ಯಾರು ಕೂಡ ಬಹಿಷ್ಕಾರ ಹಾಕುವಂತಿಲ್ಲ ಈ ರೀತಿ ಮಾಡಿದ್ರೆ ಕಾನೂನು ರೀತಿಯ ಕ್ರಮ ಕೈ ಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಸಂದೇಶ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್  

ವರದಿ- ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಡಿ.13): ಸಾಮಾಜಿಕ ಬಹಿಷ್ಕಾರದಿಂದ ಆ ಎರಡು ಕುಟುಂಬಗಳು ನಲುಗಿಹೋಗಿದ್ದವು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡುತ್ತಿದ್ದಂತೆಯೇ ಸ್ವತಃ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ನ್ಯಾಯಾಧೀಶರಂತೂ ಬಹಿಷ್ಕಾರ ಹಾಕಿರುವ ಗ್ರಾಮದ ಯಜಮಾನರನ್ನು ತರಾಟೆಗೆ ತೆಗೆದುಕೊಂಡರು. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪರಿಣಾಮ ಬಹಿಷ್ಕಾರದಿಂದ ಆ ಎರಡು ಕುಟುಂಬಗಳಿಗೆ ಈಗ ಮುಕ್ತಿ ಸಿಕ್ಕಿದೆ. 

ಚಾಮರಾಜನಗರ ತಾಲೂಕಿನ ಲಿಂಗರಾಜಪುರದಲ್ಲಿ ಸಾರ್ವಜನಿಕ ಜಾಗವನ್ನು ಒತ್ತುವರಿ ಮಾಡಿ ಮನೆ ಕಟ್ಟಿದ ಆರೋಪ ಹಾಗು ಮನೆಯ ಮಗಳು ಅಂತರ್ಜಾತಿ ವಿವಾಹ ಆದ ಕಾರಣಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಲಾಗಿತ್ತು. ಇವರನ್ನು ಯಾರು ಸಹ ಮಾತನಾಡುಸುವಂತಿಲ್ಲ, ಶುಭ ಕಾರ್ಯಕಗಳಿಗೆ ಸಾವು ನೋವುಗಳಿಗೆ ಇವರನ್ನು ಕರೆಯುವಂತಿಲ್ಲ, ದೇವಸ್ಥಾನದಲ್ಲಿ ಇವರಿಂದ ಪೂಜೆ ಸ್ವೀಕರಿಸುವಂತಿಲ್ಲ ಇದನ್ನು ಉಲ್ಲಂಘಿಸಿದವರಿಗು ದಂಡ ಹಾಗೂ ಬಹಿಷ್ಕಾರದ ಶಿಕ್ಷೆ. ಹೀಗೆ ಹಲವು ಕಟ್ಟುಪಾಡುಗಳಿಂದ ಗ್ರಾಮದ ಗೋವಿಂದಶೆಟ್ಟಿ ಹಾಗು ಸಿದ್ದರಾಜು ಅವರ ಕುಟುಂಬಗಳು ನಲುಗಿಹೋಗಿದ್ದವು.

ಚಾಮರಾಜನಗರದಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಎರಡು ಕುಟುಂಬಕ್ಕೆ ಬಹಿಷ್ಕಾರ

ತುಂಬು ಗರ್ಭಿಣಿಯಾದ ಗೋವಿಂದ ಶೆಟ್ಟಿಯ ಸೊಸೆ ತನ್ನ ತವರು ಮನೆಗು ಹೋಗಲಾಗದೆ ತನ್ನ ಹೆತ್ತವರ ಮುಖವನ್ನು ನೋಡಲಾಗದೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿ ಸಾಮಾಜಿಕ ಬಹಿಷ್ಕಾರದ ಕಟ್ಟುಪಾಡುಗಳ ಕ್ರೂರತೆಯನ್ನು ಅನಾವರಣ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್ ಭಾರತಿ ಹಾಗು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು. 

ಸಾಮಾಜಿಕ ಬಹಿಷ್ಕಾರ ಹಾಕುವುದು ಕಾನೂನು ಬಾಹಿರವಾಗಿದೆ. ದಂಡ ವಿಧಿಸಲು ಯಾರಿಗೂ ಅಧಿಕಾರ ಇಲ್ಲ, ಸೌಹಾರ್ಧತೆಯಿಂದ ಇರಬೇಕು ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಬಹಿಷ್ಕಾರ ಹಾಕಿರುವ ಯಜಮಾನರನ್ನು ತರಾಟೆಗೆ ತೆಗೆದುಕೊಂಡರು. ಮಾಡಿರುವ ತಪ್ಪನ್ನು ತಿದ್ದುಕೊಳ್ಳಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಕೆಯನ್ನೂ ನೀಡಿದರು. 

ಇನ್ನು ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಯಾರು ಕೂಡ ಬಹಿಷ್ಕಾರ ಹಾಕುವಂತಿಲ್ಲ ಈ ರೀತಿ ಮಾಡಿದ್ರೆ ಕಾನೂನು ರೀತಿಯ ಕ್ರಮ ಕೈ ಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 

ಇದಷ್ಟೇ ಅಲ್ದೆ ನ್ಯಾಯಾಧೀಶರು ಹಾಗೂ ತನ್ನ ಅಧಿಕಾರಿ ವರ್ಗದ ಜೊತೆ ಲಿಂಗರಾಜಪುರ ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇನ್ಮುಂದೆ ಎಲ್ಲರೂ ಸಹಬಾಳ್ವೆ ನಡೆಸುವಂತೆ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದ್ದಾರೆ.

ಗಂಡಸರಿಗೂ ಫ್ರೀ ಟಿಕೆಟ್ ಕೊಟ್ರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ

ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿ ನಡೆಸಿದ ಶಾಂತಿ ಸಭೆ ಫಲಪ್ರದವಾಯಿತು. ನಮಗೂ ಮನುಷತ್ವ ಇದೆ, ಮಾನವೀಯತೆ ಇದೆ. ನಮ್ಮ ಜೊತೆ ಇರುವುದಕ್ಕೆ ಅವರನ್ನು ಸ್ವಾಗತಿಸುತ್ತೇವೆ. ನಾವು ಯಾರಿಗೂ ಬಹಿಷ್ಕಾರ ಹಾಕುವುದಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ಒಪ್ಪಿಕೊಂಡರು. ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ಹೋಗಿದ್ದ ಗೋವಿಂದಶೆಟ್ಟಿ ಹಾಗೂ ಸಿದ್ದರಾಜು ಕುಟುಂಬಗಳು ಇದರಿಂದ ನಿಟ್ಟುಸಿರುಬಿಟ್ಟಿವೆ. 

ಸಾಮಾಜಿಕ ಬಹಿಷ್ಕಾರದಿಂದ ಮಾನಸಿಕ ಹಿಂಸೆ ಹಾಗೂ ಅವಮಾನದಿಂದ ತತ್ತರಿಸಿ ಹೋಗಿದ್ದ ಈ ಕುಟುಂಬಗಳಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಫಲವಾಗಿ ಬಹಿಷ್ಕಾರದಿಂದ ಮುಕ್ತಿ ಸಿಕ್ಕಿದೆ. ಈ ಕುಟುಂಬಗಳಲ್ಲಿ ಮಂದಹಾಸ ಮೂಡಿದೆ. ಇದು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್.