Asianet Suvarna News Asianet Suvarna News

ಅಮೃತಕೀರ್ತಿ ಪುರಸ್ಕಾರ ಸ್ವೀಕರಿಸಿದ ಡಾ.ಎಸ್.ಎಲ್. ಭೈರಪ್ಪ

ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಅವರು ಮಾತಾ ಅಮೃತಾನಂದಮಯಿ ದೇವಿಯವರಿಂದ ಅಮೃತ ಕೀರ್ತಿ ಪುರಸ್ಕಾರವನ್ನು ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ಸ್ವೀಕರಿಸಿದರು. ಮಾತಾ ಅಮೃತಾನಂದಮಯಿ ದೇವಿಯವರ 70ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಅಮೃತವರ್ಷಂ- 70’ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 Dr S L Bahirappa received the Amritakirti award   snr
Author
First Published Oct 5, 2023, 8:36 AM IST

 ಮೈಸೂರು :  ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಅವರು ಮಾತಾ ಅಮೃತಾನಂದಮಯಿ ದೇವಿಯವರಿಂದ ಅಮೃತ ಕೀರ್ತಿ ಪುರಸ್ಕಾರವನ್ನು ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ಸ್ವೀಕರಿಸಿದರು. ಮಾತಾ ಅಮೃತಾನಂದಮಯಿ ದೇವಿಯವರ 70ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಅಮೃತ ವರ್ಷಂ- 70’ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಮೃತ ಕೀರ್ತಿ ಪುರಸ್ಕಾರವು ಮಾತಾ ಅಮೃತಾನಂದಮಯಿ ಮಠದ ಪುರಸ್ಕಾರವಾಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ವೇದ ಸಂಪ್ರದಾಯಗಳಿಗೆ ಅಮೋಘ ಕೊಡುಗೆ ನೀಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಾನವೀಯ ಮೌಲ್ಯಗಳು, ಪುರಾತನ ಭಾರತೀಯ ಸಂಸ್ಕೃತಿ ಹಾಗೂ ಸನಾತನ ಧರ್ಮವನ್ನು ಸಂರಕ್ಷಣೆಗೆ ಸಹಕರಿಸುವ ನಿಟ್ಟಿನಲ್ಲಿ ಈ ಸೂಕ್ತ ವ್ಯಕ್ತಿಗಳನ್ನು ಈ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಗುತ್ತಿದೆ.

ಅಮೃತ ಕೀರ್ತಿ ಪ್ರಶಸ್ತಿಯು 1,23,456 ರು. ಸರಸ್ವತಿ ದೇವಿಯ ವಿಗ್ರಹ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.

ಡಾ.ಎಸ್.ಎಲ್. ಭೈರಪ್ಪ ಅವರ ಜೊತೆಗೆ ಖ್ಯಾತ ವೇದ ಪಂಡಿತ ಪ್ರೊ. ಶ್ರೀವರಾಹಂ ಚಂದ್ರಶೇಖರನ್ ನಾಯರ್, ವೇದ ಸಾಹಿತ್ಯ ಪಾರಂಗತರಾದ ಆಚಾರ್ಯ ರಾಜೇಶ್, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವದ್ಯಾನಿಲಯದ ವಿಶ್ರಾಂತ ಕುಲಪತಿಗಳಾಗಿರುವ ಡಾ.ಕೆ.ಎಸ್. ರಾಧಾಕೃಷ್ಣನ್ ಅವರಿಗೂ ಸಹ 2020, 2021, 2022 ಹಾಗೂ 2023ರ ಸಾಲಿನ ಅಮೃತ ಕೀರ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೇರಳ ರಾಜ್ಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಖಾತೆಯ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ, ವಿಶ್ವಸಂಸ್ಥೆಯ 193 ದೇಶಗಳ ಪ್ರತಿನಿಧಿಗಳು, ಮಾತಾ ಅಮೃತಾನಂದಮಯಿಯವರ ಪ್ರಪಂಚದಾದ್ಯಂತದ ಭಕ್ತರು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಹಿತ್ಯದ ಮೂಲಕ ಜೀವಂತ ಇರುತ್ತೇನೆ

ಬೆಂಗಳೂರು (ಅ.2): ಯಾವುದೇ ಸಾಹಿತ್ಯ ಸಮಕಾಲೀನವಾಗಿರಬೇಕು, ಸದ್ಯದ ಕಾಲಮಾನಕ್ಕಲ್ಲದೆ ಮುಂದಿನ ಶತಮಾನದ ಕಾಲಕ್ಕೂ ಪ್ರಸ್ತುತವಾಗಿರಬೇಕು. ಸಾಹಿತ್ಯ ಪ್ರಸ್ತುತವಾಗಿರದಿದ್ದರೆ ಅದನ್ನು ಬರೆದಿರುವುದರ ಪ್ರಯೋಜನ ಇರುವುದಿಲ್ಲ ಎಂದು ಕಾದಂಬರಿಕಾರ ಎಸ್‌.ಎಲ್ .ಭೈರಪ್ಪ ಹೇಳಿದರು.

ತಮ್ಮ 'ಪರ್ವ' ಕಾದಂಬರಿ ಇಂಗ್ಲಿಷ್ ಭಾಷೆಯಲ್ಲಿ ನಾಟಕವಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪರ್ವ ನನ್ನ ಬರವಣಿಗೆಯಲ್ಲಿನ ಒಂದು ಕ್ಲಾಸಿಕ್ ಕೃತಿ ಪರ್ವಕ್ಕೆ ಪ್ರಶಸ್ತಿಗಳು ಬಂದಿರಬಹುದು. ನಾನು ಮರಣ ಹೊಂದಿದ ನಂತರವೂ ಸಾಹಿತ್ಯದ ಮೂಲಕ ಜೀವಂತವಾಗಿರುತ್ತೇನೆ. ಅದುವೇ ನನಗೆ ಹೆಚ್ಚು ಖುಷಿ ತರುತ್ತದೆ. ಪ್ರಸ್ತುತತೆ ಕಾಯ್ದುಕೊಳ್ಳುವುದೇ ಸಾಹಿತ್ಯ ರಚನೆಯಲ್ಲಿ ನಾನು ಅನುಸರಿಸುವ ಮಾನದಂಡ ಎಂದರು.

ಎಸ್‌.ಎಲ್.ಭೈರಪ್ಪ: ತಮ್ಮ ಸತ್ತಾಗ ಅಂತ್ಯಕ್ರಿಯೆಗೆ ಯಾರೂ ಬರಲಿಲ್ಲ, ತಿನ್ನಲು ತುತ್ತು ಆಹಾರವನ್ನೂ ಕೊಡಲಿಲ್ಲ

ರಷ್ಯಾ ಮತ್ತು ಯುರೋಪಿಗಿಂತ ಭಾರತದ ವೈವಿಧ್ಯತೆ, ಭೂಗೋಳಿಕ ಸಂಪತ್ತು, ಸಾಂಸ್ಕೃತಿಕತೆ, ಶಿಲ್ಪಕಲೆಯು ಶ್ರೀಮಂತವಾಗಿದೆ. ಭಾರತದ ಜೀವ ನಾಡಿಗಳೇ ಹಳ್ಳಿಗಳು. ಹೀಗಾಗಿಯೇ ಗುಜರಾತ್, ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉದ್ಯೋಗ ಮಾಡುವಾಗ ತಾವು ನಗರದಿಂದ 60-70 ಕಿ.ಮೀ ದೂರದಲ್ಲಿರುವ ಹಳ್ಳಿಗಳಿಗೆ ಹೋಗುತ್ತಿದ್ದೆ. ಒಬ್ಬರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದೆ. ಆ ವೇಳೆ ಗ್ರಾಮಸ್ಥರಿಂದ ಸ್ಥಳೀಯ ಭಾಷೆ, ಆಚಾರ, ಸಂಸ್ಕೃತಿ, ಜನಾಂಗ, ಜೀವನಶೈಲಿ, ರಾಜಕೀಯಗಳ ಮಾಹಿತಿ ಪಡೆಯುತ್ತಿದ್ದೆ. ಅವು ನನ್ನ ಕಾದಂಬರಿಯಲ್ಲಿ ಪ್ರತಿ ಬಿಂಬಿಸುತ್ತಿದ್ದವು ಎಂದು ತಿಳಿಸಿದರು.

ತಮ್ಮ ಬರವಣಿಗೆ, ಕಾದಂಬರಿಗಳು ಭಾರತೀಯ ಕಥೆಗಳು ಆಗಿವೆ. ನನ್ನ ಸಂಪೂರ್ಣ ಪ್ರೀತಿ ಭಾರತದ್ದಾ ಗಿದೆ. 'ಪರ್ವ', 'ದಾಟು' ಕಾದಂಬರಿಗಳು ಇಡೀ ಭಾರತದ ಕತೆ, ದಾಟು ಓದಿದ ಪಂಜಾಬಿಗಳು, ಮಧ್ಯ ಪ್ರದೇಶದವರು ನಮ್ಮೂರಿನ ಕಥೆ ಎಂದು ಹೇಳಿದರು ಆದರಿಂದ ನಮ್ಮ ಕಾದಂಬರಿಗಳು ಇಡೀ ಭಾರತದ ಕಥೆಯಾಗಿರಬೇಕು. ಸಾಮಾನ್ಯವಾಗಿ ಸಾಹಿತಿಗಳು ಇತರೆ ರಾಜ್ಯ-ದೇಶ ಹೋದರೆ ಅಲ್ಲಿನ ರಾಜಧಾನಿ ನಗರಕ್ಕೆ ಭೇಟಿ ನೀಡುತ್ತಾರೆ; ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ. ಹೀಗೆ ಮಾಡಿದರೆ ಅನುಭವ ವಿಸ್ತಾರವಾ ಗುವುದಿಲ್ಲ. ದೂರದ ಹಳ್ಳಿಗಳನ್ನು ಸುತ್ತಾಡಿದರೆ ಅನುಭವ ಸಮೃದ್ಧಿಯಾಗುತ್ತದೆ. ಲೇಖಕರು. ಅನುವಭದ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾದಂಬರಿಗೆ ತೂಕ ಬರಬೇಕಾದರೆ ಆಳವಾದ ಚಿಂತನೆ ಬೇಕು: ಎಸ್.ಎಲ್.ಭೈರಪ್ಪ

ಪರ್ವ ಇಂಗ್ಲಿಷ್ ನಾಟಕವನ್ನು ನಿರ್ದೇಶಿಸಿರುವ ನಟ ಮತ್ತು ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಿ, ಪರ್ವ ಕಾದಂಬರಿಯನ್ನು ಕನ್ನಡದಲ್ಲಿ ಓದುವುದಕ್ಕೂ ಇಂಗ್ಲಿಷ್‌ನಲ್ಲಿ ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂಗ್ಲಿಷಿನಲ್ಲಿ ಓದಿದರೆ ಕಣ್ಣೀರು ಬರಲಿಲ್ಲ ಎಂದರು. ಅದೇ ಕನ್ನಡದಲ್ಲಿ ಪರ್ವ ಓದಿದಾಗ, ನಾಟಕ ಅಭ್ಯಾಸ ಮಾಡುವಾಗಲೂ ಅತ್ತಿದ್ದೇನೆ. ಭೈರಪ್ಪ ಅವರು ಕನ್ನಡದಲ್ಲಿ ಬಳಸಿರುವ ಭಾಷೆಯನ್ನು . ಯಥಾವತ್ತಾಗಿ ಇಂಗ್ಲಿಷ್‌ ಗೆ ತರ್ಜುಮೆ ಮಾಡುವುದು ಬಹಳ ಕಷ್ಟ. ಅದನ್ನು ಕಲಾತ್ಮಕವಾಗಿ ಹಾಗೂ ಕಾವ್ಯಾತಕವಾಗಿ ಹೇಳಲು ಪ್ರಯತ್ನಿಸಿರುವೆ ಎಂದು  ವಿವರಿಸಿದರು.

Follow Us:
Download App:
  • android
  • ios