ಡಾ ಬನ್ನಂಜೆ ಮ್ಯೂಸಿಯಂ ಉದ್ಘಾಟನೆ, ಜ್ಞಾನದೇಗುಲ ಪ್ರಶಸ್ತಿ ಪ್ರದಾನ
ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಮ್ಯೂಸಿಯಂ ಉದ್ಘಾಟನೆ ಮತ್ತು ಈಶಾವಾಸ್ಯಂ ಪ್ರತಿಷ್ಠಾನ ಉಡುಪಿ, ಇದರ ವತಿಯಿಂದ ಹಿರಿಯರ ನೆನಪು ಶೀರ್ಷಿಕೆಯಲ್ಲಿ ಕೊಡಲ್ಪಡುವ ಜ್ಞಾನದೇಗುಲ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು
ಉಡುಪಿ (ಆ.16): ಬಹುಶ್ರುತ ವಿದ್ವಾಂಸ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಮ್ಯೂಸಿಯಂ ಉದ್ಘಾಟನೆ ಮತ್ತು ಈಶಾವಾಸ್ಯಂ ಪ್ರತಿಷ್ಠಾನ ಉಡುಪಿ, ಇದರ ವತಿಯಿಂದ ಹಿರಿಯರ ನೆನಪು ಶೀರ್ಷಿಕೆಯಲ್ಲಿ ಕೊಡಲ್ಪಡುವ ಜ್ಞಾನದೇಗುಲ ಪ್ರಶಸ್ತಿ ಪ್ರದಾನ ಸಮಾರಂಭ ವು ಆಚಾರ್ಯರ ಸ್ವಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ನೆರವೇರಿತು. ಶ್ರೀಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮ್ಯೂಸಿಯಂ ಉದ್ಘಾಟಿಸಿ ಪ್ರಶಸ್ತಿಪ್ರದಾನಗೈದು ಶುಭ ಸಂದೇಶ ನೀಡಿದರು . ವಿದ್ವಾನ್ ರಾಮನಾಥ ಆಚಾರ್ಯರು ಡಾ ಬನ್ನಂಜೆಯವರ ಅಧ್ಯಯನ ವೈಖರಿಯನ್ನು ವಿಶ್ಲೇಷಿಸಿ ಮಾತನಾಡಿದರು. ಈ ಸಂದರ್ಭ , ಮಧ್ವಶಾಸ್ರ್ತದ ವಿಷಯವೊಂದರ ಮೇಲೆ ಅಧ್ಯಯನ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದ ಹಾಗೂ ಅನೇಕ ವಿಷಯಗಳಲ್ಲಿ ಮೌನಸಾಧನೆಗೈದ ಡಾ ಉಷಾ ಚಡಗ ಮತ್ತು ಜನಪ್ರತಿನಿಧಿಯಾಗಿ ಉಡುಪಿಯ ಸಾಂಸ್ಕೃತಿಕ ಸಾಹಿತ್ಯಿಕ ವಲಯಕ್ಕೂ ಬಹುವಾಗಿ ಸೇವೆ ಸಲ್ಲಿಸುತ್ತಿರುವ ಶಾಸಕ ರಘುಪತಿ ಭಟ್ಟರಿಗೆ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ಜ್ಞಾನದೇಗುಲ ಪ್ರಶಸ್ತಿ ಯನ್ನು ಶ್ರೀಗಳವರು ಪ್ರದಾನಿಸಿ ಪ್ರಶಸ್ತಿ ಪುರಸ್ಕೃತ ರನ್ನು ಅಭಿನಂದಿಸಿದರು. ಶಾಸಕ ಭಟ್ ಮತ್ತು ಡಾ ಉಷಾ ಚಡಗರು ತಮಗೆ ನೀಡಿದ ಗೌರವಕ್ಕಾಗಿ ಧನ್ಯತೆಯನ್ನು ವ್ಯಕ್ತಪಡಿಸಿ ಈ ನೆಲ ಕಂಡ ಧೀಮಂತರಾದ ಡಾ ಬನ್ನಂಜೆಯವರು ಮತ್ತವರ ಹಿರಿಯರ ನೆನಪಿನಲ್ಲಿ ಆಶೀರ್ವಾದ ರೂಪದಲ್ಲಿ ದೊರೆತ ಈ ಪ್ರಶಸ್ತಿಯಿಂದ ಧನ್ಯರಾಗಿದ್ದು ಇದು ನಮ್ಮ ಪೂರ್ವಜನ್ಮಸುಕೃತ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಉದ್ಯಮಿ ರಾಘವೇಂದ್ರ ಆಚಾರ್ಯ ಪ್ರಸ್ತಾವನೆಗೈದು ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಣೆಗೈದು , ವಿನಯಭೂಷಣ ಆಚಾರ್ಯ ವಂದನಾರ್ಪಣೆಗೈದರು. ರಮಾ ಆಚಾರ್ಯ ಯಾಸ್ಕ ಆಚಾರ್ಯ , ಮೇದಿನಿ ಆಚಾರ್ಯ , ಅಭಿರಾಮ ತಂತ್ರಿ ರಾಹುಲ್ , ಸರ್ವಜ್ಞ ಆಚಾರ್ಯ ಮೊದಲಾದವರು ಸಹಕರಿಸಿದರು.
ಮಾಧ್ವ ಶಾಸ್ತ್ರದಲ್ಲಿ ಪಿಎಚ್ ಡಿ ಪಡೆದ ಮೊದಲ ಮಹಿಳೆ : ಡಾ ಉಷಾ ಚಡಗ
ಆರಂಭದಲ್ಲಿ ತಿರುವಂತಪುರ ಮೆಡಿಕಲ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನಿಯಾಗಿದ್ದು ತಮ್ಮ 60 ರ ವಯಸ್ಸಿನಲ್ಲಿ ತತ್ತ್ವ ಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಅದಕ್ಕಾಗಿ ಸಂಸ್ಕೃತ ಭಾಷೆ ಕಲಿತು ಮಧ್ವಾಚಾರ್ಯರು ಸಾರಿದ ಜೀವ ಸ್ವಭಾವ ವಾದ ಮತ್ತು ಭಗವಂತನ ಸರ್ವಶಬ್ದವಾಚ್ಯತ್ವ ಎಂಬ ವಿಷಯದಲ್ಲಿ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಮಂಗಳೂರು ವಿವಿಯಿಂದ ಪದವಿ ಪಡೆದರು . ನೂರೈವತ್ತಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ವೇದಾಂತ ಶಾಸ್ರ್ತದಲ್ಲಿ ವಿದ್ವತ್ ಪಡೆದ ಮತ್ತು ಮಾಧ್ವ ಶಾಸ್ತ್ರದಲ್ಲಿ ಪಿಎಚ್ ಡಿ ಪಡೆದ ಮೊದಲ ಮಹಿಳೆಯಾಗಿದ್ದಾರೆ. ಈ ಸಾಧನೆಗೆ ಡಾ ಬನ್ನಂಜೆಯವರೇ ಮೂಲ ಪ್ರೇರಣೆ.
ಇಲ್ಲಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವೃಂದಾವನ ಸನ್ನಿಧಿಯಲ್ಲಿ ಮೂರು ದಿನಗಳ ಶ್ರೀಗುರುರಾಯರ 351 ನೇ ಆರಾಧನೋತ್ಸವವು ವೈಭವದಿಂದ ಸಂಪನ್ನಗೊಂಡಿತು .