ಬಂಡಾಯ ಶಮನಕ್ಕೆ ಡಿಕೆಶಿಯೇ ಅಖಾಡಕ್ಕೆ..!
* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
* ಎರಡು ಬಾರಿ ಪಾಲಿಕೆ ಗದ್ದುಗೆ ಕಳೆದುಕೊಂಡಿರುವ ಕಾಂಗ್ರೆಸ್
* ಮೊನ್ನೆವರೆಗೂ ಪಕ್ಷ ನಿಷ್ಠರು ಎನಿಸಿಕೊಂಡಿದ್ದವರೆ ಇದಕ್ಕೆ ಅಡ್ಡಗಾಲಾಗುವ ಭೀತಿ
ಹುಬ್ಬಳ್ಳಿ(ಆ.25): ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನದಾಗಿ ಬಂಡಾಯದ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್ ಬಂಡುಕೋರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ನಾಮಪತ್ರ ಹಿಂಪಡೆದು ಪಕ್ಷದ ಪರ ನಿಲ್ಲುವಂತೆ ಬಂಡಾಯ ಅಭ್ಯರ್ಥಿಗಳನ್ನು ಮೊಬೈಲ್ ಮೂಲಕ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
2 ಬಾರಿ ಪಾಲಿಕೆ ಗದ್ದುಗೆ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಶತಾಯ ಗತಾಯ ಅಧಿಕಾರ ಹಿಡಿವ ಯತ್ನದಲ್ಲಿದೆ. ಆದರೆ, ಮೊನ್ನೆವರೆಗೂ ಪಕ್ಷ ನಿಷ್ಠರು ಎನಿಸಿಕೊಂಡಿದ್ದವರೆ ಇದಕ್ಕೆ ಅಡ್ಡಗಾಲಾಗುವ ಭೀತಿ ಮುಖಂಡರನ್ನು ಕಾಡುತ್ತಿದೆ. ಹೀಗಾಗಿ ಬಂಡಾಯ ಶಮನಗೊಳಿಸುವ ಪ್ರಯತ್ನ ಇನ್ನೂ ಎರಡು ದಿನ ನಡೆಯಲಿದೆ.
ಕಾಂಗ್ರೆಸ್‌ನಿಂದ ಹೆಚ್ಚು ಕಡಿಮೆ ಒಂದು ಡಜನ್ ಅಭ್ಯರ್ಥಿಗಳು ಬಂಡಾಯವಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವರನ್ನು ಶಾಂತಗೊಳಿಸಿ ಚುನಾವಣೆಯಿಂದ ಹಿಂದೆ ಸರಿಸುವ ಪ್ರಯತ್ನ ನಡೆಯುತ್ತಿದೆ. ಕೆಲವರು ಸ್ವಲ್ಪ ಮೆತ್ತಗಾದಂತೆ ಕಂಡುಬಂದರೂ ಬಹುತೇಕರು ಪಕ್ಷೇತರರಾಗಿ ನಿಲ್ಲಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನನಗೆ ಮೋಸ ಮಾಡಿಲ್ಲ: ಶಾಸಕ ರಾಜೂಗೌಡ
ರಾಜ್ಯ ಮಟ್ಟದ ಮುಖಂಡರು ನಮಗೆ ಕರೆ ಮಾಡಿದ್ದರು. ಮುಂದಿನ ಜಿಪಂ ಚುನಾವಣೆ ಅಥವಾ ಬೇರೆಡೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಆದರೆ, ನಾನು ಜನಸೇವೆ ಮಾಡಲು ರಾಜಕೀಯಕ್ಕೆ ಬಂದವನು. ಈಗ ಕೊಟ್ಟ ನಾಮಿನೇಶನ್ ವಾಪಸ್ ಪಡೆದರೆ ಬೆಂಬಲಿಗರಿಗೆ ಬೇರೆ ರೀತಿಯ ಸಂದೇಶ ಹೋಗಬಹುದು. ಹೀಗಾಗಿ ಚುನಾವಣೆ ಮಾಡುವುದಾಗಿ ಹೇಳಿದ್ದೇನೆ ಎನ್ನುತ್ತಾರೆ 52ನೇ ವಾರ್ಡ್‌ನಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಚೇತನ ಹಿರೇಕೆರೂರ.
ಇನ್ನು ಪತ್ನಿ ಚಂದ್ರಿಕಾ ಅವರಿಗೆ ಬಿ ಫಾರಂ ಪಡೆದೂ ಕೈ ನಿಂದ ಟಿಕೆಟ್ ಪಡೆಯಲು ಸಾಧ್ಯವಾಗದ ವೆಂಕಟೇಶ ಮೇಸ್ತ್ರಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಹೀಗೆ ಮಾಡಿದರೆ ಪಕ್ಷ ಬೆಳೆಯುವುದಿಲ್ಲ. ನಾವೇ ದುಡುಕಿ ಕಾಂಗ್ರೆಸ್‌ಗೆ ಹೋದೆವು. ಮಾಜಿ ಮೇಯರ್‌ನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸೌಜನ್ಯವಿಲ್ಲ ಎಂದು ಹರಿಹಾಯ್ದರು.
ತಮ್ಮ ಪತ್ನಿ ಅಕ್ಷತಾ ಅವರನ್ನು 82ನೇ ವಾರ್ಡ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಮೋಹನ ಅಸುಂಡಿ ಮಾತನಾಡಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ನಮ್ಮನ್ನು ಸಂಪರ್ಕಿಸಿದ್ದು ಇದೊಂದು ಬಾರಿ ಪಕ್ಷದ ಪರ ನಿಲ್ಲುವಂತೆ ಕೇಳಿದ್ದಾರೆ. ಬುಧವಾರ ನಮ್ಮ ಬೆಂಬಲಿಗರ ಜತೆ ಸಭೆ ನಡೆಸಿ ತೀರ್ಮಾನ ಹೇಳುವುದಾಗಿ ತಿಳಿಸಿದ್ದೇನೆ ಎಂದರು.
ನನಗೆ ಮನವೊಲಿಸುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಸದರಸೋಫಾ ಜಮಾತ್‌ನವರು ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿದ್ದಾರೆ. ಅವರು ಹೇಳಿದಂತೆ ಕೇಳುವೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ (ವಾರ್ಡ್ ನಂ. 71) ಗಣೇಶ ಟಗರಗುಂಟಿ ತಿಳಿಸಿದ್ದಾರೆ.
ಎಲ್ಲರೂ ನಮ್ಮವರೇ. ಬೇಸರಗೊಂಡಿದ್ದಾರಷ್ಟೆ. ಶಾಸಕರು, ಮುಖಂಡರಿಂದ ಅವರ ಮನವೊಲಿಸುತ್ತಿದ್ದೇವೆ. ಪಕ್ಷ ಒಟ್ಟಾಗಿ ಕೆಲಸ ಮಾಡಿ ಚುನಾವಣೆ ಗೆಲ್ಲಲಿದೆ ಎಂದು ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.