ಮಯೂರ ಹೆಗಡೆ

ಹುಬ್ಬಳ್ಳಿ(ಏ.24): ಧಾರವಾಡದಲ್ಲಿ ಆಕ್ಸಿಜನ್‌ಗೆ ಸದ್ಯಕ್ಕಿಲ್ಲ ಟೆನ್ಶನ್‌!. ಹಲವೆಡೆ ಕೊರೋನಾ ರೋಗಿಗಳಿಗೆ ಆಕ್ಸಿಜನ್‌ ಕೊರತೆ ಸಮಸ್ಯೆ ಸುದ್ದಿಗೆ ಗ್ರಾಸವಾಗಿದೆ. ಆದರೆ ಜಿಲ್ಲೆಯಲ್ಲಿ ಪ್ರಸ್ತುತ ಎಷ್ಟು ಅಗತ್ಯವೊ ಅಷ್ಟು ಆಕ್ಸಿಜನ್‌ ಪೂರೈಕೆ ಇದೆ. ಹೀಗಾಗಿ ಆಸ್ಪತ್ರೆಗಳಿಗೆ ಹಾಗೂ ಕೈಗಾರಿಕೆಗಳಿಗೆ ಸದ್ಯಕ್ಕೆ ತೊಂದರೆ ಇಲ್ಲ. ಮುಂದಿನ ದಿನಗಳಲ್ಲೂ ತೊಂದರೆ ಆಗಲಿಕ್ಕಿಲ್ಲ ಎಂಬ ವಿಶ್ವಾಸವನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಕಿಮ್ಸ್‌ನಲ್ಲಿ ಈ ಹಿಂದೆ 20 ಕಿಲೋ ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪ್ಲಾಂಟ್‌ ಇತ್ತು. ಕಳೆದ ನವೆಂಬರ್‌ನಲ್ಲಿ ಹೆಚ್ಚುವರಿ 20 ಕೆಎಲ್‌ ಎಲ್‌ಎಂಒ ಸ್ಥಾಪಿಸಲಾಗಿದ್ದು, ಒಟ್ಟಾರೆ 40 ಕೆಎಲ್‌ ಆಕ್ಸಿಜನ್‌ ಸಂಗ್ರಹ ಸಾಮರ್ಥ್ಯವಿದೆ. ಕಳೆದ ಕೋವಿಡ್‌ ಅಲೆ ವೇಳೆ ಧಾರವಾಡ ಸಿವಿಲ್‌ ಹಾಸ್ಪಿಟಲ್‌ನಲ್ಲಿ ಆಕ್ಸಿಜನ್‌ ಪ್ಲಾಂಟ್‌ ಇರಲಿಲ್ಲ. ಈಗ 6ಕೆಎಲ್‌ ಪ್ಲಾಂಟ್‌ ಇದೆ. ಇನ್ನು, ಖಾಸಗಿ ಆಸ್ಪತ್ರೆಗಳಾದ ತತ್ವದರ್ಶಿ 2 ಕೆಎಲ್‌, ಸುಚಿರಾಯು ಆಸ್ಪತ್ರೆಯಲ್ಲೂ 6 ಕೆಎಲ್‌ ಆಕ್ಸಿಜನ್‌ ಸಂಗ್ರಹಿಸಬಹುದು.

ಹುಬ್ಬಳ್ಳಿಯ ತಾರಿಹಾಳದಲ್ಲಿರುವ ಸದರ್ನ್‌ ಗ್ಯಾಸ್‌ ಪ್ರೈ. ಲಿ., ಬೇಲೂರಿನಲ್ಲಿರುವ ಪ್ರಾಕ್ಷರ್‌ ಇಂಡಿಯಾ ಪ್ರೈ. ಲಿ. ಹಾಗೂ ಸತ್ತೂರಿನ ಕರ್ನಾಟಕ ಇಂಡಸ್ಟ್ರಿಯಲ್‌ ಗ್ಯಾಸಸ್‌ ಪ್ರೈ. ಲಿ. ಕಂಪನಿಗಳು ಇಡೀ ಜಿಲ್ಲೆಗೆ ಆಕ್ಸಿಜನ್‌ ಪೂರೈಕೆ ಮಾಡುತ್ತಿವೆ. ಈ ಮೂರು ಕಂಪನಿಗಳು ಮೊದಲು ಅಂದರೆ ಕಳೆದ ಕೋವಿಡ್‌ ಅಲೆಯ ವೇಳೆಯೂ ಮಹಾರಾಷ್ಟ್ರದ ಕೊಲ್ಲಾಪುರದ ಆಕ್ಸಿಜನ್‌ ಉತ್ಪಾದನಾ ಕಂಪನಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದವು. ಆದರೆ, ಈಗ ಬಹುತೇಕ ಬಳ್ಳಾರಿಯಲ್ಲಿನ ಜಿಂದಾಲ್‌ ಕಂಪನಿಯಿಂದಲೇ ಆಕ್ಸಿಜನ್‌ ಪಡೆಯುತ್ತಿವೆ.

ವಿವಾಹದಲ್ಲಿ ಪಾಲ್ಗೊಳ್ಳೋರಿಗೆ ಕೈಗೆ ಬ್ಯಾಂಡ್ : ಎಚ್ಚರ

ಜಿಲ್ಲಾ ಆಕ್ಸಿಜನ್‌ ನೋಡಲ್‌ ಅಧಿಕಾರಿಯಾಗಿರುವ ಮಲ್ಲಿಕಾರ್ಜುನ ಕೆ.ಎಸ್‌., ಪ್ರತಿ ದಿನ ಜಿಲ್ಲೆಗೆ 10-15ಟನ್‌ ಎಂಎಲ್‌ಒ ಬೇಕು. ಮೂರು ಕಂಪನಿಗಳಿಂದ ಅಗತ್ಯದಷ್ಟು ಆಕ್ಸಿಜನ್‌ ಲಭಿಸುತ್ತಿದೆ. ಪ್ರಾಕ್ಷರ್‌ ಇಂಡಿಯಾ ಪ್ರೈ. ಲಿ. ಕಂಪನಿ ದಿನಕ್ಕೆ ಹೆಚ್ಚಿನ ಪಾಲು ಅಂದರೆ 10-12 ಟನ್‌ ಎಂಎಲ್‌ಒ ಒದಗಿಸುತ್ತದೆ. ಸದರ್ನ್‌ ಗ್ಯಾಸ್‌ 1.5 ಟನ್‌ ಎಂಎಲ್‌ಒ ಆಕ್ಸಿಜನ್‌ ನೀಡುತ್ತದೆ ಎಂದರು.

ಪ್ರತಿದಿನ ಎಲ್ಲ ಮೂರು ಸಂಸ್ಥೆಗಳಿಂದ ಲಭ್ಯತೆ ಹಾಗೂ ಪೂರೈಕೆ ಬಗ್ಗೆ ಮಾಹಿತಿ ಪಡೆಯುತ್ತೇವೆ. ಜಿಲ್ಲಾಡಳಿತದಿಂದಲೂ ಮೇಲ್ವಿಚಾರಣೆ ನಿರಂತರವಾಗಿ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಮೊದಲ ಆದ್ಯತೆಯಲ್ಲಿ ಆಕ್ಸಿಜನ್‌ ಪೂರೈಸಲಾಗುತ್ತಿದೆ. ಆಯಾ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಸಂಖ್ಯೆಗೆ ಅನುಗುಣವಾಗಿ ಆಕ್ಸಿಜನ್‌ ಪೂರೈಸುತ್ತಿದ್ದೇವೆ. ಒಟ್ಟಾರೆ ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಯಾವುದೆ ಸಮಸ್ಯೆ ಇಲ್ಲ’ ಎಂದರು.

ಕೈಗಾರಿಕೆಗೂ ಸಮಸ್ಯೆ ಆಗಿಲ್ಲ

ಕಳೆದ ವರ್ಷ ಸೆಪ್ಟೆಂಬರ್‌ ವೇಳೆಗೆ ವಾರಕ್ಕೊಮ್ಮೆ ಒಟ್ಟಾರೆ 8 ಟನ್‌ ಆಕ್ಸಿಜನ್‌ ಕೊಲ್ಲಾಪುರ ಆಕ್ಸಿಜನ್‌ ಪ್ರೈ.ಲಿ. ನಿಂದ ಬರುತ್ತಿತ್ತು. ಜಿಂದಾಲ್‌ನಿಂದ 3-4 ಟನ್‌ ತರಿಸಿಕೊಳ್ಳುತ್ತಿದ್ದೆವು. ಆಗ ಕೈಗಾರಿಕೆಗಳಿಗೆ ಕೊರತೆಯಾಗಿತ್ತು. ಆದರೆ, ಪ್ರಸ್ತುತ ಆ ಸಮಸ್ಯೆ ಇಲ್ಲ. ವಾರಕ್ಕೊಮ್ಮೆ ಜಿಂದಾಲ್‌ನಿಂದ 10 ಟನ್‌ ಆಕ್ಸಿಜನ್‌ ಲಭ್ಯವಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯಂತೆ ಶೇ. 50ರಷ್ಟು ಕೈಗಾರಿಕೆಗಳಿಗೆ ಹಾಗೂ ಶೇ. 50 ಆಸ್ಪತ್ರೆಗಳಿಗೆ ಪೂರೈಸುತ್ತಿದ್ದೇವೆ ಎಂದು ಸದರ್ನ್‌ ಗ್ಯಾಸ್‌ ಪ್ರೈ. ಲಿ. ಕಂಪನಿಯ ಪ್ರೊಡಕ್ಷನ್‌ ಇನ್‌ಚಾಜ್‌ರ್‍ ಪ್ರಕಾಶ ಎಚ್‌. ಪಾಟೀಲ್‌ ಹೇಳಿದರು.

ಕೊರೋನಾ ರಣಕೇಕೆ: ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ವಾ?

ಟಾಟಾ ಹಿಟಾಚಿ, ಸದರ್ನ್‌ ಫೆರೊ ಲಿಮಿಟೆಡ್‌, ಫಸ್ಟ್‌ ಸ್ಟೀಲ್‌ ಕಂಪನಿ ಸೇರಿ ಹಲವು ಕೈಗಾರಿಕೆಗಳಿಗೆ ಕಳೆದ ವರ್ಷ ಆಕ್ಸಿಜನ್‌ ತೊಂದರೆ ಆಗಿತ್ತು. ಆದರೆ, ಈ ವರೆಗೆ ಆಕ್ಸಿಜನ್‌ ತೊಂದರೆಯಾದ ಬಗ್ಗೆ ಯಾವುದೆ ಕಂಪನಿಗಳು ತಿಳಿಸಿಲ್ಲ. ಅಷ್ಟಕ್ಕೂ ಎಲ್ಲಿಯೂ ತೊಂದರೆ ಆದಂತಿಲ್ಲ ಎಂದು ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ ತಿಳಿಸಿದರು.

ಮೇಲ್ವಿಚಾರಣೆಗೆ ತಂಡ ರಚನೆ

ಕನ್ನಡಪ್ರಭದ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌, ಕಿಮ್ಸ್‌, ಜಿಲ್ಲಾಸ್ಪತ್ರೆ ಜತೆಗೆ ಜಿಲ್ಲೆಯ ಇತರೆಡೆಯ ಸಣ್ಣಪುಟ್ಟ ಆಸ್ಪತ್ರೆಗಳಿಗೂ ಆಕ್ಸಿಜನ್‌ ಪೂರೈಕೆ ಬಗ್ಗೆ ಯೋಜಿಸಿದ್ದೇವೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆ, ರೋಗಿಗಳಿಗೆ ಲಭ್ಯತೆ ಬಗ್ಗೆ ಮೇಲ್ವಿಚಾರಣೆಗೆ ಜಿಲ್ಲಾಡಳಿತದಿಂದ ನಾಲ್ಕು ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಲಾಗುತ್ತಿದೆ. ಪೊಲೀಸ್‌ ಕಮೀಷನರ್‌ ಜತೆಗೆ ಆಕ್ಸಿಜನ್‌ ಪೂರೈಕೆ ಕಂಪನಿಗಳಿಗೆ ತೆರಳಿ ಸೂಕ್ತವಾಗಿ ಪೂರೈಸುವಂತೆ ತಿಳಿಸಿದ್ದೇವೆ. ಈಗಲೂ ಯಾವುದೇ ಸಮಸ್ಯೆ ಇಲ್ಲ, ಮುಂದೆಯೂ ತೊಂದರೆ ಆಗದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ ಎಂದರು.

ಕೋವಿಡ್‌ ಸಂಬಂಧ ಜಿಲ್ಲೆಯಲ್ಲಿ ಆಕ್ಸಿಜನ್‌ ಪೂರೈಕೆ ಸಮರ್ಪಕವಾಗಿ ನಡೆದಿದ್ದು, ಸಮಸ್ಯೆ ಇಲ್ಲ. ದಿನಕ್ಕೆ 10-15 ಟನ್‌ ಎಂಎಲ್‌ಒ ಅಗತ್ಯವಿದ್ದು, ಮೂರು ಕಂಪನಿಗಳಿಂದ ಲಭ್ಯವಾಗುತ್ತಿದೆ ಎಂದು ಸಹಾಯಕ ಜಿಲ್ಲಾ ಔಷಧ ನಿಯಂತ್ರಕರು/ ಆಕ್ಸಿಜನ್‌ ಪೂರೈಕೆ ನೋಡಲ್‌ ಅಧಿಕಾರಿ ಮಲ್ಲಿಕಾರ್ಜುನ ಕೆ.ಎಸ್‌. ತಿಳಿಸಿದ್ದಾರೆ.

ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ