ಮಂಗಳೂರು(ಝೂ.07): ನಗರದ ಖಾಸಗಿ ಆಸ್ಪತ್ರೆಯೊಂದು ಕೊರೋನಾ ಪಾಸಿಟಿವ್‌ ಗರ್ಭಿಣಿಗೆ ಹೆರಿಗೆ ಮಾಡಲು ಹಿಂದೇಟು ಹಾಕಿ ಸರ್ಕಾರಿ ಆಸ್ಪತ್ರೆಗೆ ಸಾಗಹಾಕಲು ಯತ್ನಿಸಿದ್ದು, ಶಾಸಕ ಖಾದರ್‌ ಮಧ್ಯಪ್ರವೇಶದಿಂದ ಆಸ್ಪತ್ರೆಯಲ್ಲೇ ಹೆರಿಗೆ ಮಾಡಲು ಒಪ್ಪಿ ಪ್ರಕರಣ ಸುಖಾಂತ್ಯವಾಗಿದೆ.

ಬೆಳ್ಮದ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಬಳಿಕ ಆಕೆಗೆ ಕೊರೊನಾ ಪಾಸಿಟಿವ್‌ ಇರುವುದು ದೃಢಪಟ್ಟಿತು. ಹೆರಿಗೆ ನಡೆಸಲು ಹಿಂದೇಟು ಹಾಕಿದ ಆಸ್ಪತ್ರೆಯವರು ಸವಲತ್ತುಗಳ ಕೊರತೆ ನೆಪ ಹೇಳಿ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದರು.

ಹೊಟೇಲ್‌, ಅಂಗಡಿಯಿಂದ ಸ್ಥಳೀಯರಿಗೆ ಸೋಂಕು ಪ್ರಸಾರ!

ಈ ಬಗ್ಗೆ ಗರ್ಭಿಣಿಯ ಕುಟುಂಬಸ್ಥರು ಬೆಳ್ಮದ ಜನಪ್ರತಿನಿಧಿಯೊಬ್ಬರ ಗಮನಕ್ಕೆ ತಂದಿದ್ದು, ಈ ವಿಚಾರವನ್ನು ಅವರು ಶಾಸಕ ಯು.ಟಿ. ಖಾದರ್‌ಗೆ ತಿಳಿಸಿದರು. ಕೂಡಲೆ ಸ್ಪಂದಿಸಿದ ಖಾದರ್‌, ಆಸ್ಪತ್ರೆಗೆ ದೌಡಾಯಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ, ಅದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಂತೆ ಸೂಚಿಸಿದರು. ಕೊನೆಗೂ ಅಲ್ಲಿಯೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ.