ಗಾಣಗಾಪುರದಲ್ಲಿ ಡಿಕೆಶಿ ಪತ್ನಿ ಮಧುಕರಿ ಭಿಕ್ಷಾಟನೆ ಸೇವೆ
ಡಿಕೆ ಶಿವಕುಮಾರ್ ಕುಟುಂಬ ದೇಗುಲಗಳ ಭೇಟಿ ಮಾಡುತ್ತಿದ್ದು, ಡಿಕೆ ಶಿವಕುಮಾರ್ ಪತ್ನಿ ಭಿಕ್ಷಾಟನೆ ಸೇವೆ ಸಲ್ಲಿಸಿದರು.
ಚವಡಾಪುರ [ಜ.31]: ಕಲ್ಯಾಣ ಕರ್ನಾಟಕದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಟೆಂಪಲ್ ರನ್ ಗುರುವಾರವೂ ಮುಂದುವರಿದಿದೆ. ಬುಧವಾರವಷ್ಟೇ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗಡೆ ದುರ್ಗಾದೇವಿ ಪೂಜೆ ಸಲ್ಲಿಸಿದ್ದ ಅವರು, ಗುರುವಾರ ಕಲಬುರಗಿ ಜಿಲ್ಲೆಯ ಗಾಣಗಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇವೇಳೆ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ದತ್ತನ ಸನ್ನಿಧಿಯಲ್ಲಿ ರುದ್ರಾಭಿಷೇಕ, ಅನ್ನದಾನ ಮತ್ತು ಮಧುಕರಿ ಭಿಕ್ಷಾಟನೆ ಸೇವೆ ಸಲ್ಲಿಸಿದರು. ದೇವಸ್ಥಾನ ಪ್ರಾಂಗಣದಲ್ಲಿ ಭಿಕ್ಷೆ ಬೇಡಿ ಹರಕೆ ಸಲ್ಲಿಸುವುದೇ ಮಧುಕರಿ ಭಿಕ್ಷೆಯಾಗಿದೆ.
ವಡಗೇರಾ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಕಲಬುರಗಿಯಲ್ಲಿ ವಾಸ್ತವ್ಯ ಹೂಡಿ, ಗಾಣಗಪುರ ದೇವಸ್ಥಾನದಲ್ಲಿ ಮುಂಜಾನೆ 3 ಗಂಟೆ ವೇಳೆ ನಡೆಯುವ ಕಾಕಡಾರತಿಗೆ ಆಗಮಿಸುವರೆಂಬ ನೀರೀಕ್ಷೆ ಇತ್ತು. ಆದರೆ ಬೆಳಗ್ಗೆ 8.30ಕ್ಕೆ ಭೇಟಿ ನೀಡಿದ ಶಿವಕುಮಾರ್ ಅವರನ್ನು ದತ್ತಾತ್ರೇಯ ಮಂದಿರದಲ್ಲಿ ಸ್ವಾಗತಿಸಲಾಯಿತು. ಬಳಿಕ ದೇವಸ್ಥಾನಕ್ಕೆ ಆಗಮಿಸಿ ಪತ್ನಿ, ಮಕ್ಕಳು ಮತ್ತು ಸಹೋದರ, ಸಂಸದ ಡಿ.ಕೆ.ಸುರೇಶ್ ಅವರ ಹೆಸರಲ್ಲಿ ದತ್ತ ಮಹಾರಾಜರ ನಿರ್ಗುಣ ಪಾದುಕಾ ಪೂಜೆ ಹಾಗೂ ರುದ್ರಾಭಿಷೇಕ ಮಾಡಿಸಿದರು.
ಚೀಟಿ ಬರೆದು ದೇವರಲ್ಲಿ ಪೂಜೆ ಮಾಡಿಸಿದ ಡಿಕೆಶಿ: ಚೀಟಿಯಲ್ಲೇನಿತ್ತು...
ಏನೇನು ಪೂಜೆ ಮಾಡಿಸಿದ್ದೀರಿ, ಯಾವ ಸಂಕಲ್ಪ ಮಾಡಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನನ್ನ ವೈಯಕ್ತಿಕ ಪೂಜೆ, ಸಂಕಲ್ಪಗಳನ್ನು ಹೇಗೆ ಹೇಳಲಿ’ ಎಂದು ಚಟಾಕಿ ಹಾರಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಎಲ್ಲರಿಗೂ ದತ್ತ ಮಹಾರಾಜರು ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಿ ನಿರ್ಗಮಿಸಿದರು. ಶಾಸಕ ಎಂ.ವೈ.ಪಾಟೀಲ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಇದ್ದರು.