ಚಾಮರಾಜನಗರ, [ಜೂ.22]: ಕುಡಿದು ಬಂದ ಗಂಡನಿಗೆ ಹೆಂಡತಿ ಕಪಾಳಮೋಕ್ಷ ಮಾಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಪ್ರಭುಸ್ವಾಮಿ (45) ಎಂಬಾತ ಆಗಾಗ ಕುಡಿದು ಬಂದು ಹೆಂಡತಿ ಅಂಬಿಕಾಳ ಜತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಅದೇ ತರ ಇಂದು [ಶನಿವಾರ]  ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಅಂಬಿಕಾ ಗಂಡನಿಗೆ ಕಪಾಳಕ್ಕೆ ಹೊಡಿದಿದ್ದಾಳೆ. ಪರಿಣಾಮ ಪ್ರಭುಸ್ವಾಮಿ ಕುಸಿದುಬಿದ್ದು ಮೃತಪಟ್ಟಿದ್ದಾನೆ.

ಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದರಿಂದ ಹೆದರಿದ ಅಂಬಿಕಾ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ನೇಣು ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. 

ಪ್ರಭುಸ್ವಾಮಿಯ ಸಹೋದರಿಯರಿಗೆ ಅನುಮಾನ ಬಂದು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಬಿಕಾಳನ್ನು ಬಂಧಿಸಿದ್ದಾರೆ.