ಬೆಂಗಳೂರು : [ಜು.16]   ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 19 ಮಂದಿಗೆ ದೃಷ್ಟಿದೋಷ ಉಂಟಾಗಲು ಔಷಧಿಯ ಅಡ್ಡ ಪರಿಣಾಮ (ಡ್ರಗ್‌ ರಿಯಾಕ್ಷನ್‌) ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆಗೆ ಬಳಸಿದ್ದ ಆ್ಯಕ್ಯೂಜೆಲ್‌ 2% (ಬ್ಯಾಚ್‌ ನಂ.ಒಯುವಿ 190203)ನ ಜೆಲ್‌ಅನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜು.9ರಂದು ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 24 ಮಂದಿಯಲ್ಲಿ 19 ಮಂದಿಗೆ ಕಣ್ಣಿನ ದೃಷ್ಟಿಈವರೆಗೂ ಮರಳಿಲ್ಲ. ಈ ರೋಗಿಗಳಿಗೆ ಉಂಟಾಗಿರುವ ದೃಷ್ಟಿದೋಷ ಸರಿಪಡಿಸಲು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಇದರ ಬೆನ್ನಲ್ಲೇ ಘಟನೆ ಬಗ್ಗೆ ಸೋಮವಾರ ಪ್ರಯೋಗಾಲಯದ ವರದಿ ಬಂದಿದ್ದು, ಔಷಧಿಯ ಅಡ್ಡಪರಿಣಾಮದಿಂದ ರೋಗಿಗಳ ಕಣ್ಣಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ ಎನ್ನಲಾಗಿದೆ. ಈ ಸಂಬಂಧ ಔಷಧ ನಿಯಂತ್ರಕರು ಔಷಧದ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಸಿ ಮುಂದಿನ 15-20 ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಬಿಎಂಸಿಆರ್‌ಐ ಡೀನ್‌, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೂ ವರದಿಯ ಪ್ರತಿಯನ್ನು ಕಳುಹಿಸಲಾಗಿದೆ. ಇದಲ್ಲದೆ ನಿಮ್ಹಾನ್ಸ್‌ ಮತ್ತು ಖಾಸಗಿ ಪ್ರಯೋಗಾಲಯಗಳಿಗೂ ಔಷಧದ ಮಾದರಿಯನ್ನು ಕಳುಹಿಸಲಾಗಿದೆ. ಈ ಎಲ್ಲ ವರದಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಿಂಟೊ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ಮಾಹಿತಿ ನೀಡಿದ್ದಾರೆ.

 ಒಂದೇ ಬ್ಯಾಚ್‌ ಔಷಧಿಯಿಂದ ಸಮಸ್ಯೆ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆ್ಯಕ್ಯೂಜೆಲ್‌ 2% ಹೆಸರಿನ ಜೆಲ್‌ ಅನ್ನು ಬಳಸಲಾಗುತ್ತದೆ. ಅದೇ ರೀತಿ ಜು.6ರಂದು ಮಂಗಳವಾರ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕ್ಯೂಜೆಲ್‌ 2% (ಬ್ಯಾಚ್‌ ನಂ. ಒಯುವಿ 190203) ಔಷಧಿ ಬಳಕೆ ಮಾಡಲಾಗಿತ್ತು. ನಂತರ ರೋಗಿಗಳಿಗೆ ದೃಷ್ಟಿಸಮಸ್ಯೆ  ಕಾಣಿಸಿಕೊಂಡಿದೆ. ಈ ಮೊದಲು ಎಲ್ಲ ಶಸ್ತ್ರ ಚಿಕಿತ್ಸೆಯಲ್ಲೂ ಇದೇ ಔಷಧ ಬಳಕೆ ಮಾಡಲಾಗಿತ್ತು. ಆದರೆ, ಅಂದು ಹೊಸದಾಗಿ (ಬ್ಯಾಚ್‌ ನಂ. ಒಯುವಿ 190203) ಬಂದಿದ್ದ ಔಷಧಿ ಬಳಕೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಆ್ಯಕ್ಯೂಜೆಲ್‌ 2% (ಹೈಡ್ರಾಕ್ಸಿಪ್ರಾಪ್ಲಿ ಮೆಥೈಲ್‌ಸೆಲ್ಯುಲೊಸ್‌ ಆಪ್ತಮಾಲಿಕ್‌ ಸಲ್ಯೂಷನ್ಸ್‌) ಆಪ್ತಮಾಲಿಕ್‌ ವಿಸಿಯೋಸರ್ಜಿಕಲ್‌ ಡಿವೈಸ್‌ (ಬ್ಯಾಚ್‌ ನಂ. ಒಯುವಿ 190203) ಔಷಧವನ್ನು ಬಳಕೆ ಮಾಡಬಾರದು ಎಂದು ಆದೇಶಿಸಿದ್ದಾರೆ.