ಮೈಸೂರು, ಚಾಮರಾಜನಗರಕ್ಕೆಬರಗಾಲದ ಬೇಸಿಗೆ- ಬಂಡೀಪುರದಲ್ಲಿ ಬೆಂಕಿ ಬೀಳದಂತೆ ಕಟ್ಟೆಚ್ಚರ
ಈ ಬಾರಿ ರಾಜ್ಯದಲ್ಲಿ ತಲೆದೂರಿರುವ ಬರಗಾಲದಿಂದಾಗಿ ಬೇಸಿಗೆಯಲ್ಲಿ ಅರಣ್ಯ ಪ್ರದೇಶವನ್ನು ಸಂರಕ್ಷಿಸುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಈಗಿನಿಂದಲೇ ಅರಣ್ಯ ಇಲಾಖೆಯು ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.
ಬಿ. ಶೇಖರ್ ಗೋಪಿನಾಥಂ
ಮೈಸೂರು : ಈ ಬಾರಿ ರಾಜ್ಯದಲ್ಲಿ ತಲೆದೂರಿರುವ ಬರಗಾಲದಿಂದಾಗಿ ಬೇಸಿಗೆಯಲ್ಲಿ ಅರಣ್ಯ ಪ್ರದೇಶವನ್ನು ಸಂರಕ್ಷಿಸುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಈಗಿನಿಂದಲೇ ಅರಣ್ಯ ಇಲಾಖೆಯು ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.
ಅದೇ ರೀತಿ ಬೇಸಿಗೆಯನ್ನು ಎದುರಿಸಲು, ಬೆಂಕಿಯ ಕೆನ್ನಾಲಿಗೆಯಿಂದ ಅರಣ್ಯ ಸಂಪತ್ತನ್ನು ರಕ್ಷಿಸಲು ಕಳೆದ 3 ವರ್ಷದಿಂದ ಶೂನ್ಯ ಬೆಂಕಿ ಪ್ರಕರಣದ ಹೆಗ್ಗಳಿಕೆ ಹೊಂದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಬಾರಿಯೂ ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕಾಗಿ ಈಗಿನಿಂದಲೇ ಅಗತ್ಯ ಸಿದ್ಧತೆಯೊಂದಿಗೆ ಎಲ್ಲಾ 13 ವಲಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಈ ಬಾರಿ 2876 ಕಿ.ಮೀ ಬೆಂಕಿ ತಡೆ ರೇಖೆ (ಫೈರ್ ಲೈನ್) ನಿರ್ಮಿಸಿ, 475 ಫೈರ್ ವಾಚರ್ ನೇಮಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
1036 ಚ.ಕಿ.ಮೀ ವ್ಯಾಪ್ತಿಯುಳ್ಳ ಬಂಡೀಪುರ ಅರಣ್ಯಕ್ಕೆ ಕಾಡ್ಗಿಚ್ಚು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಹಿಂದೆ ಅಪಾರ ಪ್ರಮಾಣದ ಸಂಪತ್ತು ಹಾನಿಯಾಗಿದೆ. ಕೊರೋನಾ ಹಾವಳಿಯಿಂದ ಜನ ಸಂಚಾರವಿಲ್ಲದ ಕಾರಣ 2020, 2021ರಲ್ಲಿ ಬಂಡೀಪುರದಲ್ಲಿ ಬೆಂಕಿ ಪ್ರಕರಣ ಸಂಭವಿಸಿರಲಿಲ್ಲ. 2022 ರಲ್ಲಿ ಸಿಬ್ಬಂದಿ ಕಠಿಣ ಶ್ರಮದಿಂದ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ಪ್ರಕರಣ ದಾಖಲಾಗಿರಲಿಲ್ಲ. ಅದೇ ರೀತಿ ಈ ವರ್ಷವೂ ಬೆಂಕಿ ಬೀಳದಂತೆ ನೋಡಿಕೊಳ್ಳುವ ಸವಾಲು ಸಿಬ್ಬಂದಿ ಮೇಲಿದೆ.
100 ಕಿ.ಮೀ ಹೆಚ್ಚುವರಿ ಬೆಂಕಿ ತಡೆ ರೇಖೆ
ಅರಣ್ಯ ಪ್ರದೇಶದಲ್ಲಿ ಉಂಟಾಗುವ ಮಾನವ ನಿರ್ಮಿತ ಬೆಂಕಿ ಪ್ರಕರಣದಿಂದ ಅರಣ್ಯ ಸಂಪತ್ತಿನ ಸಂರಕ್ಷಿಸಲು ಬೆಂಕಿ ತಡೆ ರೇಖೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಅರಣ್ಯ ಪ್ರದೇಶದಲ್ಲಿ ಗುರುತಿಸಲ್ಪಟ್ಟ ಸ್ಥಳದಲ್ಲಿ ಬೆಂಕಿ ತಡೆರೇಖೆ ನಿರ್ಮಿಸಲಾಗುತ್ತದೆ.
ಅರಣ್ಯ ಪ್ರದೇಶ ಸಾಂದ್ರತೆಗೆ ಅನುಗುಣವಾಗಿ 20 ಮೀ., 30 ಮೀಟರ್ ಅಗಲದ ಫೈರ್ ಲೈನ್ ನಿರ್ಮಿಸಲಾಗುತ್ತದೆ. ಕಳೆದ ವರ್ಷ 2776 ಕಿ.ಮೀ ಬೆಂಕಿ ತಡೆರೇಖೆ ನಿರ್ಮಿಸಲಾಗಿತ್ತು. ಈ ಬಾರಿ ಸೂಕ್ಷ್ಮ ವಲಯಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 100 ಕಿ.ಮೀ. ಬೆಂಕಿ ತಡೆರೇಖೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಅನುಮತಿ ಕೋರಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಹೆಚ್ಚುವರಿ ರೇಖೆ ನಿರ್ಮಾಣ ಪೂರ್ಣಗೊಳ್ಳಲಿದ್ದು, ಒಟ್ಟಾರೆ ಈ ಬಾರಿ 2876 ಕಿ.ಮೀ ಬೆಂಕಿ ತಡೆರೇಖೆ ಹಾಗೂ 120 ಕಿ.ಮೀ. ವ್ಯೂವ್ ಲೈನ್ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಪಿ. ರಮೇಶ್ ಕುಮಾರ್ ತಿಳಿಸಿದರು.
ಬೆಂಕಿ ಗುರುತಿಸುವ ಸ್ಥಳ
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಾಚ್ ಟವರ್ ಗಳು ಪ್ರಮುಖ ಪಾತ್ರ ವಹಿಸಲಿದ್ದು, ಅವುಗಳನ್ನು ಬೇಸಿಗೆ ವೇಳೆ ಬೆಂಕಿ ಗುರುತಿಸುವ ಸ್ಥಳ ಆಗಿವೆ. ವಾಚ್ ಟವರ್ ಗಳ ಮೇಲೆ ಸಿಬ್ಬಂದಿ ವಲಯವಾರು ವೀಕ್ಷಣೆ ಮಾಡುವುದರಿಂದ ಯಾವುದಾದರೂ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡರೆ ತಕ್ಷಣವೇ ಮಾಹಿತಿ ನೀಡಲಿದ್ದಾರೆ. ಇದರಿಂದ ಬೆಂಕಿ ಬಿದ್ದ ಸ್ಥಳ ಗುರುತಿಸುವಲ್ಲಿ ವೀಕ್ಷಣಾ ಗೋಪುರ ಸಹಕಾರಿಯಾಗಿದ್ದು, ಈ ಬಾರಿ ವಲಯಕ್ಕೆ 1 ಅಥವಾ 2 ವೀಕ್ಷಣಾ ಗೋಪುರ (ಮರದ ಮೇಲೆ ಅಟ್ಟ) ನಿರ್ಮಿಸಲು ಕ್ರಮ ವಹಿಸಲಾಗಿದೆ.
ಬೇಸಿಗೆ ಎದುರಿಸಲು ಅರಣ್ಯ ಸಿಬ್ಬಂದಿಯೊಂದಿಗೆ 8 ರಿಂದ 10 ಮಂದಿ ವಾಚರ್ ಗಳಿರುವ ಸ್ಟಾರ್ಟಿಂಗ್ ಫೈರ್ ಪ್ರೊಟೆಕ್ಷನ್ ಕ್ಯಾಂಪ್ ಗೆ ಸ್ಥಳ ಗುರುತಿಸಲಾಗಿದೆ. ವಲಯವಾರು ಅಗತ್ಯವುಳ್ಳ ಸ್ಥಳದಲ್ಲಿ ಈ ಕ್ಯಾಂಪ್ ಗೆ ಸೂಚಿಸಲಾಗಿದೆ. ಈ ಕ್ಯಾಂಪ್ ನಲ್ಲಿ ಕಾಯುತ್ತಿರುವ ಸಿಬ್ಬಂದಿಗೆ ವಾಚ್ ಟವರ್ ಸಿಬ್ಬಂದಿ ನೀಡುವ ಮಾಹಿತಿ ಆಧರಿಸಿ, ಬೆಂಕಿ ಬಿದ್ದ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಲಿದ್ದಾರೆ.
ಮೊಬೈಲ್ ಫೈರ್ ಪ್ರೊಟೆಕ್ಷನ್ ಕ್ಯಾಂಪ್
ಕಾಡ್ಗಿಚ್ಚು ತಡೆಗಾಗಿ ಬೆಂಕಿ ತಡೆರೇಖೆ, ವೀಕ್ಷಣಾ ಗೋಪುರ, ಸ್ಟಾರ್ಟಿಂಗ್ ಮೊಬೈಲ್ ಪ್ರೊಟೆಕ್ಷನ್ ಕ್ಯಾಂಪ್ ನೊಂದಿಗೆ ಮೊಬೈಲ್ ಫೈರ್ ಪ್ರೊಟೆಕ್ಷನ್ ಕ್ಯಾಂಪ್ ಸೇರಿಕೊಂಡು ಕಾರ್ಯ ನಿರ್ವಹಿಸಲಿದೆ. ಪ್ರತಿ ವಲಯದಲ್ಲೂ ತಲಾ ಒಂದೊಂದು ವಾಹನ ನಿಯೋಜಿಸಲಾಗಿದ್ದು, ಯಾವುದೇ ಕ್ಷಣದಲ್ಲೂ ಬೆಂಕಿ ಬಿದ್ದ ಸ್ಥಳಕ್ಕೆ ವಾಚರ್ ಹಾಗೂ ಬೇರೆ ಬೇರೆ ವಲಯದ ಸಿಬ್ಬಂದಿ ಕರೆದೊಯ್ಯಲು ಈ ಕ್ಯಾಂಪ್ ಸಜ್ಜಾಗಿರುತ್ತದೆ. ಬೆಂಕಿ ಬಿದ್ದ ಸ್ಥಳದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ವಾಹನಗಳ ಮೂಲಕವೇ ಊಟ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುತ್ತದೆ.
ಬೆಂಕಿ ನಂದಿಸಲು ನಿಯೋಜಿಸಿರುವ ಫೈರ್ ವಾಚರ್ ಗಳು ಬೆಂಕಿ ಬಡಿಯಲು ಪೊರಕೆ ಮಾದರಿಯಲ್ಲಿ ಹಸಿರು ಸೊಪ್ಪಿನ ಗಂಟನ್ನು ಸಿದ್ಧಪಡಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಫೈರ್ ಬ್ಲೋವರ್ ಬಳಸಲಾಗುತ್ತದೆ. ಈಗಾಗಲೇ 55 ಬ್ಲೋವರ್ ಗಳಿದ್ದು, ಹೆಚ್ಚುವರಿಯಾಗಿ 13 ಬ್ಲೋವರ್ ತರಿಸಲಾಗಿದೆ. ವಾಚರ್ ಗಳು ಕಾರ್ಯ ನಿರ್ವಹಿಸಲು ಬೇಕಾದ ಕತ್ತಿ, ವಾಟರ್ ಕ್ಯಾನ್ ತಂದು ಇರಿಸಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಬಂಡೀಪುರ ಸೇರಿದಂತೆ ರಾಜ್ಯದ ಎಲ್ಲಾ ಅರಣ್ಯಗಳಲ್ಲೂ ಅಗ್ನಿಶಾಮಕದ ವಾಹನ ಮತ್ತು ಸಿಬ್ಬಂದಿ ಬೇಸಿಗೆ ನಿರ್ವಹಣೆಗೆ ನಿಯೋಜಿಸಲಾಗುತ್ತದೆ. ಅಲ್ಲದೆ, ಬಂಡೀಪುರದಲ್ಲಿ ಈಗಾಗಲೇ ಕಾಡ್ಗಿಚ್ಚು ನಂದಿಸುವ ಸಂಬಂಧಿಸಿದಂತೆ ಸಿಬ್ಬಂದಿಗೆ ಅಗ್ನಿಶಾಮಕದವರು ತರಬೇತಿ ನೀಡಿದ್ದಾರೆ.
ಕಾಡಂಚಿನ ಗ್ರಾಮಗಳಲ್ಲಿ ಕಾಡ್ಗಿಚ್ಚು ತಡೆಗೆ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶನ, ಭಿತ್ತಿಪತ್ರ, ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಜನವರಿಯಿಂದ ಏಪ್ರಿಲ್ ವರೆಗೂ ಬೇಸಿಗೆ ನಿರ್ವಹಣೆಗೆ ಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡರೂ ಆ ಸ್ಥಳಕ್ಕೆ ಅರ್ಧ ಗಂಟೆಯೊಳಗೆ ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡು, 2 ಗಂಟೆಯೊಳಗೆ ಬೆಂಕಿ ನಂದಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.
- ಡಾ.ಪಿ. ರಮೇಶ್ ಕುಮಾರ್, ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ