ಬೆಳ್ತಂಗಡಿ (ನ.25):  ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ 73ನೇ ಜನ್ಮದಿನವನ್ನು ಬುಧವಾರ ಧರ್ಮಸ್ಥಳದಲ್ಲಿ ಸರಳವಾಗಿ ಆಚರಿಸಲಾಗುತ್ತದೆ.

ಹೆಗ್ಗಡೆ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದಲ್ಲಿ ಬುಧವಾರ ವಿನೂತನ ಕಾರ್ಯಕ್ರಮವೊಂದು ಆರಂಭವಾಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜ ಬಾಂಧವರಿಗೆ ಸಹಾಯ ಹಸ್ತ ನೀಡುವ ‘ವಾತ್ಸಲ್ಯ’ ಎಂಬ ಕಾರ್ಯಕ್ರಮಕ್ಕೆ ಪೂರ್ವಾಹ್ನ 10ಕ್ಕೆ ಚಾಲನೆ ದೊರಕಲಿದೆ. ರಾಜ್ಯಾದ್ಯಂತ ವಿತರಿಸಲ್ಪಡುವ ವಾತ್ಸಲ್ಯ ಕಿಟ್‌ ಸಾಗಿಸುವ ಬೃಹತ್‌ ಟ್ರಕ್‌ಗಳಿಗೆ ಚಾಲನೆ ನೀಡಲಾಗುತ್ತದೆ.

ಕ್ಷೇತ್ರದ ಮುಂಭಾಗದಲ್ಲಿ ಧರ್ಮಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಉದ್ಘಾಟನೆ ನೆರವೇರಿಸುವರು.

ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಟ್ರಸ್ಟಿಡಾ.ಬಿ. ಯಶೋವರ್ಮ, ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಉಪಸ್ಥಿತರಿರುತ್ತಾರೆ.

1948ರಲ್ಲಿ ಜನನ:

ರತ್ನವರ್ಮ ಹೆಗ್ಗಡೆ-ರತ್ನಮ್ಮ ಹೆಗ್ಗಡೆ ದಂಪತಿಗೆ 1948ರ ನ. 25 ರಂದು ವೀರೇಂದ್ರರು ಜನಿಸಿದರು. ಬೆಂಗಳೂರಿನ ಸೈಂಟ್‌ ಜೋಸೆಫ್‌್ಸ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಅಂದರೆ 20ರ ಎಳೆಯ ವಯಸ್ಸಿನಲ್ಲಿ ಧರ್ಮಸ್ಥಳದ ಹೊಣೆಗಾರಿಕೆ ಪ್ರಾಪ್ತವಾಯಿತು. ಪಟ್ಟಾಭಿಷಿಕ್ತರಾಗಿಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಪ್ರಾಯಕ್ಕೆ ಮೀರಿದ ಪ್ರೌಢಿಮೆ ಅವರದ್ದಾಗಿತ್ತು.

ದೇಗುಲಗಳಿಗೆ ಧರ್ಮಸ್ಥಳದಿಂದ 14 ಕೋಟಿ ರು.: ಡಾ.ಹೆಗ್ಗಡೆ ..

ಕ್ಷೇತ್ರವನ್ನು ಹೆಗ್ಗಡೆ ಅವರು ಮುನ್ನಡೆಸಿದ ರೀತಿ, ಅವರ ಚಾಕಚಕ್ಯತೆ, ದೇವಳದ ನವೀಕರಣ ಸಹಿತ ನವ ಧರ್ಮಸ್ಥಳದ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ, ಜನಸಾಮಾನ್ಯರೆಡೆಗಿನ ನಡಿಗೆ, ಗ್ರಾಮಾಭಿವೃದ್ಧಿ, ಸ್ವ-ಉದ್ಯೋಗಕ್ಕಾಗಿ ರುಡ್‌ಸೆಟ್‌, ಸಾರಸ್ವತ, ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ, ಸರ್ವಧರ್ಮ ಸಮನ್ವತೆಯ ವಿಚಾರಧಾರೆ, ವೈಭವಗಳನ್ನು ಹೊತ್ತುತಂದ ತುಳು ಸಮ್ಮೇಳನ, ಕೃಷಿ ಮೇಳಗಳ ಬಗೆಗಿನ ವೈವಿಧ್ಯತೆ ಅನನ್ಯವಾದುದು.

ಶ್ರೀ ಕ್ಷೇತ್ರದಲ್ಲಿನ ಚತುರ್ವಿಧದಾನ ಪರಂಪರೆ, ಲೋಕ ಕಲ್ಯಾಣಾರ್ಥವಾಗಿ ಮಾಡುತ್ತಿರುವ ಕಾರ್ಯ, ಡಾ. ಹೆಗ್ಗಡೆಯವರ ಹವ್ಯಾಸ, ಪ್ರಯೋಗ- ಆವಿಷ್ಕಾರ, ಕ್ರಿಯಾಶೀಲತೆ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅನೇಕ ಸೇವಾ ಕೈಂಕರ್ಯಗಳ ಜನಮಾನಸದಲ್ಲಿಅಚ್ಚೊತ್ತಿವೆ.

ದೇವಸ್ಥಾನದ ಗರ್ಭಗೃಹದ ನವ ನಿರ್ಮಾಣ, ಬಸದಿಯ ಜೀರ್ಣೋದ್ಧಾರ, ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಸೇರಿದಂತೆ ಶ್ರೀ ಕ್ಷೇತ್ರದಲ್ಲಿ ನಡೆದ ಲಕ್ಷದೀಪೋತ್ಸವ, ಮಹಾನಡಾವಳಿಯ ವೈಭವಗಳನ್ನು ಜನತೆ ಕಣ್ತುಂಬಿಕೊಂಡಿದೆ. ಹೆಗ್ಗಡೆ ವ್ಯಕ್ತಿತ್ವ, ರೂಪಿಸಿದ ಯೋಜನೆಗಳ ಅನುಷ್ಠಾನದ ಮೇಲಿರುವ ಬದ್ಧತೆ, ಸಾಮಾಜಿಕ ದೃಷ್ಟಿಕೋನ, ಸಮಾಜ ಸುಧಾರಣೆ, ಸಾಮಾಜಿಕ ಸಹಚರ್ಯೆ ಅಪೂರ್ವವಾದುದು.