ಯಾವುದೇ ವ್ಯಕ್ತಿ ಅಧಿಕಾರ ದೊರಕಿದಾಗ ತಾನು ಹುಟ್ಟಿಬೆಳೆದ ಸಮಾಜವನ್ನು ಮರೆಯ​ದೇ ಆ ಸಮಾಜದ ಒಳಿತಿಗಾಗಿ ಶಕ್ತಿಮೀರಿ ಕೆಲಸ ಮಾಡಬೇಕು ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.  

ಸಾಗರ (ಜು.30): ಯಾವುದೇ ವ್ಯಕ್ತಿ ಅಧಿಕಾರ ದೊರಕಿದಾಗ ತಾನು ಹುಟ್ಟಿಬೆಳೆದ ಸಮಾಜವನ್ನು ಮರೆಯ​ದೇ ಆ ಸಮಾಜದ ಒಳಿತಿಗಾಗಿ ಶಕ್ತಿಮೀರಿ ಕೆಲಸ ಮಾಡಬೇಕು ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟ​ಣದ ಕಾರ್ಯನಿರತ ಮತ್ತು ನಿವೃತ್ತ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ನಿವೃತ್ತ ನೌಕರರಿಗೆ ಸನ್ಮಾನ, ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ನಾವು ಅಧಿಕಾರ ದೊರಕಿದಾಗ ನಮ್ಮ ಸಮಾಜವನ್ನು ಮರೆಯುತ್ತೇವೆ. ಬದಲಾಗಿ ಸಮಾಜದಿಂದ ದೂರ ಉಳಿಯದೇ ಸಮಾಜದ ಋುಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜ ತಮ್ಮನ್ನು ಇನ್ನಿಲ್ಲದಂತೆ ಬೆಂಬಲಿಸಿ ಶಾಸಕನಾಗಿ ಆಯ್ಕೆಯಾಗಲು ಸಹಕರಿಸಿದೆ. ಈ ಹಿಂದೆ ಎರಡು ಬಾರಿ ಶಾಸಕನಾಗಿದ್ದಾಗಲೂ ಜಾತಿ, ಧರ್ಮ, ವರ್ಗಬೇಧವಿಲ್ಲದೇ ಕ್ಷೇತ್ರದ ಒಳಿತಿಗಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬ್ರಾಹ್ಮಣ ಸಮುದಾಯ ಸೇರಿದಂತೆ ಯಾವುದೇ ಸಮುದಾಯ ಕೆಲಸ ಆಗಬೇಕೆಂದರೆ ತಮ್ಮನ್ನು ನೇರವಾಗಿ ಕಾಣಬಹುದು. ಜನರಿಗೆ ಒಳಿತಾಗುವ ಕೆಲಸವನ್ನು ಮಾಡುವಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಭರವಸೆ ನೀಡಿದರು.

ವಿರೋ​ಧಿ​ಗ​ಳೊಂದಿಗೆ ರಾಜ​ಕೀಯ ಮಾಡೋಣ: ಶಾಸ​ಕ ವಿಜಯೇಂದ್ರ

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಬಿ.ಆರ್‌.ಜಯಂತ್‌ ಮಾತನಾಡಿ, ಸಮಸ್ಯೆ ಎದುರಾದಾಗ ಜನರು ಸಂಘಟಿತರಾಗುವುದು ಸಹಜ. ಸಮಸ್ಯೆ ಇದ್ದರೂ ಸಂಘಟಿತರಾಗದೇ ಇರುವವರೆಂದರೆ ಬ್ರಾಹ್ಮಣರು. ಆದರೆ, ಸಮಾಜಕ್ಕೆ ಬ್ರಾಹ್ಮಣ ಸಮುದಾಯ ನೀಡಿರುವ ಕೊಡುಗೆ ಅನನ್ಯವಾದುದು. ಇವತ್ತಿನ ಸಂದರ್ಭದಲ್ಲಿ ಯಾವುದೇ ಸಮುದಾಯ ಸಂಘಟಿತರಾಗುವುದು ಅನಿವಾರ್ಯ ಎಂದರು.

ಸವ​ಲು​ಗಳ ಎದು​ರಿ​ಸಿ: ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಅವಲೋಕನ ಕುರಿತ ಚಿಂತನ-ಮಂಥನದಲ್ಲಿ ಜೋಷಿ ಫೌಂಡೇಶನ್‌ ಮುಖ್ಯಸ್ಥ ದಿನೇಶಕುಮಾರ ಜೋಷಿ ಮಾತನಾಡಿ, ನಮ್ಮಲ್ಲಿ ವ್ಯಕ್ತಿಗತವಾಗಿ ಬದಲಾವಣೆ ಆಗಿರುವುದರಿಂದ ಸಮಾಜದಲ್ಲಿಯೂ ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಿತಿಮೀರಿದ ಆಸೆಗೆ ಕಡಿವಾಣ ಹಾಕಿ, ಇರುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡರೆ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಸಂಪನ್ಮೂಲವನ್ನು ವ್ಯಕ್ತಿಗತವಾಗಿ ಬಳಸಲು ಮುಂದಾಗಿದ್ದೆ ಸಮಸ್ಯೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶಕುಮಾರ ಮಾತನಾಡಿ, ನಮ್ಮಲ್ಲಿದ್ದ ಕುಟುಂಬ ಪದ್ಧತಿ ಹಾಗೂ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಆಗಿದ್ದರಿಂದ ಸಮಸ್ಯೆ, ಸವಾಲುಗಳು ಎದುರಾಗಿದೆ. ಕೂಡು ಕುಟುಂಬ ಪದ್ಧತಿ ನಾಶವಾಗಿ ಸಂಕುಚಿತ ಕುಟುಂಬ ವ್ಯವಸ್ಥೆ ಬಂದಿದೆ. ಮೌಲ್ಯ ಕೊಡುವ ಶಿಕ್ಷಣದ ಬದಲಿಗೆ ಸರ್ಟಿಫಿಕೇಟ್‌ ಪಡೆಯುವ ಶಿಕ್ಷಣ ಚಾಲ್ತಿಯಲ್ಲಿದೆ. ಒಟ್ಟು ಕುಟುಂಬ ವ್ಯವಸ್ಥೆಯೇ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಎಂದು ಹೇಳಿದರೆ, ಜಿಲ್ಲಾ ವಿಪ್ರ ನೌಕರರ ಸಂಘದ ಅಧ್ಯಕ್ಷ ಕೇಶವಮೂರ್ತಿ ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಗೆ ಬೆಲೆ ನೀಡಿದರೆ ಸಮಾಜ ಸುಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತರಾದ ನೌಕರ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಶಂಕರ ಶಾಸ್ತಿ್ರ ಅಭಿನಂದನಾ ಭಾಷಣ ಮಾಡಿದರು. ಶೃಂಗೇರಿ ಶಂಕರ ಮಠದ ಸಾಗರ ಶಾಖೆಯ ಧರ್ಮದರ್ಶಿ ಅಶ್ವಿನಿಕುಮಾರ ಮಾತನಾಡಿದರು. ಸಂಘದ ಅಧ್ಯಕ್ಷ ಶ್ರೀಧರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌.ಎಂ.ಪ್ರಸನ್ನಕುಮಾರ್‌ ವಂದಿಸಿದರು. ಎಲ್‌.ಎಂ.ಹೆಗಡೆ, ನಾಗರಾಜ ಹೆಗಡೆ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಡಿ.ಆರ್‌.ಹೆಗಡೆ ಪಾದುಕಾ ಪಟ್ಟಾಭಿಷೇಕ ಹರಿಕಥೆ ನಡೆಸಿಕೊಟ್ಟರು. ಇವರಿಗೆ ತಬಲಾದಲ್ಲಿ ಅಕ್ಷರ, ಹಾರ್ಮೋನಿಯಂನಲ್ಲಿ ಶ್ವೇತಾ ರಾವ್‌ ಸಹಕರಿಸಿದರು.

ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ

ಜಯಂತರನ್ನು ಎಂಎಲ್‌ಸಿ ಮಾಡಲು ಒತ್ತಾಯ: ಮ.ಸ.ನಂಜುಂಡಸ್ವಾಮಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜಾತಿ, ಧರ್ಮ ಬೇಧವಿಲ್ಲದೇ ಈ ಸಮಾಜಕ್ಕಾಗಿ ಕೆಲಸ ಮಾಡಿಕೊಂಡು ಬಂದಿರುವ ಬಿ.ಆರ್‌.ಜಯಂತ್‌ ಅವರನ್ನು ಎಂಎಲ್‌ಸಿ ಮಾಡಬೇಕೆಂದು ಒತ್ತಾಯಿಸಿದರು. ಯೋಗ್ಯತೆ ಇದ್ದರೂ ಇದುವೆರೆಗೆ ಯಾವುದೇ ರಾಜಕೀಯ ಅಧಿಕಾರ ಪಡೆಯದ ಜಯಂñ ಅವ​ರಿಗೆ ಈ ಬಾರಿ ಕಾಂಗ್ರೆಸ್‌ ಸರ್ಕಾರ ಅವಕಾಶ ನೀಡಬೇಕು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಜಯಂತ್‌ ಅವರಿಗೆ ವಿಧಾನ ಪರಿಷತ್ತು ಸದಸ್ಯರಾಗುವ ಎಲ್ಲ ಅರ್ಹತೆ ಇದೆ. ಅವರು ಎಂಎಲ್‌ಸಿ ಆಗಬೇಕು ಎನ್ನುವ ಆಕಾಂಕ್ಷೆ ನನ್ನದೂ ಆಗಿದೆ. ರಾಜಕೀಯ ಸೇರಿದಂತೆ ಎಲ್ಲ ರಂಗಕ್ಕೂ ತಮ್ಮದೇ ಕೊಡುಗೆ ನೀಡಿರುವ ಜಯಂತ್‌ ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಒತ್ತಾಯಿಸುವವರಲ್ಲಿ ನಾನೂ ಒಬ್ಬನಾಗಿದ್ದೇನೆ. ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಅವರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರ​ವಸೆ ನೀಡಿ​ದರು.