Asianet Suvarna News Asianet Suvarna News

ಬಿಎಸ್‌ವೈ ದ್ವೇಷದ ರಾಜಕಾರಣ: ಸಿಎಂ ವಿರುದ್ಧ ಡಿಕೆಶಿ ಆಕ್ರೋಶ

ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

 

DK Shivakumar slams cm bs yediyurappa
Author
Bangalore, First Published Feb 1, 2020, 11:25 AM IST

ಬೆಂಗಳೂರು(ಫೆ.01): ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದು ಟೀಕಿಸಿದರು.

ಶುಕ್ರವಾರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಮುಂದುವರೆದಿದೆ. ಬೇರೆ ರಾಜ್ಯಗಳಿಗೆ ಕೇಂದ್ರದಿಂದ ಸಿಗುತ್ತಿರುವ ಪ್ರಯೋಜನಗಳು ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಪ್ರಸ್ತುತ ಬಜೆಟ್‌ನಲ್ಲೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹೊರಗಡೆಯಿಂದ ನಮ್ಮ ದೇಶಕ್ಕೆ ದುಡ್ಡು ಬರುತ್ತಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶದಿಂದ ವಿದೇಶಕ್ಕೆ ಹಾರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಸ್ಪೀಕರ್‌ ಆದೇಶ ಪ್ರಜಾಪ್ರಭುತ್ವ ವಿರೋಧಿ:

ಇದೇ ವೇಳೆ ಸ್ಪೀಕರ್‌ ವಿರುದ್ಧವೂ ಕಿಡಿ ಕಾರಿದ ಡಿ.ಕೆ.ಶಿವಕುಮಾರ್‌, ಬಿಜೆಪಿಯು ದೇಶಾದ್ಯಂತ ತನ್ನ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ರಾಜ್ಯದಲ್ಲೂ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಶಾಸಕರನ್ನು ಹೊರಗೆ ಹಾಕುತ್ತೇವೆ ಎಂದಿರುವ ಸ್ಪೀಕರ್‌ ಆದೇಶ ಪ್ರಜಾಪ್ರಭುತ್ವ ವಿರೋಧಿ ಎಂದರು.

ಸ್ಪೀಕರ್‌ ಅವರು ಬಿಜೆಪಿಯವರೇ ಆಗಿರಬಹುದು. ಅಧಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಗಳನ್ನು ತೀರ್ಮಾನ ಮಾಡಬೇಕಾದರೆ, ವಿಧಾನಸಭೆ ಸಲಹಾ ಸಮಿತಿ ಜತೆ ಕುಳಿತು ಅಧಿವೇಶನ ಹೇಗೆ ನಡೆಯಬೇಕು ಎಂದು ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನವದೆಹಲಿಯ ಅಮೆರಿಕನ್ ಎಂಬೆಸ್ಸಿ ಮುಂದೆ ಡಿಕೆಶಿ ಕಂಡ ಆ ದೃಶ್ಯ!

ಕಾಂಗ್ರೆಸ್‌ ಹಾಗೂ ಯಾವುದೇ ಸರ್ಕಾರ ಇರಲಿ, ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಡುವುದು ಸೇರಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರದ್ದೇ ಆದ ಪ್ರಕ್ರಿಯೆ ಇರುತ್ತದೆ. ಈ ಹಿಂದೆ ಬಿಜೆಪಿಗರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಪೊಲೀಸ್‌ ಅಧಿಕಾರಿಗಳನ್ನು ಸದನದ ಒಳಗೇ ಬಿಟ್ಟುಕೊಂಡಿರುವ ಉದಾಹರಣೆ ಇದೆ. ಪ್ರಸ್ತುತ ಮಾಧ್ಯಮಗಳನ್ನು ನಿರ್ಬಂಧಿಸಿದ್ದೀರಿ. ಇದೀಗ ಇನ್ನೂ ಮುಂದೆ ಹೋಗಿ ಶಾಸಕರನ್ನೇ ಹೊರಗೆ ಹಾಕುತ್ತೇವೆ ಎಂದು ಹೇಳುತ್ತೀರಿ. ಇದು ಸರಿಯಲ್ಲ. ಈ ಹಿಂದೆ ಸದನದಲ್ಲಿ ಬಿಜೆಪಿಯವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನೂ ನೋಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ಗೊಂದಲವಿಲ್ಲ

ನಮ್ಮ ಪಕ್ಷದ ನಾಯಕರಲ್ಲಿ ಯಾವ ವಿಷಯದಲ್ಲೂ ಯಾವುದೇ ಗೊಂದಲವಿಲ್ಲ. ಅಧ್ಯಕ್ಷ ಸ್ಥಾನದ ವಿಚಾರವನ್ನು ರಸ್ತೆಗೆ ತರಬೇಡಿ. ನಮ್ಮ ನಾಯಕರು ಎಲ್ಲಾ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು. ಕೇವಲ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಇಲ್ಲಿ ನಾನು ಯಾರಿಗೂ ವಕ್ತಾರನಾಗಿ ಹೇಳಿಕೆ ಕೊಡಲು ಸಾಧ್ಯವಿಲ್ಲ. ನಾನು ಕೇವಲ ನನಗೆ ಮಾತ್ರ ವಕ್ತಾರ. ಪಕ್ಷದ ಅಧ್ಯಕ್ಷ ಸ್ಥಾನ ವಿಚಾರವನ್ನು ರಸ್ತೆಗೆ ತರಬೇಡಿ ಎಂದು ಹೇಳಿದರು.

Follow Us:
Download App:
  • android
  • ios