ಬೆಳಗಾವಿ(ಮಾ.29): ಇಂದು ಬೆಳಗಾವಿ, ಮಸ್ಕಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳ್ಳಂಬೆಳಿಗ್ಗೆ ನಗರದಲ್ಲಿ ಟೆಂಪಲ್‌ ರನ್‌ ಆರಂಭಿಸಿದ್ದಾರೆ. ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಸುಪ್ರಸಿದ್ಧ ವಿನಾಯಕ ದೇವಸ್ಥಾನ ಹಿಂಡಲಗಾ ವಿನಾಯಕ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ್ದಾರೆ.

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂಡಲಗಾ ವಿನಾಯಕನ ದರ್ಶನ ಪಡೆದ ಬಳಿಕ ಕಾಂಗ್ರೆಸ್‌ ಸತೀಶ್‌ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇನೆ. ನಿನ್ನೆ(ಭಾನುವಾರ) ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಗಿದೆ. ಮೂರು ಕ್ಷೇತ್ರದಲ್ಲಿ ನಾನು ಓಡಾಡುತ್ತೇನೆ. ನಮ್ಮ ನಾಯಕರು ಇಲ್ಲಿ ಕ್ಯಾಂಪ್ ಹಾಕಿ ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಇತ್ತಅವರ ಗೆಲುವಿಗೆ ಡಿಕೆಶಿ ಪಣ : ಅತ್ತ ಡಿಕೆಶಿ ಬಂದರೂ ಬಾರದ ಸತೀಶ್

ಸಿಎಂ ಆಗ್ತಿರಿ ಅಂತ ಸಿದ್ಧಸೇನಾ ಮುನಿ ಜೈನ ಸ್ವಾಮೀಜಿ ಅವರಿಂದ ಆಶೀರ್ವಾದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ. ಜೈನ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಬಹಳ ನಂಟಿದೆ. ಹಸ್ತದ ಗುರುತು ಜೈನ ಧರ್ಮದ ಗುರುಗಳ ನೀಡಿದ್ದರು. ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನದ ಬಗ್ಗೆ ಯುಪಿಎ ಸಮಯದಲ್ಲಿ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ, ನನಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ, ನಮ್ಮ ಪಕ್ಷಕ್ಕೆ ಅವರ ಆಶೀರ್ವಾದ ಮುಖ್ಯ ಇದ್ದು, ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ನಿನ್ನೆ ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿ ಭೇಟಿ ಮಾಡಿದ್ದ ವೇಳೆ ಮಾತನಾಡಿದ ಶ್ರೀಗಳು, ನೀವು ಕನಕಪುರದ ಬಂಡೆ, ಕಲ್ಲನ್ನು ಕಟಿದು ಕಟಿದು ಮೂರ್ತಿ ಆಗಿದೆ. ವಿರೋಧಿಗಳು ಎಷ್ಟು ಹೆಚ್ಚಾಗುತ್ತಾರೆ ಅಷ್ಟು ಮೂರ್ತಿ ಆಗ್ತಿರಿ. ಅಂದರೇ ರಾಜ್ಯದ ಸಿಎಂ ಆಗುತ್ತೀರಿ ಎಂದು ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಡಿಕೆಶಿ, ಬೆಲೆ ಏರಿಕೆಯನ್ನು ಶ್ರೀಸಾಮನ್ಯನಿಂದ ತಡೆಯೋಕೆ ಆಗಿಲ್ಲ, ಬೆಲೆ ಏರಿಕೆ ಸಂಬಂಧ ಪ್ರತಿಭಟನೆ ಮಾಡಲಾಗುತ್ತಿದೆ. ಗ್ಯಾಸ್ ಬೆಲೆ 900 ರೂ. ಏರಿಕೆ ಆದರೆ ಸಾಮಾನ್ಯ ಗೃಹಿಣಿ ಪರಿಸ್ಥಿತಿ ಏನು?. ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಪ್ರಭಲವಾಗಿ ಪ್ರತಿಭಟನೆ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಸಿ.ಡಿ.ಕೇಸ್: ಬೆಳಗಾವಿಯಲ್ಲಿ ಹೈಡ್ರಾಮಾ, ರಮೇಶ್ ಜಾರಕಿಹೊಳಿ ಬೆಂಬಲಿಗರ ಪುಂಡಾಟ

ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇಲ್ಲ. ನಾವೆಲ್ಲ ಒಮ್ಮತ್ತದಿಂದ ಸತೀಶ್ ಜಾರಕಿಹೊಳಿ ಅವರನ್ನ‌ ಆಯ್ಕೆ ಮಾಡಿದ್ದೇವೆ. ಸತೀಶ್ ಜಾರಕಿಹೊಳಿ‌ ಅಧಿಕಾರ ಇಲ್ಲದೇ ಹೋದ್ರು ಪಕ್ಷ ಸಂಘಟನೆಯನ್ನ ಮಾಡಿದ್ದಾರೆ. ಕಾರ್ಖಾನೆ ಸ್ಥಾಪಿಸಿ ಉದ್ಯೋಗವನ್ನ ಕೊಟ್ಟಿದ್ದಾರೆ. ಯುವಕರಿಗೆ ತರಬೇತಿ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ನನಗೆ ತರಬೇತಿ ಪ್ರೋಗ್ರಾಂ ಕೊಡಿ ಅಂತ ಕೇಳಿದ್ದರು. ನಮಗೆ ಆ ಉಸ್ತುವಾರಿ ಕೊಡಿ, ಈ ಉಸ್ತುವಾರಿ ಕೊಡಿ ಅಂತ ಕೇಳುತ್ತಾರೆ. ಅವರು ಕೇಳಿದ್ದು ಟ್ರೈನಿಂಗ್ ಪ್ರೋಗ್ರಾಂ ಕೇಳಿದ್ರು, ಪ್ರಭಲ ನಾಯಕನಿಗೆ ನಾಯಕನಿಗೆ ಟಿಕೆಟ್ ಕೊಟ್ಟಿದ್ದೇವೆ. ಇದೇ ನಮ್ಮ ಶಕ್ತಿಯಾಗಿದೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅವರನ್ನ‌ ಹಾಡಿ ಹೊಗಳಿದ್ದಾರೆ. 

ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಸಿಡಿ ಪ್ರಕರಣ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನನಗೆ ಏನು ಕೇಳಬೇಡಿ. ಚುನಾವಣೆ ಮುಗಿಸೋಣ, ಇದು ನಮಗೆ ಮುಖ್ಯವಾಗಿದೆ. ಕಾನೂನು ಇದೆ ನೋಡೋಣ ಎಂದು ಹೇಳಿದ್ದಾರೆ. ಸಿಡಿ ಲೇಡಿ ಕುಟುಂಬಸ್ಥರ ಆರೋಪ ಬಗ್ಗೆ  ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿರಾಕರಿಸಿದ್ದಾರೆ. 

ನಿನ್ನೆ ಬೆಳಗಾವಿ ನಗರದ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ತಮ್ಮ ವಾಹನ ತಡೆದು ರಮೇಶ್ ಅಭಿಮಾನಿಗಳಿಂದ ಪ್ರತಿಭಟನೆ ವಿಚಾರದ  ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜಕಾರಣದಲ್ಲಿ ಎಲ್ಲವನ್ನು ಸಂತೋಷವಾಗಿ ಸ್ವೀಕಾರ ಮಾಡುತ್ತೇವೆ. ಎಲ್ಲವನ್ನೂ ಸ್ಪೋರ್ಟಿವ್ ಆಗಿ ತಗೋತಿವಿ. ನಮ್ಮ ಕಾರ್ಯಕರ್ತರು ಯಾರು ಆಕ್ರೋಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.