ಬಸವರಾಜ ಹಿರೇಮಠ 

ಧಾರವಾಡ[ಜ.03]: ಚಿತ್ರದುರ್ಗದಿಂದ ಹುಬ್ಬಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಿಸಬಾರದೆಂಬ ಕೂಗು ಇದೀಗ ಸಾರ್ವಜನಿಕರಿಂದ ಎದ್ದಿದೆ. ಪ್ರಸ್ತುತ ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ರಾಷ್ಟ್ರೀಯ ಹೆದ್ದಾರಿ 4ರ ಮೂಲಕವೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. 

ಬೆಂಗಳೂರಿನಿಂದ ಪುಣೆ ಸಂಪರ್ಕಿಸುವ ಪ್ರಮಖ ರಸ್ತೆ ಕೂಡಾ ಇದು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಈ ರಸ್ತೆಯಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣ ಸೇರಿದಂತೆ ಸೇತುವೆ ನಿರ್ಮಾಣ ಕೆಲಸವಾಗುತ್ತಿದೆ. ಸುಮಾರು 250 ಕಿಮೀ ನಿರಂತರವಾಗಿ ಸರ್ವೀಸ್ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಇಷ್ಟಾಗಿಯೂ ಪ್ರತಿಯೊಂದು ವಾಹನಕ್ಕೆ ಟೋಲ್ ಸಂಗ್ರಹಣೆ ಮಾತ್ರ ನಿಂತಿಲ್ಲ ಎಂದು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಸ್ತೆ ಕಾಮಗಾರಿ ಸಂಪೂರ್ಣವಾಗದೇ ಟೋಲ್ ಸಂಗ್ರಹಣೆ ಮಾಡುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಆದೇಶವೇ ಇದೆ. ಇಷ್ಟಾಗಿಯೂ ಏತಕ್ಕೆ ಟೋಲ್ ಸಂಗ್ರಹ ಎಂದು ಇಲ್ಲಿನ ವಕೀಲ ರಾಘವೇಂದ್ರ ಹಂಜೇರ ಎಂಬವರು ಈ ಕುರಿತು ಟೋಲ್ ಸಂಗ್ರಹಣಾ ಸಂಸ್ಥೆಗೆ ಕಳೆದ ಡಿ. 21ರಂದು ದೂರು ಸಹ ನೀಡಿ ದ್ದಾರೆ. ಆದರೆ, ಟೋಲ್ ಸಂಗ್ರಹ ಮಾಡುವ ಯಾವ ಕಂಪನಿಗಳು ದೂರಿಗೆ ಸರಿಯಾಗಿ ಸ್ಪಂದನೆ ನೀಡಿಲ್ಲ. ಹೀಗಾಗಿ ಬೇಸತ್ತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ರಾಘವೇಂದ್ರ ಅವರು. 

ಕೋಟಿಗಟ್ಟಲೇ ಸಂಗ್ರಹ: 

ಬೆಂಗಳೂರಿನಿಂದ ಧಾರವಾಡಕ್ಕೆ ಐದಾರು ಗಂಟೆಯಲ್ಲಿ ಬರುವ ಬಸ್ಸು ಹಾಗೂ ಇತರ ವಾಹನಗಳಿಗೆ ಇದೀಗ ಎಂಟತ್ತು ಗಂಟೆ ಬೇಕಾಗಿದೆ. ಇಷ್ಟಾಗಿಯೂ ತೀವ್ರ ತೊಂದರೆಯಿಂದ ವಾಹನ ಚಲಾವಣೆ ಮಾಡಬೇಕಿದೆ. ಸರಿಯಾದ ರಸ್ತೆ ನಿಯಮಗಳನ್ನು ಪಾಲಿಸದ ಕಾರಣ ಅಪಘಾತಗಳಾಗುತ್ತಿವೆ. ಸರ್ವೀಸ್ ರಸ್ತೆ ಸಹ ಗುಣಮಟ್ಟವಿಲ್ಲ. ನಿತ್ಯ ಕಾರು, ಲಾರಿ ಹಾಗೂ ಇತರ ವಾಹನಗಳಿಂದ ಕೋಟಿಗಟ್ಟಲೇ ಟೋಲ್ ಹಣ ಸಂಗ್ರಹಿಸುವ ಟೋಲ್ ಸಂಸ್ಥೆಗಳು ವಾಹನ ಸವಾರರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರಸ್ತೆ ಕಾಮಗಾರಿ ನಡೆಯುವ ಚಿತ್ರದುರ್ಗದಿಂದ ಹುಬ್ಬಳ್ಳಿವರೆಗೆ ಟೋಲ್ ಸಂಗ್ರಹ ನಿಲ್ಲಸದೇ ಹೋದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ರಾಘವೇಂದ್ರ ಸ್ಪಷ್ಟಪಡಿಸಿದರು. 

ಜನರ ಮೌನ: 

ಕಳೆದ ಎರಡ್ಮೂರು ವರ್ಷಗಳಿಂದ ಈ ರಸ್ತೆ ಕಾಮಗಾರಿ ನಡೆಯುತ್ತಿದೆ. ಸಾಮಾನ್ಯ ಜನರು ತಮ್ಮ ಕಾರು ಹಾಗೂ ಸಾರಿಗೆ, ಖಾಸಗಿ ಬಸ್ಸುಗಳಲ್ಲಿ ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ. ಹುಬ್ಬಳ್ಳಿಯಿಂದ ಹಾವೇರಿ, ರಾಣಿಬೆನ್ನೂರು, ದಾವಣಗೆರೆ ಮತ್ತು ಚಿತ್ರ ದುರ್ಗ ಮುಟ್ಟುವರೆಗೆ ಹೈರಾಣಾಗುತ್ತಾರೆ. 

ಎಲ್ಲಿದ್ದಾರೆ ಜನಪ್ರತಿನಿಧಿಗಳು?: 

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಅವರು ಕಾಯ್ದಿರಿಸಿದ ಟಿಕೆಟ್‌ಗಳ ಸಹಾಯದಿಂದ ವಿಮಾನ ಹಾಗೂ ರೈಲು ಮೂಲಕವೇ ಸಂಚರಿಸುವ ಕಾರಣ ಜನರ ಈ ರಸ್ತೆ ಸಂಕಟದ ಬಗ್ಗೆ ಅಷ್ಟೊಂದು ಮಾಹಿತಿಯೇ ಇಲ್ಲ. 

ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ಸರ್ವೀಸ್ ರಸ್ತೆ ಸೇವೆಗಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ರಸ್ತೆ ಅಭಿವೃದ್ಧಿ ಆಗದೇ ಟೋಲ್ ಸಂಗ್ರಹ ತಪ್ಪು. ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದ್ದು, ಇದರ ವಿರುದ್ಧ ಜನರು ಎದ್ದೇಳಬೇಕು. ರಸ್ತೆ ಅಭಿವೃದ್ಧಿ ಆಗದೇ ವಾಹನ ಸವಾರರು ಟೋಲ್‌ಗೆ ಹಣ ನೀಡಬಾರದು. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡಲೇ ಟೋಲ್ ಸಂಗ್ರಹಣೆ ನಿಲ್ಲಿಸಲು ಸೂಚನೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸೀಮರ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು, ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ಚಿತ್ರದುರ್ಗದಿಂದ ಕಾಮಗಾರಿ ನಡೆಯುತ್ತಿದೆ ನಿಜ. ಊರುಗಳು ಬಂದಾಗ ಮಾತ್ರ ಅಲ್ಲಿ ಸೇತುವೆಗಳನ್ನು ಮಾಡಲಾಗುತ್ತಿದೆ. ಅಲ್ಲಲ್ಲಿ ರಸ್ತೆ ಕಾಮಗಾರಿಯೂ ಇದೆ. ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಟೋಲ್ ಸಂಗ್ರಹಿಸಬಾರದು ಎಂಬುದರ ಕುರಿತು ಮಾಹಿತಿ ಪಡೆದುಕೊಂಡು ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.