ಬೆಂಗಳೂರು(ನ.22): ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐಟಿ ಹಾಗೂ ಬಿಪಿಒ ಕಂಪನಿಗಳಿಗೆ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಸಂಬಂಧ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಜಾರಿಗೊಳಿಸದೆ ಮುಂದೂಡುವಂತೆ ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಿದೆ.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಐಟಿ, ಬಿಪಿಒ ಕಂಪನಿಗಳು ತಮ್ಮ ನೌಕರರಿಗೆ ಶಾಶ್ವತವಾಗಿ ಮನೆಗಳಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಲು ಅನುವು ಮಾಡಿಕೊಟ್ಟಿದೆ. ಈ ಮಾರ್ಗಸೂಚಿ ಉದ್ಯೋಗದಾತರಿಗೆ ಅನುಕೂಲವಾಗುತ್ತದೆ. ಆದರೆ, ನಗರ ಪ್ರದೇಶದಲ್ಲಿನ ಐಟಿ ಕಂಪನಿಗಳಿಗೆ ಸಾರಿಗೆ, ಆತಿಥ್ಯ ಸೇವೆ ನೀಡುತ್ತಿರುವ ಅಸಂಘಟಿತ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. 

ವರ್ಕ್ ಫ್ರಂ ಹೋಂ ಎಫೆಕ್ಟ್‌ : ಈ ಬಾರಿ ನಿಮಗೆ ಹೆಚ್ಚು ತೆರಿಗೆ!

ರಾಜ್ಯದಲ್ಲಿ ನೋಂದಾಯಿತ 20 ಸಾವಿರ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ವಾರ್ಷಿಕ 500 ಕೋಟಿ ರು. ತೆರಿಗೆ ಪಾವತಿಸುತ್ತವೆ. ಮಿನಿ ಬಸ್‌ಗಳು, ಟ್ಯಾಕ್ಸಿಗಳನ್ನು ನಂಬಿ ಬದುಕುತ್ತಿರುವ ಸುಮಾರು ಐದು ಲಕ್ಷ ಕುಟುಂಬಗಳಿಗೆ ಬೀದಿಗೆ ಬರಲಿವೆ. ಅಂತೆಯೆ ಪಿ.ಜಿ.ಗಳು, ಊಟೋಪಚಾರ, ಆತಿಥ್ಯ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಾರಿಗೆ ಉದ್ಯಮ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಶೇ.25ರಷ್ಟು ಅಸಂಘಟಿತ ವಲಯವನ್ನು ರಕ್ಷಿಸಲು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಜಾರಿಗೊಳಿಸದೆ ಮುಂದೂಡುವಂತೆ ಪತ್ರದಲ್ಲಿ ಕೋರಲಾಗಿದೆ.