ಕಾಮಗಾರಿ ಸ್ಥಳಕ್ಕೆ ಅಗತ್ಯವಾದ ಮಣ್ಣು ತರಬೇಕು. ಆದರೆ ತಾಲೂಕಿನಲ್ಲಿ ಇದ್ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ. ಕೆರೆ ಕಟ್ಟೆಗಳ ಕಾಮಗಾರಿಗಾಗಿ ಗುತ್ತಿಗೆದಾರರು ನಡೆಸುತ್ತಿರುವ ಪರಿಸರ ಲೂಟಿಯನ್ನು ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಿದ್ದಾರೆ.
ಬಿಜೆಪಿ ನೆಲೆ ವಿಸ್ತರಣೆಗೆ ರಣತಂತ್ರ: ಗೃಹ ಸಚಿವ ಅಮಿತ್ ಶಾ
ಚಿಕ್ಕಕೆರೆ ಒಡಲಿನಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡಿ ಕೆರೆಯೊಳಗೆ ನಡುಗಡ್ಡೆಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯ ಒಡಲಿನಲ್ಲಿ ಕೃತಕ ನಡುಗೆಡ್ಡೆಗಳನ್ನು ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಮತ್ತು ವಿಹಾರ ತಾಣವನ್ನಾಗಿಸುವುದು ಕೆರೆ ಕಾಮಗಾರಿ ಯೋಜನೆ ಉದ್ದೇಶ. ಹೊಸಹೊಳಲು ಕೆರೆ ಕಾಮಗಾರಿಗಳಲ್ಲದೆ ಅತಿವೃಷ್ಠಿಯಿಂದ ಹಾನಿಗೀಡಾದ ಕೆರೆಗಳ ಪುನರ್ ನಿಮಾಣ ಕಾಮಗಾರಿಗಳು ಕೆಲವು ಕಡೆ ನಡೆಯುತ್ತಿವೆ.
ಈಗಾಗಲೇ ಹಲವು ಬೆಟ್ಟಗಳು ನಾಶ: ಕೆರೆ ಕಾಮಗಾರಿಗಾಗಿ ಗುತ್ತಿಗೆದಾರರು ಈಗಾಗಲೇ ಪಟ್ಟಣದ ಹೊರವಲಯದ ಹೊಸಹೊಳಲು ಪಕ್ಕದ ಬೆಟ್ಟಸಾಲು, ಕೊಮ್ಮೇನಹಳ್ಳಿ ಬಳಿ ಜಲಸೂರು ಹೈವೇಗೆ ಹೊಂದಿಕೊಂಡಂತಿರುವ ಬೆಳ್ಳಿ ಬೆಟ್ಟದ ಸಾಲಿನ ಬೆಟ್ಟದ ಒಡಲನ್ನು ದೊಡ್ಡ ದೊಡ್ಡ ಜೆಸಿಬಿ, ಇಟಾಚಿ ಯಂತ್ರಗಳ ಮೂಲಕ ದೋಚಿದ್ದಾರೆ. ನೂರಾರು ಟಿಪ್ಪರ್‌ಗಳ ಮೂಲಕ ಬೆಟ್ಟದ ಮಣ್ಣನ್ನು ದೋಚಿ ಬೆಟ್ಟದ ಬುಡವನ್ನೆ ನಾಶಪಡಿಸಲಾಗಿದೆ. ಅದೇ ರೀತಿ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಪಕ್ಕದ ಗುಡ್ಡವನ್ನು ದೋಚಲು ಗುತ್ತಿಗೆದಾರರು ಜೆಸಿಬಿ ಮತ್ತು ಇಟಾಚಿ ಬಳಸಿ ಮಣ್ಣು ತುಂಬಲು ಮುಂದಾಗಿದ್ದಾರೆ.
ತಮ್ಮೂರಿನ ಬೆಟ್ಟವನ್ನು ಅಗೆದು ಮಣ್ಣು ತುಂಬಲು ಹೋಗಿದ್ದ ಯಂತ್ರಗಳನ್ನು ತಡೆದು ನಿಲ್ಲಿಸಿದ ಆದಿಹಳ್ಳಿ ಗ್ರಾಮಸ್ಥರು ಮಣ್ಣು ತುಂಬದಂತೆ ಪ್ರತಿರೋಧ ಒಡ್ಡಿದ್ದಾರೆ. ಇದು ಸರ್ಕಾರಿ ಜಾಗ, ಇಲ್ಲಿ ಮಣ್ಣು ತುಂಬಿದರೆ ನಿಮಗೇನು ಎಂದು ಪ್ರಭಾವಿ ಗುತ್ತಿಗೆದಾರನ ಹೆಸರು ಹೇಳಿ ಜೆಸಿಬಿ ಮತ್ತು ಟಿಪ್ಪರ್ ಚಾಲಕರು ಗ್ರಾಮಸ್ಥರನ್ನೆ ಬೆದರಿಸಲು ಮುಂದಾಗಿರುವ ವೀಡಿಯೂ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗ್ರಾಮಸ್ಥರಿಂದ ಬೆಟ್ಟದ ರಕ್ಷಣೆ: ಜೆಸಿಬಿ ಮತ್ತು ಟಿಪ್ಪರ್ ಚಾಲಕರ ಬೆದರಿಕೆಗೆ ಬಗ್ಗದೆ ಗ್ರಾಮಸ್ಥರು ತಮ್ಮೂರಿನ ಬೆಟ್ಟವನ್ನು ಅಗೆಯಲು ಬಂದಿದ್ದವರನ್ನು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ರಾತ್ರಿ ವೇಳೆ ಗ್ರಾಮಸ್ಥರು ನಿದ್ರೆಗೆ ಜಾರಿದ ವೇಳೆಯಲ್ಲಿ ಗುತ್ತಿಗೆದಾರ ಬೆಟ್ಟಅಗೆಯಲು ಆರಂಭಿಸಿದ್ದಾನೆ. ಇದಕ್ಕಾಗಿ ಎರಡು ಜೆಸಿಬಿ ಯಂತ್ರಗಳು ಮತ್ತು 11 ಟಿಪ್ಪರ್ ಬಳಕೆ ಮಾಡಲಾಗಿದೆ.
ಇದರಿಂದ ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ. ಗ್ರಾಪಂ ಮಾಜಿ ಉಪಾಧ್ಯಕ್ಷೆ ರಾಧಾಶ್ರೀ ನಾಗೇಶ್, ಮಾಜಿ ಸದಸ್ಯ ನಂಜೇಗೌಡ, ಮುಖಂಡರಾದ ಕಾಯಿ ಚಿಕ್ಕೇಗೌಡ, ಎ.ಜೆ.ಮೊಗಣ್ಣ, ಜಯಮ್ಮ ನಾಗೇಶ್ ನೇತೃತ್ವದಲ್ಲಿ ಪ್ರತಿರೊಧ ವ್ಯಕ್ತಪಡಿಸಿ ಮಣ್ಣು ಕಳ್ಳತನವನ್ನು ತಡೆಹಿಡಿದು ತಮ್ಮೂರಿನ ಬೆಟ್ಟದ ರಕ್ಷಣೆಗೆ ಮುಂದಾಗಿದ್ದಾರೆ.
ಮಣ್ಣು ಅಗೆಯಲು ಬೇಕಾದ ಸ್ಥಳವನ್ನು ತಹಸೀಲ್ದಾರರೇ ಖುದ್ದು ಗುರುತು ಮಾಡಿಕೊಟ್ಟಿದ್ದಾರೆ. ಮಣ್ಣು ಅಗೆತದ ಬಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೂ ಮಾಹಿತಿ ನೀಡಲಾಗಿದೆ. ಆದರೆ, ಇದುವರೆಗೆ ಯಾರೂ ಇಲ್ಲಿಗೆ ಬಂದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಆರಂಭಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗುತ್ತಿಗೆದಾರರು ಬೆಟ್ಟಗುಡ್ಡಗಳನ್ನು ಬಗೆದು ಅಮೂಲ್ಯ ಪ್ರಾಕೃತಿಕ ಸಂಪತ್ತು ಹಾಳು ಮಾಡುತ್ತಿದ್ದಾರೆ. ಕಾನೂನು ಮೀರಿ ಬೆಟ್ಟಅಗೆದ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಪರಿಸರ ನಾಶ ಮಾಡುತ್ತಿದ್ದರೂ ತಾಲೂಕು ಆಡಳಿತ, ಪರಿಸರ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸುಮ್ಮನಿವೆ.
ಕಳಸಾ ಬಂಡೂರಿ, ನಾವು ನುಡಿದಂತೆ ನಡೆದುಕೊಂಡಿದ್ದೇವೆ: ಸಿಎಂ ಬೊಮ್ಮಾಯಿ
ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಚಿವರ ಬೆಂಬಲಿತ ಗುತ್ತಿಗೆದಾರರು ಪೂರ್ವಾನುಮತಿ ಇಲ್ಲದೆ ಬೆಟ್ಟಗಳನ್ನು ಅಗೆದಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಪ್ಪುಪಟ್ಟಿಗೆ ಸೇರಿಸಿ, ಕಾಮಗಾರಿ ಬಿಲ್ ತಡೆಹಿಡಿಯಬೇಕು
- ಎಂ.ವಿ.ರಾಜೇಗೌಡ, ರೈತ ಮುಖಂಡರು.
ಕೆ.ಆರ್.ಪೇಟೆ ತಾಲೂಕಿನ ಆದಿಹಳ್ಳಿಯನ್ನು ಗುಡ್ಡದ ಆದಿಹಳ್ಳಿ ಎಂದೇ ಕರೆಯುತ್ತಾರೆ. ಇದು ಬೆಟ್ಟತಿಮ್ಮಪ್ಪನ ಬೆಟ್ಟವಾಗಿದೆ. ನಮ್ಮೂರಿನ ಬೆಟ್ಟದ ಪಾವಿತ್ರ್ಯತೆಯನ್ನು ಮಣ್ಣು ಕಳ್ಳರು ಹಾಳು ಮಾಡಲು ಮುಂದಾಗಿದ್ದಾರೆ. ಇದಕ್ಕೆ ತಹಸೀಲ್ದಾರ್ ಕುಮ್ಮಕ್ಕು ನೀಡಿದ್ದಾರೆ.
- ಆದಿಹಳ್ಳಿ ಮೀನಾಕ್ಷಿ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು.