ಬಸವರಾಜ ಹಿರೇಮಠ

ಧಾರವಾಡ[ಡಿ.21]: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಡಿಡಿ (ಡ್ರಿಂಕ್‌ ಆ್ಯಂಡ್‌ ಡ್ರೈವ್‌) ಪ್ರಕರಣಗಳ ಸಂಖ್ಯೆ ತೀವ್ರ ಇಳಿಮುಖವಾಗಿದ್ದರೂ ದಂಡದ ಮೊತ್ತ ಮಾತ್ರ ನಾಲ್ಕು ಪಟ್ಟು ಏರಿಕೆಯಾಗಿದೆ!

ಮದ್ಯ ಸೇವನೆ ಮಾಡಿ ಪೊಲೀಸರ ಬಳಿ ಸಿಕ್ಕರೆ ಮೊದಲು 1500ರಿಂದ ಗರಿಷ್ಠ 2,500ರ ವರೆಗೆ ದಂಡ ವಿಧಿಸಲಾಗುತ್ತಿತ್ತು. ಆದರೆ, ಕಳೆದ ಸಪ್ಟೆಂಬರ್‌ ತಿಂಗಳಲ್ಲಿ ನೂತನ ಕಾಯ್ದೆಯಂತೆ ದಂಡದ ಮೊತ್ತ ಪರಿಷ್ಕರಣೆಗೊಂಡಿದ್ದು, 10 ಸಾವಿರ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾದರೂ ಅಧಿಕ ಮೊತ್ತದ ದಂಡ ವಸೂಲಿ ಆಗುತ್ತಿದೆ. ಕಾಯ್ದೆ ಜಾರಿಗೂ ಮುಂಚಿನ ಮೂರು ತಿಂಗಳಲ್ಲಿ 632 ಪ್ರಕರಣಗಳು ದಾಖಲಾಗಿ 11.81 ಲಕ್ಷ ವಸೂಲಿ ಮಾಡಲಾಗಿದ್ದರೆ, ನಂತರದ ಮೂರು ತಿಂಗಳಲ್ಲಿ ಬರೀ 254 ಪ್ರಕರಣಗಳಿಗೆ 27.61 ಲಕ್ಷ ವಸೂಲಿ ಮಾಡಲಾಗಿದೆ.

ಮೊದಲಿನಂತೆಯೇ ನಮ್ಮ ಪೊಲೀಸರ ತಂಡವು ಡಿಡಿ ಪ್ರಕರಣಗಳಲ್ಲಿ ತುಂಬ ಎಚ್ಚರಿಕೆ ವಹಿಸಿ ಕಾರ್ಯಾಚರಣೆ ಮಾಡುತ್ತಿದೆ. ಆದರೆ, ದಂಡದ ಮೊತ್ತ ಏರಿಕೆಯಾದ ಕಾರಣ ಮದ್ಯ ಪ್ರಿಯರು ಹುಷಾರಾಗಿದ್ದಾರೆ. ಅದಕ್ಕಾಗಿಯೇ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಕೆಲವೊಮ್ಮೆ ಮದ್ಯ ಸೇವಿಸಿ ಬರುವ ಬೈಕ್‌ ಮಾಲೀಕರು ನಮ್ಮನ್ನು ನೋಡಿ ಜೋರಾಗಿ ಹೋಗುತ್ತಾರೆ. ಆದ್ದರಿಂದ ಬ್ಯಾರಿಕೇಡ್‌ ಮೂಲಕ ಅವರನ್ನು ತಡೆಯಲಾಗುತ್ತಿದೆ. ವಿಶೇಷ ಕಾರ್ಯಾಚರಣೆ ಮೂಲಕವೂ ಧಾರವಾಡದಲ್ಲಿ ಡಿಡಿ ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಧಾರವಾಡದ ಟ್ರಾಫಿಕ್‌ ಪೊಲೀಸ ಠಾಣೆ ಇನ್‌ಸ್ಪೆಕ್ಟರ್‌ ಮುರುಘೇಶ ಚೆನ್ನಣ್ಣವರ ಹೇಳುತ್ತಾರೆ.

ಎಚ್ಚರಗೊಂಡ ಮದ್ಯ ಪ್ರಿಯರು:

ಈ ವಿಷಯದಲ್ಲಿ ಸಂಚಾರಿ ಪೊಲೀಸರು ಸಹ ಯಾವುದೇ ಮುಲಾಜಿಲ್ಲದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕುಡಿದು ವಾಹನ ಚಾಲನೆ ಮಾಡುವವರು ತುಂಬಾ ಎಚ್ಚರ ವಹಿಸುತ್ತಿದ್ದಾರೆ. ಅಪಾರ ಪ್ರಮಾಣದ ದಂಡದ ಪೆಟ್ಟು ವಾಹನ ಸವಾರರನ್ನು ನಿಯಮ ಪಾಲನೆಗೆ ಪ್ರೇರೇಪಿಸಿದ್ದು, ಅಪ್ಪಿ-ತಪ್ಪಿಯೂ ಮದ್ಯ ಸೇವಿಸಿ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಅಡ್ಡ ರಸ್ತೆಗಳಲ್ಲಿ ಮನೆ ತಲುಪುತ್ತಿದ್ದಾರೆ. ಕೆಲವರಂತೂ ಮದ್ಯ ಸೇವಿಸದೇ ಇರುವ ಸ್ನೇಹಿತರೊಡನೆ ಬಾರ್‌ಗೆ ಬಂದು ಅವರೊಂದಿಗೆ ಮನೆ ಮುಟ್ಟುತ್ತಿದ್ದಾರೆ. ಇನ್ನು, ಹವ್ಯಾಸಕ್ಕಾಗಿ ಮದ್ಯ ಸೇವಿಸುವವರು ಬಾರ್‌ನತ್ತ ಸುಳಿಯದೇ ಮನೆ ಅಥವಾ ಸ್ನೇಹಿತರೊಡನೆ ಊರಿನ ಹೊರಗಡೆಯ ದಾಬಾಗಳನ್ನು ನೋಡಿಕೊಂಡರೆ, ನಿತ್ಯ ಮದ್ಯ ಸೇವಿಸುವವರು ಸ್ಥಿತಿ ಕೇಳುವಂತಿಲ್ಲ. ಎಂಎಸ್‌ಐಎಲ್‌ ಹಾಗೂ ಇತರ ಎಂಆರ್‌ಪಿ ದರದ ಅಂಗಡಿಗಳಿಂದ ಮದ್ಯ ಖರೀದಿಸಿ ವಿವಿಧ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದಾರೆಯೇ ಹೊರತು ಬಾರ್‌ನಲ್ಲಿ ಕುಡಿದು ನಂತರ ಪೊಲೀಸರ ಕೈಗೆ ಸಿಗುತ್ತಿಲ್ಲ.

ಬೈಕ್‌ ಬಿಟ್ಟು ಹೋಗ್ತಿದ್ದಾರೆ:

ಪರಿಷ್ಕೃತ ದಂಡದ ಪರಿಣಾಮ ಎಷ್ಟಾಗಿದೆ ಎಂದರೆ, ಹೆಲ್ಮೆಟ್‌, ಲೈಸೆನ್ಸ್‌ ಅಥವಾ ಸಣ್ಣ-ಪುಟ್ಟಸಂಚಾರಿ ನಿಯಮ ಉಲ್ಲಂಘಿಸಿದರೆ ಗರಿಷ್ಠ ನಾಲ್ಕೈದು ಸಾವಿರ ದಂಡ ಕಟ್ಟಬಹುದು. ಆದರೆ, ಕುಡಿದು ಬೈಕ್‌ ಚಲಾಯಿಸಿ ಆಕಸ್ಮಿಕವಾಗಿ ಪೊಲೀಸರ ಕೈಗೆ ಸಿಕ್ಕ ಹಲವು ಜನರು 10 ಸಾವಿರ ದಂಡ ಕಟ್ಟಲಾಗದೇ ಬೈಕ್‌ಗಳನ್ನು ಪೊಲೀಸ್‌ ಠಾಣೆಯಲ್ಲಿಯೇ ಬಿಟ್ಟು ಹೋದ ಅದೆಷ್ಟೋ ಘಟನೆಗಳು ಹುಬ್ಬಳ್ಳಿ-ಧಾರವಾಡದಲ್ಲಾಗಿವೆ. ಹೊಸ ಬೈಕ್‌ಗಳಿದ್ದರೆ ಅನಿವಾರ್ಯವಾಗಿ ದಂಡ ಕಟ್ಟುವ ಜನರು, ಹಳೆಯ ಬೈಕ್‌ಗಳಾಗಿದ್ದರೆ ಬೈಕ್‌ ಮಾಲೀಕರು ಪೊಲೀಸ ಠಾಣೆಯಲ್ಲಿಯೇ ಬಿಟ್ಟಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಅವಳಿ ನಗರದಲ್ಲಿ ಈ ರೀತಿಯ 60 ಜನರು ದಂಡ ಕಟ್ಟಲಾಗದೇ ತಮ್ಮ ಬೈಕ್‌ಗಳನ್ನು ಸಂಚಾರಿ ಠಾಣೆಯಲ್ಲಿಯೇ ನಿಲ್ಲಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ನಮಗೂ ಏನು ಮಾಡಬೇಕು ಎಂಬ ಗೊಂದಲ ಇದ್ದು, ನ್ಯಾಯಾಲಯಕ್ಕೆ ಈ ಪ್ರಕರಣಗಳನ್ನು ಕಳುಹಿಸಲಾಗಿದೆ ಎಂದು ಟ್ರಾಫಿಕ್‌ ಪೊಲೀಸರೊಬ್ಬರು ತಿಳಿಸಿದರು. ಒಟ್ಟಾರೆ ಹೊಸ ನಿಯಮಾವಳಿಯ ಪರಿಣಾಮ ಮದ್ಯ ಸೇವಿಸಿ ವಾಹನ ಓಡಿಸುವವರಿಗೆ ಮಾತ್ರ ಭಯ ಮೂಡಿಸಿದ್ದು ನಿಜ.

ಧಾರವಾಡ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಡಿಡಿ ಪ್ರಕರಣಗಳ ಸಂಖ್ಯೆ

ಹಳೆಯ ನಿಯಮಾವಳಿ ಪ್ರಕಾರ

ತಿಂಗಳು ಪ್ರಕರಣಗಳ ಸಂಖ್ಯೆ ದಂಡದ ಮೊತ್ತ (ಲಕ್ಷ ರುಪಾಯಿ)

ಜೂನ್‌ 172 3.4

ಜುಲೈ 199 3.69

ಆಗಸ್ಟ್‌ 261 4.72

ಒಟ್ಟು 632 11.81

ಹೊಸ ನಿಯಮಾವಳಿ ಪ್ರಕಾರ

ತಿಂಗಳು ಪ್ರಕರಣಗಳ ಸಂಖ್ಯೆ ದಂಡದ ಮೊತ್ತ

ಸೆಪ್ಟೆಂಬರ್‌ 101 11.60

ಅಕ್ಟೋಬರ್‌ 89 9.45

ನವೆಂಬರ್‌ 64 6.56

ಒಟ್ಟು 254 27.61