ಬಿಜೆಪಿ ನಾಯಕರ ಡೋಂಗಿ ಮಾತಿಗೆ ಮರಳಾಗದಿರಿ: ಸಿದ್ದರಾಮಯ್ಯ
ಚುನಾವಣೆ ಸಂದರ್ಭದಲ್ಲಿ ಮಾತ್ರ ಹಿಂದುಳಿದ ವರ್ಗಗಳನ್ನು ನೆನಪು ಮಾಡುವ ಬಿಜೆಪಿ ಪಕ್ಷದ ಡೋಂಗಿ ನಾಯಕರ ಮಾತಿಗೆ ರಾಜ್ಯದ ಜನತೆ ಮರುಳಾಗದಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಿರಿಯಾಪಟ್ಟಣ : (ನ.15): ಚುನಾವಣೆ ಸಂದರ್ಭದಲ್ಲಿ ಮಾತ್ರ ಹಿಂದುಳಿದ ವರ್ಗಗಳನ್ನು ನೆನಪು ಮಾಡುವ ಬಿಜೆಪಿ ಪಕ್ಷದ ಡೋಂಗಿ ನಾಯಕರ ಮಾತಿಗೆ ರಾಜ್ಯದ ಜನತೆ ಮರುಳಾಗದಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಶ್ರೀಕನಕದಾಸರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿ, ಎಸ್ಸಿ, ಎಸ್ಟಿ (SC ST) ಮೀಸಲಾತಿ ಹೆಚ್ಚಳ ಸಂಬಂಧ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಯೋಗ ರಚಿಸಲಾಗಿತ್ತು. ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯೊಗ ವರದಿ ನೀಡಿದರೂ ಎರಡು ವರ್ಷ ಸುಮ್ಮನಿದ್ದು ನಾಯಕ ಜನಾಂಗದ ಸ್ವಾಮೀಜಿಗಳು 257 ದಿನ ಮೀಸಲಾತಿ ಹೆಚ್ಚಳಕ್ಕೆ ಧರಣಿ ನಡೆಸಿದರು. ನಿರ್ಲಕ್ಷ್ಯ ವಹಿಸಿದಾಗ ನಮ್ಮ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಒತ್ತಡ ಹೇರಿದ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳ ಜಾರಿಗೊಳಿಸಿ ಬಿಜೆಪಿ ಸರ್ಕಾರದ ಕ್ರಾಂತಿಕಾರಕ ಬದಲಾವಣೆ ಎನ್ನುತ್ತಿರುವುದು ಅಪಹಾಸ್ಯಕರ. ಸ್ವಾಮೀಜಿಗಳು ಧರಣಿ ಕುಳಿತಿದ್ದಾಗ ನಿಮ್ಮ ಒಲವು ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ವಿಧಾನಸೌಧ ಬಳಿ ನಿರ್ಮಿಸಿದ ಕನಕ ಹಾಗೂ ವಾಲ್ಮೀಕಿ ಮೂರ್ತಿಗಳಿಗೆ ಮೋದಿ ಅವರು ಬಂದು ಹಾರ ಹಾಕಿ ನಾವು ನಾಯಕರ ಪರ, ಕುರುಬರ ಪರ ಎಂದು ರಾಜಕೀಯಕ್ಕಾಗಿ ಏನು ಬೇಕಾದರೂ ನಾಟಕವಾಡುತ್ತಾರೆ. ಅಂತಹ ಜನರಿಂದ ದೂರವಿರಬೇಕು, ಬಡವರ ಹಿಂದುಳಿದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಜನತೆ ಮುಂದಾಗಬೇಕು. ಚಿಕ್ಕ ವಯಸ್ಸಿನಲ್ಲಿ ಹಸಿವಿನಿಂದ ಬಳಲುತ್ತಿದ್ದವರನ್ನು ಕಂಡು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಉಚಿತವಾಗಿ ಅಕ್ಕಿ ನೀಡುವ ಮೂಲಕ ಹಸಿವಿನ ಕೊರತೆ ನೀಗಿಸಿದೆ ಎಂದರು.
ವಚನ ಮತ್ತು ದಾಸ ಸಾಹಿತ್ಯ ಕನ್ನಡ ಭಾಷೆಯ ಮೈಲಿಗಲ್ಲಾಗಿದ್ದು ವೈದಿಕ ಧರ್ಮದವರು ಸಂಸ್ಕೃತದಲ್ಲಿ ಜನತೆಗೆ ಅರ್ಥವಾಗದ ರೀತಿಯಲ್ಲಿ ಶ್ಲೋಕಗಳನ್ನು ರಚಿಸುತ್ತಿದ್ದಾಗ ಬಸವಾದಿ ಶರಣರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಕೀರ್ತನೆ ವಚನಗಳನ್ನು ರಚಿಸಿ ಸಮಾಜದ ಕ್ರಾಂತಿಗೆ ಮುನ್ನುಡಿ ಬರೆದರು. ಅಂತಹವರ ಸಾಲಿನಲ್ಲಿ ಕನಕದಾಸರು ಅಗ್ರಗಣ್ಯರು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಜಾತಿ ಮತದ ಹಂಗು ತೊರೆದು ಸರ್ವಜನಾಂಗದವರು ಕೂಡಿ ಬಾಳಬೇಕೆಂಬ ವಿಶ್ವಮಾನವ ಸಂದೇಶ ಸಾರಿದ ಶರಣರು ಕನಕದಾಸರು ಅಂತಹ ಮಹನೀಯರು ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಸಮಾಜದ ಜಾಗೃತಿಗಾಗಿ ಮನುಷ್ಯನ ಹುಟ್ಟಿನ ಬಗ್ಗೆ ಪ್ರಪಂಚಕ್ಕೆ ಸಂದೇಶ ಸಾರಿದ ಮಹಾನ್ ಸಂತ ಕನಕದಾಸರು. ಸಿದ್ದರಾಮಯ್ಯ ಅವರು ಸಂವಿಧಾನ ಪಾಲಿಸುವ ವಿಧೇಯಕ ವಿದ್ಯಾರ್ಥಿಯಾಗಿ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ ಎಂದರು.
ಮಾಜಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ರಾಜ್ಯದ ಎಲ್ಲಾ ವರ್ಗದ ಹಿಂದುಳಿದ ಜನರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ ಸಿದ್ದರಾಮಯ್ಯ. ಅಂತಹ ಮಹನೀಯರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ನಿಕಿತ್‌ರಾಜ್ ಮೌರ್ಯ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿ ನಿರ್ಮಾಣವಾಗಿರುವ ಕನಕದಾಸರ ಪ್ರತಿಮೆ ಅನಾವರಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಹೂ ಮಳೆ ಸುರಿಸಿ ಜೈಕಾರದೊಂದಿಗೆ ಬರಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ಗಣ್ಯರು ಮಾತನಾಡುತ್ತಿದ್ದ ವೇಳೆ ಹಾರ ತುರಾಯಿ ಹಾಕಲು ಬಂದ ಕಾರ್ಯಕರ್ತರನ್ನು ಗದರಿದ ಸಿದ್ದರಾಮಯ್ಯ ಅವರು ಮೈಕ್ ಹಿಡಿದು ಬೇರೆಯವರು ಮಾತನಾಡುತ್ತಿದ್ದ ವೇಳೆ ಕಿರಿಕಿರಿ ಉಂಟು ಮಾಡಿದೆ ಸಭಾ ಮರ್ಯಾದೆ ಕಾಪಾಡಬೇಕು ಎಂದು ಕೋರಿದರು.
ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದ ವೇಳೆ ಹೌದು ಹುಲಿಯಾ ಘೋಷಣೆ ಕಾರ್ಯಕರ್ತರಿಂದ ಆಗಾಗ್ಗೆ ಕೇಳಿ ಬರುತ್ತಿತ್ತು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂಬ ಜೈಕಾರ ಸಹ ಕೇಳಿ ಬಂದಿತ್ತು.
ಈ ವೇಳೆ ಕಗ್ಗುಂಡಿ ಹರಳಯ್ಯ ಮಠದ ಗುರು ರುದ್ರಪ್ಪ ಸ್ವಾಮೀಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್‌ಕುಮಾರ್, ಕುರುಬ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಎಚ್.ಡಿ. ಗಣೇಶ್, ಮುಖಂಡರಾದ ಲಕ್ಷ್ಮಣ…, ಮಂಜುನಾಥ್, ಗುಂಡೂರಾವ್, ನಿತಿನ್ ವೆಂಕಟೇಶ್, ಜೆ.ಜೆ. ಆನಂದ್, ರಹಮತ್ ಜಾನ್ ಬಾಬು, ಡಿ.ಟಿ. ಸ್ವಾಮಿ, ಅನಿತಾ ತೋಟಪ್ಪಶೆಟ್ಟಿ, ಸರಸ್ವತಿ, ಪದ್ಮಲತಾ, ನಿರೂಪಾ ರಾಜೇಶ್, ಪಿ. ಮಹದೇವ್, ಕಾಂಗ್ರೆಸ್ ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮಸ್ಥರು ಇದ್ದರು.