ಬೆಂಗಳೂರು [ನ.16]:  ಹೆಚ್ಚು ಪ್ರೋಟೀನ್‌ ಅಂಶಗಳನ್ನು ಒಳಗೊಂಡಿರುವ ನುಗ್ಗೆಕಾಯಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಕುದುರಿದ್ದು, ದಾಖಲೆಯ ಬೆಲೆ ಗಿಟ್ಟಿಸಿಕೊಂಡಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 160ರಿಂದ 180 ರು.  ನಿಗದಿಯಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 250 ರು. ರವರೆಗೆ ಮಾರಾಟವಾಗುತ್ತಿದೆ.

ದಸರಾ ಮತ್ತು ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಮದುವೆ, ಗೃಹ ಪ್ರವೇಶ ಸೇರಿದಂತೆ ಇತರೆ ಶುಭ ಕಾರ್ಯಗಳು ಆರಂಭವಾಗಿದ್ದು, ಎಲ್ಲೆಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲ ತಿಂಗಳುಗಳಿಂದ ತರಕಾರಿ ಮತ್ತು ಸೊಪ್ಪಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಇದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ನುಗ್ಗೆಕಾಯಿ ಸೇರಿದಂತೆ ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಮಳೆಯಿಂದ ಸಾಕಷ್ಟುಕಡೆ ತರಕಾರಿ ಬೆಳೆಗಳು ನಾಶವಾಗಿವೆ. ಹೀಗಾಗಿ ಕಳೆದೊಂದು ವಾರದಿಂದ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಕಳೆದ 10 ದಿನಗಳ ಹಿಂದೆ ಕಡಿಮೆ ಇದ್ದ ನುಗ್ಗೆಕಾಯಿ ಬೆಲೆ ಈಗ 200 ರು. ಗಡಿ ದಾಟಿದೆ. ಕೆ.ಆರ್‌.ಮಾರುಕಟ್ಟೆಯಲ್ಲಿ ಕೆ.ಜಿ. 250  ರು. ಇದ್ದರೆ, ನಾಲ್ಕು ನುಗ್ಗೆಕಾಯಿ 50ಕ್ಕೆ ಮಾರಾಟವಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮಿಳುನಾಡಿನಿಂದ ಅಧಿಕ ಪ್ರಮಾಣದಲ್ಲಿ ನುಗ್ಗೆಕಾಯಿ ಸರಬರಾಜಾಗುತ್ತದೆ. ಆದರೆ, ಇದು ಸೀಸಲ್‌ ಅಲ್ಲವಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಸ್ಥಳೀಯ ಮಾರುಕಟ್ಟೆಗೆ ಬೆಂಗಳೂರು ಸುತ್ತಮುತ್ತ ನುಗ್ಗೆಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುವುದಿಲ್ಲ. ಕಲಾಸಿಪಾಳ್ಯ ಮಾರುಕಟ್ಟೆಗೆ ಈ ಹಿಂದೆ 30ರಿಂದ 50 ಟನ್‌ ವರೆಗೆ ಬರುತ್ತಿದ್ದ ನುಗ್ಗೆಕಾಯಿ, ಇದೀಗ 10 ಟನ್‌ಗೆ ಇಳಿಕೆಯಾಗಿದೆ.

ಜತೆಗೆ ಅಕ್ಟೋಬರ್‌ನಿಂದ ಜನವರಿವರೆಗೆ ನುಗ್ಗೆ ಮರಗಳಿಗೆ ಹುಳು ಬಾಧೆ ಸಾಮಾನ್ಯ. ಇದರಿಂದ ಇಳುವರಿ ಕುಸಿದಿದೆ. ಈಗ ಗುಣಮಟ್ಟದ ಕಾಯಿಯೂ ಬರುತ್ತಿಲ್ಲ. ಪೂರೈಕೆ ಕಡಿಮೆಯಾಗಿರುವುದರಿಂದ ನಿರೀಕ್ಷೆಗೂ ಮೀರಿ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಬೆಲೆ ಏರಿಕೆಯಾಗಲಿದೆ ಎಂದು ಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ತಿಳಿಸಿದರು.

ಎಲ್ಲ ತರಕಾರಿಗಳೂ ಗಗನ ಕುಸುಮ

ಕೆ.ಆರ್‌.ಮಾರುಕಟ್ಟೆಯಲ್ಲಿ ಈರುಳ್ಳಿ ಎರಡೂವರೆ ಕೆ.ಜಿ.ಗೆ 100 ರು., ಒಂದು ಕೆ.ಜಿ. 40 ರು., ಟೊಮೆಟೋ 50ಕ್ಕೆ 2 ಕೇಜಿ, ಒಂದು ಕೆ.ಜಿ.ಗೆ 30 ರು., ಬೆಳ್ಳುಳ್ಳಿ ಕೆ.ಜಿ. 180 ರು., ಕ್ಯಾರೆಟ್‌ 30ರಿಂದ 50 ರು., ಕ್ಯಾಪ್ಸಿಕಾಂ ಕೆ.ಜಿ. 40ರಿಂದ 50 ರು., ಬೀನ್ಸ್‌ ಕೆ.ಜಿ. 30ರಿಂದ 40 ರು., ಹಾಗಲಕಾಯಿ ಕೆ.ಜಿ. 30-40 ರು., ಬಜ್ಜಿ ಮೆಣಸಿನಕಾಯಿ ಕೆ.ಜಿ. 30 ರು., ಕೆಂಪು ಗೆಣಸು ಕೆ.ಜಿ. 40 ರು., ಮರಗೆಣಸು ಕೆ.ಜಿ. 30 ರು., ಬೆಂಡೆಕಾಯಿ ಕೆ.ಜಿ. 40 ರು., ಬೀಟ್‌ರೂಟ್‌ 40 ರು.ಗೆ ಮಾರಾಟವಾಗುತ್ತಿದೆ.

ಕೊತ್ತಂಬರಿ ಕೆ.ಜಿ. 100 ರಿಂದ 110 ರು. (ದಪ್ಪ ಕಟ್ಟು .20-30), ಪಾಲಕ್‌ ಕೆ.ಜಿ. 46 ರು., ದಂಡಿನ ಸೊಪ್ಪು ಕೆ.ಜಿ. 40 ರು., ಪುದೀನ ಕೆ.ಜಿ. 65 ರು., ಸಬ್ಬಸಿಗೆ ಸೊಪ್ಪು ದಪ್ಪ ಮೂರು ಕಟ್ಟಿಗೆ 67 ರು., ಮೆಂತ್ಯೆ ಕೆ.ಜಿ. 70 ರು., ನುಗ್ಗೆ ಸೊಪ್ಪು 4 ಕಟ್ಟಿಗೆ 20 ರು., ಕರಿಬೇವು ಕೆ.ಜಿ. 40ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಕಲಾಸಿಪಾಳ್ಯ ತರಕಾರಿ ಪೂರೈಕೆದಾರರಾದ ರಾಧಾಕೃಷ್ಣ ಹೇಳಿದರು.