Asianet Suvarna News Asianet Suvarna News

ಅಧಿಕಾರಿಗಳ ಬೇಜವಾಬ್ದಾರಿಗೆ ಆಸ್ಪತ್ರೆಯೇ ಖಾಸಗಿಯವರ ಪಾಲು!

ರ್ಕಾರಿ ಕಚೇರಿಗಳಿಗಾಗಿ, ಸಾರ್ವಜನಿಕರ ಉಪಯೋಗಕ್ಕಾಗಿ ಎಷ್ಟೋ ಜನರು ತಮ್ಮ ಜಾಗ, ಕಟ್ಟಡ ಅಥವಾ ಹಣವನ್ನು ದಾನ ಮಾಡಿರುವುದನ್ನು ನಾವು ನೋಡಿರುತ್ತೇವೆ. ಅದರೆ ಇಲ್ಲೊಂದು ಕುಟುಂಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಮ್ಮ ಕಟ್ಟಡವೆಂದು ಅದರಲ್ಲಿ ಸೇರಿಕೊಂಡಿದೆ. ಅದಕ್ಕೆ ಕಾರಣ ಇಲಾಖೆ ಅಧಿಕಾರಿಗಳ ಎಡವಟ್ಟು ಮತ್ತು ನಿರ್ಲಕ್ಷ್ಯ ಎಂದು ಸ್ಪಷ್ಟವಾಗಿದೆ.

Due to the irresponsibility authorities the hospital property went to private individuals at kodagu rav
Author
First Published Dec 29, 2023, 5:45 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಡಿ.29) : ಸರ್ಕಾರಿ ಕಚೇರಿಗಳಿಗಾಗಿ, ಸಾರ್ವಜನಿಕರ ಉಪಯೋಗಕ್ಕಾಗಿ ಎಷ್ಟೋ ಜನರು ತಮ್ಮ ಜಾಗ, ಕಟ್ಟಡ ಅಥವಾ ಹಣವನ್ನು ದಾನ ಮಾಡಿರುವುದನ್ನು ನಾವು ನೋಡಿರುತ್ತೇವೆ. ಅದರೆ ಇಲ್ಲೊಂದು ಕುಟುಂಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಮ್ಮ ಕಟ್ಟಡವೆಂದು ಅದರಲ್ಲಿ ಸೇರಿಕೊಂಡಿದೆ. ಅದಕ್ಕೆ ಕಾರಣ ಇಲಾಖೆ ಅಧಿಕಾರಿಗಳ ಎಡವಟ್ಟು ಮತ್ತು ನಿರ್ಲಕ್ಷ್ಯ ಎಂದು ಸ್ಪಷ್ಟವಾಗಿದೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ (ಶಿರಹೊಳಲು) ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಾಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಖಾಸಗಿ ವ್ಯಕ್ತಿಯೊಬ್ಬರ ವಾಸದ ಮನೆಯಾಗಿಬಿಟ್ಟಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎನ್ನುವುದು ಸ್ಪಷ್ಟ. 

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಅನುದಾನ ಹೇಳಿಕೆ ಬೆನ್ನಲ್ಲೆ 1 ಸಾವಿರ ಕೋಟಿ ಕ್ರೀಯಾ ಯೋಜನೆ ಸಿದ್ದಪಡಿಸಲು ಸೂಚನೆ ನೀಡಿದ ಸಿಎಂ

ಹೌದು ಮದಲಾಪುರ ಗ್ರಾಮದ ಸರ್ವೆ ನಂಬರ್ 1 ರಲ್ಲಿ ಇರುವ 3.5 ಸೆಂಟ್ ಜಾಗದಲ್ಲಿ 2012 ರಲ್ಲಿ 23 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಕೆಲಸ ಆರಂಭಿಸಲಾಗಿತ್ತು. ಆ ಸಂದರ್ಭಕ್ಕೆ ಆ ಸ್ಥಳದಲ್ಲಿ ಗ್ರಾಮ ಪಂಚಾಯಿತಿಯ ಹಳೆ ಕಟ್ಟಡವಿದ್ದು ಅದನ್ನು ಕೆಡವಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಲು ಅವಕಾಶ ನೀಡುವಂತೆ ಆರೋಗ್ಯ ಇಲಾಖೆ ಅಂದು ಪತ್ರವನ್ನೂ ಬರೆದಿದೆ. ನಂತರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಅಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ 12.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿಯನ್ನು ಮಾಡಲಾಗಿತ್ತು. ಆದರೆ ತಿಮ್ಮಪ್ಪ ಎಂಬುವರು ಕಟ್ಟಡ ನಿರ್ಮಿಸುತ್ತಿರುವ ಜಾಗ ತಮ್ಮದೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇದು ಸರ್ಕಾರಿ ಜಾಗವೆಂದು ನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿತ್ತು. 

ಇದೆಲ್ಲವೂ ಆದ ಬಳಿಕವೂ ಆರೋಗ್ಯ ಇಲಾಖೆ ತಮ್ಮ ಜಾಗವನ್ನು ಗುರುತ್ತಿಸಿಕೊಡುವಂತೆ 2018 ರಿಂದಲೂ ನಿರಂತರವಾಗಿ ಕುಶಾಲನಗರ ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಮಾಡಿದೆ. ಆದರೂ ಸರ್ವೆ ಮಾಡಿ ಜಾಗ ಗುರುತ್ತಿಸಿಕೊಟ್ಟಿಲ್ಲ. ಹೀಗಾಗಿ ಕಾಮಗಾರಿ ಅಂದಿನಿಂದಲೂ ಅರ್ಧಕ್ಕೆ ನಿಂತಿತ್ತು. ಇದೀಗ ವಿಮಲ ಎಂಬುವರು ಇದು ತಮ್ಮ ಜಾಗ, ನಾವೇ ಕಟ್ಟಿರುವ ಕಟ್ಟಡ ಎಂದು ಅಲ್ಲಿ ಕಳೆದ ಆರು ತಿಂಗಳಿನಿಂದ ವಾಸಿಸಲು ಶುರು ಮಾಡಿದ್ದಾರೆ. 

ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಗ್ರಾಮ ಪಂಚಾಯಿತಿ ಪಿಡಿಓ ಮಂಜುಳ ಅವರೇ ನಿರಪೇಕ್ಷಣಾ ಪತ್ರ ನೀಡಿದ್ದಾರೆ. ಈ ಕುರಿತು ಅವರನ್ನು ಕೇಳಿದರೆ ನಾನು ವಿಮಲ ಎಂಬುವರ ಹಳೆಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಎನ್ಓಸಿ ನೀಡಿದ್ದೆ. ಆದರೆ ಅವರು ಅದನ್ನು ದುರ್ಬಳಕೆ ಮಾಡಿಕೊಂಡು ಆರೋಗ್ಯ ಕೇಂದ್ರದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ ಎಂದಿದ್ದಾರೆ. 

ಸರ್ಕಾರಿ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಅದೇ ಗ್ರಾಮದ ಕುಟುಂಬವೊಂದು ಅಕ್ರಮವಾಗಿ ವಾಸಿಸುತ್ತಿದ್ದು ಕಟ್ಟಡವನ್ನು ಆರೋಗ್ಯ ಇಲಾಖೆಯ ಸುಪರ್ದಿಗೆ ವಹಿಸಲು ಗ್ರಾಮ ಪಂಚಾಯಿತಿ ಸಾಕಷ್ಟು ಪ್ರಯತ್ನಿಸುತ್ತಿದೆ. ಅದಕ್ಕಾಗಿ ತುರ್ತು ಸಭೆ ಕರೆದು ನಿರ್ಣಯವನ್ನು ಮಾಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ತಮ್ಮ ಜಾಗವನ್ನು ಗುರುತ್ತಿಸಿಕೊಡುವಂತೆ ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಮನವಿ ಸಲ್ಲಿಸಿದೆ. ಆದರೆ ಇಷ್ಟೆಲ್ಲಾ ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ. ಹನ್ನೆರಡುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿರುವ ಕಟ್ಟಡದಲ್ಲಿ ಖಾಸಗಿ ಕುಟುಂಬವೊಂದು ವಾಸಿಸುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. 

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ; ಎಡಪಕ್ಷಗಳ ಟೀಕೆಗೆ ಪೇಜಾವರಶ್ರೀ ತಿರುಗೇಟು

ಇದೆಲ್ಲವನ್ನು ಗಮನಿಸಿದರೆ ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಓ, ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲರೂ ಸೇರಿ ಸರ್ಕಾರಿ ಕಟ್ಟಡವನ್ನೇ ಖಾಸಗಿ ವ್ಯಕ್ತಿಗೆ ಬಿಟ್ಟು ಕೊಡುತ್ತಿರುವ ಹುನ್ನಾರವಿದೆ ಎನಿಸುತ್ತದೆ. ಆದರೆ ವ್ಯಕ್ತಿ ಮಾತ್ರ ಇದು ನಾವು ಹುಟ್ಟಿ ಬೆಳೆದ ಮನೆ. ನಮ್ಮ ಅಜ್ಜಿ ಸಂಪಾದಿಸಿದ್ದ ಜಾಗದಲ್ಲಿ ನಾವು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಆದರೂ ಪಂಚಾಯಿತಿಯಿಂದ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮನೆಯಲ್ಲಿ ವಾಸವಿರುವ ವಿಮಲ ಅವರ ಮೊಮ್ಮಗ ಯೋಗೇಶ್ ಆರೋಪಿಸುತ್ತಿದ್ದಾರೆ. 

ಒಟ್ಟಿನಲ್ಲಿ ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನವನ್ನು ಬಳಸಿ ಮಾಡಿದ್ದ ಕಟ್ಟಡವನ್ನು ಜಾಗದ ಗೊಂದಲದ ನೆಪದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಬಿಟ್ಟುಕೊಡುತ್ತಿರುವುದು ನಮ್ಮ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

Follow Us:
Download App:
  • android
  • ios