Mandya: ಪತಿಯ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಪ್ರಕರಣ: ಕಾಲಿನ ಭಾಗ ವಾಪಸ್‌ ಪಡೆದ ವೈದ್ಯರು

ಮಿಮ್ಸ್‌ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಾರ್ವಜನಿಕರ ತೀವ್ರ ಆಕ್ರೋಶ

Doctors Inhumanity in Mandya grg

ಮಂಡ್ಯ(ಸೆ.07):  ಗ್ಯಾಂಗ್ರೀನ್‌ ಕಾಯಿಲೆಗೊಳಗಾಗಿದ್ದ ವ್ಯಕ್ತಿಯೊಬ್ಬನ ಕಾಲನ್ನು ಕತ್ತರಿಸಿ ಅದನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಹೂಳುವಂತೆ ಪತ್ನಿಯ ಕೈಗೆ ನೀಡಿರುವ ಅಮಾನವೀಯ ಘಟನೆ ಮಂಗಳವಾರ ಮಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿತ್ತು. ವೈದ್ಯರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವೈದ್ಯರು ಕಾಲಿನ ಭಾಗ ವಾಪಸ್‌ ಪಡೆದಿದ್ದಾರೆ.  ಗ್ಯಾಂಗ್ರೀನ್‌ಗೆ ಒಳಗಾದ ಮೊಣಕಾಲಿನ ಕೆಳಭಾಗವನ್ನು ಆಪರೇಷನ್‌ ಮಾಡಿ ದೇಹದಿಂದ ಬೇರ್ಪಡಿಸಿದ ಬಳಿಕ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿರುವುದು ವೈದ್ಯಾಧಿಕಾರಿಗಳ ಕರ್ತವ್ಯ. ಅದನ್ನು ಬಿಟ್ಟು ಕೊಳೆತಿರುವ ಕಾಲಿನ ಭಾಗವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಕೊಡುವುದು ಯಾವ ವೈದ್ಯಧರ್ಮ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.

ನೀನ್ ಬೇಡ..ನನಗೆ ಬಾಯ್‌ಫ್ರೆಂಡೇ ಬೇಕು ಎಂದ ಪತ್ನಿ ಗಂಡನನ್ನೇ ಕೊಂದಳು..!

ಗ್ಯಾಂಗ್ರೀನ್‌ ಕಾಯಿಲೆಗೆ ತುತ್ತಾಗಿದ್ದ ಪ್ರಕಾಶ್‌ಗೆ ಕಾಯಿಲೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಆಪರೇಷನ್‌ ಮಾಡಿಸಲು ಶನಿವಾರದಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರ್ನಾಲ್ಕು ದಿನ ಚಿಕಿತ್ಸೆ ಕೊಟ್ಟು ಮಂಗಳವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಮಾಡಿ ಕಾಲನ್ನು ಕತ್ತರಿಸಿದ್ದಾರೆ. ಬಳಿಕ ಗ್ಯಾಂಗ್ರೀನ್‌ನಿಂದ ಹಾನಿಗೊಳಗಾಗಿದ್ದ ಕಾಲನ್ನು ವೈದ್ಯಕೀಯ ನಿಯಮಾನುಸಾರ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಕಾಲು ಕಳೆದುಕೊಂಡ ವ್ಯಕ್ತಿಯ ಪತ್ನಿಗೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಕೊಟ್ಟು ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಕಾಲು ಕಳೆದುಕೊಂಡ ಪತಿಯನ್ನು ನೋಡಲಾಗದೆ, ಕೈಯ್ಯಲ್ಲಿರುವ ಕಾಲನ್ನು ಏನು ಮಾಡಬೇಕೆಂದು ತೋಚದೆ ಭಾಗ್ಯಮ್ಮ ಅಸಹಾಯಕಳಾಗಿ ಅಳುತ್ತಾ ಆಸ್ಪತ್ರೆ ಹೊರಗೆ ಕುಳಿತಿದ್ದರು. ಮಕ್ಕಳು, ಬಂಧು-ಬಳಗವಿಲ್ಲದೆ ಅಳುತ್ತಾ ಕುಳಿತಿದ್ದ ಮಹಿಳೆಯನ್ನು ಸಾರ್ವಜನಿಕರು ಪ್ರಶ್ನಿಸಿದಾಗ ನಡೆದದ್ದನ್ನೆಲ್ಲಾ ಹೇಳಿದರು. ವೈದ್ಯಾಧಿಕಾರಿಗಳ ನಡವಳಿಕೆಗೆ ಸಾರ್ವಜನಿಕರು ತೀವ್ರವಾಗಿ ಕಿಡಿಕಾರಿದರು.

ಎಲ್ಲಾದರೂ ಹೂಳು

ನನ್ನ ಗಂಡ ಗ್ಯಾಂಗ್ರೀನ್‌ಗೆ ಒಳಗಾಗಿದ್ದರು. ಆಪರೇಷನ್‌ ಮಾಡಿ ಕಾಲು ತೆಗೆದು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಕೊಟ್ಟರು. ಇದನ್ನು ಎಲ್ಲಿಯಾದರೂ ಹೂಳುವಂತೆ ಹೇಳಿದರು. ಏನು ಮಾಡಬೇಕೆಂಬುದೇ ತೋಚಲಿಲ್ಲ. ನನಗೆ ಮಕ್ಕಳಿಲ್ಲ. ಬಂಧುಗಳಿಲ್ಲ. ನನ್ನ ಗಂಡ ಯಾವ ಪರಿಸ್ಥಿತಿಯಲ್ಲಿದ್ದಾರೋ ಗೊತ್ತಿಲ್ಲ. ಆಪರೇಷನ್‌ ಆದ ಬಳಿಕ ಅವರ ಮುಖವನ್ನೇ ನೋಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡೋದು ಎಂದಾಗ ಏನಾದರೂ ಮಾಡಿಕೋ ಹೋಗಮ್ಮ ಎಂದುಬಿಟ್ಟರು ಅಂತ ಕೀಲಾರದ ಭಾಗ್ಯಮ್ಮ ತಿಳಿಸಿದ್ದಾರೆ. 

ಮಾನವೀಯತೆಯೇ ಇಲ್ಲ

ಮಿಮ್ಸ್‌ ವೈದ್ಯಾಧಿಕಾರಿಗಳಿಗೆ ಕನಿಷ್ಠ ಮಾನವೀಯತೆ ಇಲ್ಲ. ಗಂಡ ಕಾಲು ಕಳೆದುಕೊಂಡಿರುವ ದುಃಖದಲ್ಲಿರುವ ಹೆಂಡತಿ ಕೈಗೆ ಆಪರೇಷನ್‌ ಮಾಡಿ ತೆಗೆದ ಕಾಲನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಕೊಡುವುದು ಸರಿಯೇ. ಆ ಕಾಲನ್ನು ಈಕೆಯಲ್ಲದೆ ಬೇರೆಯವರು ತೆಗೆದುಕೊಂಡು ಹೋಗುವುದಕ್ಕೂ ಹಣ ಕೊಡಬೇಕಂತೆ. ಸಂಕಷ್ಟದಲ್ಲಿರುವವರ ಬಳಿ ಸುಲಿಗೆ ಮಾಡುವುದು ಇವರ ಕಾಯಕವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಅಂತ ಶ್ರೀಧರ್‌ಮ ಎಂಬುವರು ಹೇಳಿದ್ದಾರೆ.  

ಕಾಲಿನ ಭಾಗ ವಾಪಸ್‌ ಪಡೆದಿದ್ದೇವೆ: ಡಾ.ಮಹೇಂದ್ರ

ರೋಗಿಯ ಮೊಣಕಾಲಿನ ಕೆಳಭಾಗವನ್ನು ತೆಗೆಯಲಾಗಿತ್ತು. ಅದನ್ನ ಬಯೋಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಆಂಡ್‌ ಆಡ್ಲಿಂಗ್‌ ರೂಲ್ಸ್‌ ಪ್ರಕಾರ ರೋಗಿಯ ಕಡೆಯವರಿಗೆ ಕೊಡಬಾರದು. ವಿಲೇವಾರಿಗೆ ಒಪ್ಪಂದ ಮಾಡಿಕೊಂಡಿರುವವರ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಬೇಕು ಎಂದು ಮಿಮ್ಸ್‌ ನಿರ್ದೇಶಕ ಡಾ.ಮಹೇಂದ್ರ ಹೇಳಿದರು.

Heavy Rain: ಮಂಡ್ಯದಲ್ಲಿ ವರುಣಾರ್ಭಟಕ್ಕೆ ಹಳ್ಳಿ ರಸ್ತೆ ಹಾಳು: ಕಬ್ಬು ಸಾಗಣೆಗೆ ಸಂಕಷ್ಟ

ದುರದೃಷ್ಟವಶಾತ್‌ ಆಪರೇಷನ್‌ ಮೂಲಕ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಡಿ-ಗ್ರೂಪ್‌ ಸಿಬ್ಬಂದಿ ಕೊಟ್ಟಿದ್ದಾರೆ. ಆಕೆಗೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ನನ್ನ ಗಮನಕ್ಕೆ ಬಂದ ತಕ್ಷಣವೇ ಅದನ್ನು ವಾಪಸ್‌ ಪಡೆಯಲಾಗಿದೆ. ವೈದ್ಯಕೀಯ ನಿಯಮಾವಳಿ ಪ್ರಕಾರ ವಿಲೇವಾರಿ ಮಾಡಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸದ್ಯ ಘಟನೆ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ನಿಯಮಬದ್ಧವಾಗಿ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
 

Latest Videos
Follow Us:
Download App:
  • android
  • ios