ಬೆಂಗಳೂರು [ಜು.16] :  ಹಸಿ ಮತ್ತು ಒಣ ಕಸದೊಂದಿಗೆ ಇ-ತ್ಯಾಜ್ಯ(ನಿರುಪಯುಕ್ತ ಎಲೆಕ್ಟ್ರಾನಿಕ್‌ ಉಪಕರಣಗಳು) ಸೇರುವುದರಿಂದ ಪರಿಸರಕ್ಕೆ ಹಾನಿ ಉಂಟು ಮಾಡುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 30 ದಿನಗಳ ಕಾಲ ‘ಇ-ತ್ಯಾಜ್ಯ ಅಭಿಯಾನ’ವನ್ನು ಬಿಬಿಎಂಪಿ ಕಚೇರಿಗಳಲ್ಲಿ ನಡೆಸಲಾಗುತ್ತಿದೆ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಬಿ-ರೆಸ್ಪಾನ್ಸಿಬಲ್‌ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ 30 ದಿನಗಳ ಇ-ತ್ಯಾಜ್ಯ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಿರುಪಯುಕ್ತ ಎಲೆಕ್ಟ್ರಾನಿಕ್‌ ಉಪಕರಣ ಒಣ ಅಥವಾ ಹಸಿ ತ್ಯಾಜ್ಯದೊಂದಿಗೆ ಎಸೆಯುವುದರಿಂದ ಅದರಲ್ಲಿರುವ ರಾಸಾಯನಿಕ ವಸ್ತುಗಳು ಭೂಮಿ ಸೇರಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ. ಹೀಗಾಗಿ, ಇ-ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡಬೇಕಾಗಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಹಾಗಾಗಿ, ಬಿಬಿಎಂಪಿ ಅಧಿಕಾರಿ ಸಿಬ್ಬಂದಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜುಲೈ 15ರಿಂದ ಆಗಸ್ಟ್‌ 15ರ ವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಲೆಕ್ಟ್ರಾನಿಕ್‌ ವಸ್ತುಗಳು ಹೆಚ್ಚು ಮಾರಾಟವಾಗುವ ನಗರದ ಎಸ್‌.ಪಿ ರಸ್ತೆ, ಕೆ.ಆರ್‌.ಮಾರುಕಟ್ಟೆ, ಜಯನಗರ ಕಾಂಪ್ಲೆಕ್ಸ್‌, ಅವೆನ್ಯೂರಸ್ತೆ ಹಾಗೂ ಮಾಲ್‌ಗಳು ಸೇರಿದಂತೆ ವಿವಿಧ ಕಡೆ ಇ-ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಇನ್ನು ಎಲೆಕ್ಟ್ರಾನಿಕ್‌ ಉಪಕರಣ ತಯಾರಿಕಾ ಕಂಪನಿಗಳೇ ಇ-ತ್ಯಾಜ್ಯ ಸಂಗ್ರಹಿಸಬೇಕೆಂಬ ನಿಯಮದ ಪರಿಣಾಮಕಾರಿ ಅನುಷ್ಠಾನದ ಬಗ್ಗೆಯೂ ಚರ್ಚೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.

30 ದಿನ ಅಭಿಯಾನದಡಿ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಎಂಟು ವಲಯಗಳ ಕಚೇರಿಗಳ ಆವರಣದಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಡಬ್ಬಿ ಇಡಲಾಗಿದೆ. ಅಲ್ಲಿಗೆ ಪಾಲಿಕೆ ಅಧಿಕಾರಿ, ಸಿಬ್ಬಂದಿ ತಮ್ಮ ಮನೆಗಳಲ್ಲಿರುವ ನಿರುಪಯುಕ್ತ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತಂದು ಹಾಕಬಹುದು. ಅವರ ಜೊತೆಗೆ ಸಾರ್ವಜನಿಕರು ಸಹ ಕೈ ಜೋಡಿಸಬಹುದು ಎಂದು ಹೇಳಿದರು.

ಈ ವೇಳೆ ಬಿ-ರೆಸ್ಪಾನ್ಸಿಬಲ್‌ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಇ-ವೇಸ್ಟ್‌ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಮಾಡಿದರು. ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷದನಾಯಕ ಅಬ್ದುಲ್‌ ವಾಜೀದ್‌, ಆಡಳಿತ ಮತ್ತು ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ.ರಂದೀಪ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.