ಉಡುಪಿ(ಸೆ.06): ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಬಂಧನದ ಬಗ್ಗೆ ಕಾಂಗ್ರೆಸ್‌ ಪಕ್ಷದ ನಡವಳಿಕೆಯೇ ವಿಚಿತ್ರವಾಗಿದೆ. ಅವರೇನೂ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೇನೂ ಅಥವಾ ತುರ್ತು ಪರಿಸ್ಥಿತಿಯನ್ನು ಎದುರಿಸಿ ಜೈಲಿಗೆ ಹೋಗಿದ್ದಾರೇನೂ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಇಡಿಯಿಂದ ಅನ್ಯಾಯವಾದ್ರೆ ಸುಪ್ರೀಂ ಕೋರ್ಟ್‌ಗೆ ಹೋಗಲಿ:

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ, ಧರಣಿ ಮಾಡಲು ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಇದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಅದೇ ಸ್ವಾತಂತ್ರ್ಯದ ನೆಪದಲ್ಲಿ ದೇಶದ ಪ್ರಧಾನಿ, ಗೃಹಮಂತ್ರಿ ಅವರ ಫೆäಟೋಗಳನ್ನು ಸುಟ್ಟು ವಿಕಾರವಾಗಿ ನಡೆದುಕೊಂಡಿದ್ದಾರೆ. ಈ ಅವಮಾನಕ್ಕೆ ಪ್ರತಿರೋಧ ಮಾಡೋದು ನಮಗೂ ಗೊತ್ತು ಎಂದ ಕೋಟ, ಇಡಿಯಿಂದ ಅನ್ಯಾಯವಾಗಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಲಿ ಎಂದು ತರಾಟೆ ತೆಗೆದುಕೊಂಡರು.

ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

'ಕಾನೂನು ಉಂಟು, ಡಿಕೆಶಿ ಉಂಟು':

‘ಡಿಕೆಶಿ ಬಂಧನದ ಬಗ್ಗೆ ನಿನ್ನೆವರೆಗೂ ನಾವು ಸಾಫ್ಟ್ ಕಾರ್ನರ್‌ ಹೊಂದಿದ್ದೆವು. ಕಾನೂನು ಉಂಟು, ಡಿಕೆಶಿ ಉಂಟು ಅಂತ ನಾವು ಸುಮ್ಮನಿದ್ದೆವು. ನಮ್ಮ ಪಕ್ಷದ ಹಿರಿಯರು ಕೂಡ ಬಹಳ ಸಾಫ್ಟ್ ಆಗಿಯೇ ಮಾತನಾಡಿದ್ದರು. ಇದನ್ನೇ ಕಾರಣ ಮಾಡಿಕೊಂಡು ಬಸ್ಸಿಗೆ ಕಲ್ಲು ಹೊಡೆದರೆ, ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಮಾಡಿದರೆ ಸಹಿಸೋದಿಲ್ಲ’ ಎಂದು ಕೋಟ ಎಚ್ಚರಿಕೆ ನೀಡಿದರು.

ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಸಹಿಸಲ್ಲ:

ಡಿಕೆಶಿ ಜೈಲಿಗೆ ಹೋಗಲು ನಾವು ಕಾರಣ ಅಲ್ಲ. ಹಿಂದೆ ಜಗನ್‌ ಮೋಹನ್‌ ರೆಡ್ಡಿ, ಜನಾರ್ದನ ರೆಡ್ಡಿ ಅವರು ಜೈಲಿಗೆ ಹೋದಾಗ ಹೀಗೆಲ್ಲಾ ಗಲಾಟೆ ಆಗಿರಲಿಲ್ಲ, ಈಗ ಪ್ರತಿಭಟನೆ ಅಂತ ಅಪಮಾನಕಾರಿ ನಡವಳಿಕೆ, ಶಬ್ದ ಪ್ರಯೋಗ ಮಾಡಿದ್ರೆ ನಾವು ಸುಮ್ಮನಿರುವುದಿಲ್ಲ ಎಂದು ಕೋಟ ಎಚ್ಚರಿಕೆ ನೀಡಿದರು.