ಮೈಶುಗರ್ ಖಾಸಗೀಕರಣ ಬೇಡ: ಸಿಎಂಗೆ ಡಿಕೆಶಿ ಪತ್ರ
* ಖಾಸಗಿಗೆ ನೀಡಿರುವ ಕಾರ್ಖಾನೆಗಳು ಕಬ್ಬು ಅರೆಯುತ್ತಿಲ್ಲ
* ರೈತರ ಹಿತ ಕಾಪಾಡದ ಗುತ್ತಿಗೆ ನೀಡಿರುವ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು
* ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಮನವಿ
ಬೆಂಗಳೂರು(ಜು.10): ಮಂಡ್ಯ ಜಿಲ್ಲೆಯಲ್ಲಿನ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಶುಗರ್) 40 ವರ್ಷ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡುವುದನ್ನು ತಡೆಯಬೇಕು. ಅದನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಮಂಡ್ಯ ಜಿಲ್ಲೆಯ ಮಾಜಿ ಶಾಸಕರು, ರೈತ ಮುಖಂಡರು ಈ ವಿಚಾರವಾಗಿ ನನಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಅನಿವಾರ್ಯ ಎಂದ ಡಿಸಿಎಂ
ಸರ್ಕಾರ ಈಗಾಗಲೇ ಗುತ್ತಿಗೆ ನೀಡಿರುವ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಸರಿಯಾಗಿ ಕಬ್ಬು ಅರೆಯುತ್ತಿಲ್ಲ. ಜತೆಗೆ ರೈತರ ಹಿತವನ್ನು ಕಾಪಾಡುತ್ತಿಲ್ಲ. ಈ ವಿಚಾರವಾಗಿ ತಾವುಗಳು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತಾ, ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಿರಿ. ಹೀಗಾಗಿ ತಾವುಗಳು ತಮ್ಮ ಮಾತಿಗೆ ಬದ್ಧರಾಗಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.