ಹಸಿವು ಆಗಿದೆ ಊಟ ಕೊಡಪ್ಪ ಎಂದ ವೃದ್ಧ ಭಿಕ್ಷುಕ ದಂಪತಿಗಳ ಮೇಲೆ ಕುಮಟಾದ ಗೋವರ್ಧನ್ ಹೋಟೆಲ್ ಮಾಲೀಕನೋರ್ವ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ದಂಪತಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಕಾರವಾರ, ಉತ್ತರ ಕನ್ನಡ (ಜೂ.23): ಊಟ ಕೇಳಿದರೆಂಬ ಕಾರಣಕ್ಕೆ ಭಿಕ್ಷುಕ ದಂಪತಿಗಳ ಹೋಟೆಲ್ ಮಾಲೀಕನೋರ್ವ ಮನ ಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋವರ್ಧನ ಹೋಟೆಲ್‌ನಲ್ಲಿ ನಡೆದಿದೆ.
ಈ ಘಟನೆ ಸಂಬಂಧ ವಾಚ್‌ಮನ್, ಹೋಟೆಲ್ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೋಟೆಲ್ ಮಾಲೀಕ ಗಣೇಶ ನಾಯ್ಕ್, ಸೆಕ್ಯೂರಿಟಿ ಗಣೇಶ ಬಂಧಿತ ಆರೋಪಿಗಳು. ರಮೇಶ ದ್ಯಾಮಣ್ಣ ಅಲೆಮಾರಿ ಹಾಗೂ ದ್ಯಾಮವ್ವ ರಮೇಶ ಅಲೆಮಾರಿ ಹಲ್ಲೆಗೊಳಗಾದ ದಂಪತಿಗಳು. ಹಲ್ಲೆಯಿಂದ ಅಸ್ವಸ್ಥಗೊಂಡಿದ್ದು ವೃದ್ಧ ದಂಪತಿಗಳನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಿಕ್ಷೆ ಬೇಡಪ್ಪ ಹಣ ಕೊಡ್ತಿವಿ ಅಂದ್ರೂ ಹಲ್ಲೆ:
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ ಬಂದಿರುವ ವೃದ್ಧ ದಂಪತಿಗಳು. ಅಲೆಮಾರಿ ಸಮುದಾಯದ ದಂಪತಿಗಳಿಗೆ ಸ್ವಂತ ಆಶ್ರಯವಿಲ್ಲದೆ ಅಲೆದಾಡುತ್ತಿದ್ದಾರೆ. ನೋಡೋಕೆ ಭಿಕ್ಹುಕರಂತೆ ಕಾಣಿಸಿದರೂ, ಪರಿಸ್ಥಿತಿ ಭಿಕ್ಷುರಂತೆ ಮಾಡಿದೆ. ಹಸಿವು ತಾಳಲಾರದೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದಾರೆ. ಆದೆ ವೃದ್ಧ ದಂಪತಿಗಳ ಕೊಳಕಾದ ಬಟ್ಟೆ ಕಂಡು ಅವಾಚ್ಯವಾಗಿ ಬೈದು ಹೋಟೆಲ್ ಮಾಲೀಕ ಊಟ ಕೊಡಲು ನಿರಾಕರಿಸಿದ್ದಾರೆ. ಆದರೆ ಹಸಿವು ಕೇಳಬೇಕಲ್ಲ? ಮಾಲೀಕನ ಬೈಗುಳ ಕೇಳಿಯೂ ಊಟ ಕೊಡುವಂತೆ ವೃದ್ಧ ದಂಪತಿಗಳು ಅಂಗಲಾಚಿದ್ದಾರೆ. ಭಿಕ್ಷೆ ಬೇಡಪ್ಪ ಹಣ ಕೊಡುತ್ತೇವೆ ಹಸಿವು ಆಗಿದೆ ಊಟ ಕೊಡಿ ಎಂದಿದ್ದಾರೆ.
ಆದರೆ ಹೋಟೆಲ್ ಮಾಲೀಕ ಅದೆಂತಹ ಅಮಾನವೀಯವಾಗಿ ವರ್ತಿಸಿದ್ದಾರೆಂದರೆ, ವೃದ್ಧ ದಂಪತಿಗಳು ಅಷ್ಟು ಬೇಡಿಕೊಂಡರೂ ಕನಿಷ್ಠ ಪಕ್ಷ ಬಾಳೆ ಎಲೆಯೋ, ಕಾಗದಲ್ಲಾದರೂ ಅನ್ನ ಹಾಕಿ ಕೊಡಬಹುದಿತ್ತು. ಆದರೆ ಭಿಕ್ಷುಕರೆಂಬ ಕಾರಣಕ್ಕೆ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ವಾಚ್‌ಮನ್ ಕರೆಸಿ ತಾನೂ ವೃದ್ಧ ದಂಪತಿಗಳ ಮೇಲೆ ಕ್ರೂರವಾಗಿ ಒದ್ದು ಹಲ್ಲೆ ನಡೆಸಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಲೀಕನ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ
ಹಸಿವು ಆಗಿದೆ ಅಂತಾ ಅನ್ನ ಕೇಳಿ ಬಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡುವ ಹೋಟೆಲ್ ಮಾಲೀಕ ಅದೆಂತಹ ಕಲ್ಲು ಹೃದಯದವನು ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಭಿಕ್ಷುಕರಾದರೆ ಊಟ ಕೊಡಬಾರದೆ? ಅವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಪೊಲೀಸರು ಹೋಟೆಲ್ ಮಾಲೀಕ ಗಣೇಶ್ ನಾಯ್ಕ್ ಹಾಗೂ ಸೆಕ್ಯೂರಿಟಿ ಗಾರ್ಡ್ ಗಣೇಶ್ ಎಂಬಾತನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

