ಗೆದ್ದ ಹಣದಲ್ಲಿ ಶಾಲೆಗೆ ತಂದ ಸಸಿ: ಸಮರ್ಥನಿಗೆ ಭೇಷ್ ಎಂದ ಡಿಸಿ!
ಆದರ್ಶತನ ಮೆರೆದ ಶಾಲಾ ಬಾಲಕ| ಬಾಲಕನ ಔದಾರ್ಯಕ್ಕೆ ಜಿಲ್ಲಾಧಿಕಾರಿ ಫುಲ್ ಫಿಧಾ| ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಶಾಲೆಗೆ ಸಸಿ| ಬಾಗಲಕೋಟೆಯ ಕೇಂದ್ರಿಯ ವಿದ್ಯಾಲಯದ ಬಾಲಕ ಸಮರ್ಥ| ಚಿತ್ರಕಲಾ ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಶಾಲೆಗಳಿಗೆ ಸಸಿ| ಶಾಲೆಗೆ ಭೇಟಿ ನೀಡಿ ಸಮರ್ಥನನ್ನು ಅಭಿನಂಧಿಸಿದ ಜಿಲ್ಲಾಧಿಕಾರಿ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜು.06): ಸಾಮಾನ್ಯವಾಗಿ ಮಕ್ಕಳಿಗೆ ಏನಾದರೂ ಬಹುಮಾನದ ಹಣ ಬಂದರೆಸಾಕು ಆಟದ ಸಾಮಗ್ರಿ ಕೊಳ್ಳೋದು, ಇಷ್ಟವಾದ ತಿಂಡಿ ಕೊಳ್ಳೋದು ಸಾಮಾನ್ಯ. ಆದರೆ ಇಲ್ಲೊಬ್ಬ 5ನೇ ತರಗತಿ ಬಾಲಕ ಸ್ಪರ್ಧೆಯೊಂದರಲ್ಲಿ ವಿಜೇತನಾಗಿ ಬಂದ 1,500 ರೂ.ಗಳನ್ನು ಹೇಗೆ ಸದ್ಬಳಕೆ ಮಾಡಿದ್ದಾನೆ ಗೊತ್ತಾ?
ತಾನು ಗೆದ್ದ ಬಹುಮಾನದ ಹಣವನ್ನು ತಾನು ಕಲಿಯುತ್ತಿರುವ ಶಾಲೆಗೆ ಸಸಿಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾನೆ ಈ ಬಾಲಕ. ಸಾಲದ್ದಕ್ಕೆ ಬಾಲಕನ ಔದಾರ್ಯತನ ಕಂಡು ಆತನಿಗಾಗಿ ಜಿಲ್ಲಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಹಬ್ಬಾಸ್ ಎಂದಿದ್ದಾರೆ.
ನಗರದ ವಿದ್ಯಾಗಿರಿಯಲ್ಲಿರುವ ಬಾಗಲಕೋಟೆಯ ಕೇಂದ್ರಿಯ ವಿದ್ಯಾಲಯದಲ್ಲಿ, 5ನೇ ತರಗತಿ ಓದುತ್ತಿರುವ ಸಮರ್ಥ ಹೀಗೆ ಶಾಲೆಗೆ ಸಸಿಗಳನ್ನು ನೀಡುವ ಮೂಲಕ ಗಮನ ಸೆಳೆದ ವಿದ್ಯಾರ್ಥಿ.
ಜಿಲ್ಲೆಯ ಗದ್ದನಕೇರಿಯ ಸೂರ್ಯಕಾಂತ ಮತ್ತು ರೇಣುಕಾ ಎಂಬುವವರ ಪುತ್ರ ಸಮರ್ಥ, ಲೈಯನ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾಣ ಗೆದ್ದಿದ್ದ.
ತನಗೆ ಬಂದ ಹಣದಿಂದ ಸಮರ್ಥ ಏನನ್ನೂ ಅಭಿಲಾಷೆ ಮಾಡದೆ, ತಕ್ಷಣ ತನ್ನ ತಂದೆ-ತಾಯಿಗಳ ಮೂಲಕ ತನ್ನಿಷ್ಟದಂತೆ ಬಹುಮಾನದಿಂದ ಬಂದ ಹಣದಿಂದ ಸಸಿಗಳನ್ನು ತಾನು ಕಲಿಯುತ್ತಿರಿವ ಶಾಲೆಗೆ ನೀಡುವ ಆಶಯ ವ್ಯಕ್ತಪಡಿಸಿದ್ದಾನೆ.
ಪರಿಣಾಮ 50 ಬೇರೆ ಬೇರೆ ವಿಧಧ ಅಮೂಲ್ಯವಾದ ಸಸಿಗಳನ್ನ ತಂದು ಕೇಂದ್ರಿಯ ಶಾಲಾ ಆವರಣದಲ್ಲಿ ನೆಡುವಲ್ಲಿ ಸಮರ್ಥ ಯಶಸ್ವಿಯಾಗಿದ್ದಾನೆ.
ಇನ್ನು ಶಾಲಾ ಬಾಲಕನ ಬಗ್ಗೆ ತಿಳಿದ ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ತಮ್ಮ ಕೆಲಸದ ಒತ್ತಡಗಳ ಮಧ್ಯೆ ಶಾಲೆಗೆ ಭೇಟಿ ಬಾಲಕನನ್ನು ಮಾತನಾಡಿಸಿದ್ದಾರೆ.
ಶಾಲೆಯ ಸಂಪ್ರದಾಯದಂತೆ ಪ್ರತಿಯೊಂದು ಮಗುವಿನ ಹುಟ್ಟುಹಬ್ಬ ಸಂದರ್ಭದಲ್ಲೂ ಶಾಲೆಯ ಆವರಣದಲ್ಲಿ ಒಂದೊಂದು ಸಸಿಯನ್ನ ನೆಡಲಾಗುತ್ತಿದೆ. ಇದರೊಟ್ಟಿಗೆ ಬೆಳೆಸಿದ ಗಿಡಗಳೂ ಸೇರಿ ಶಾಲಾ ಆವರಣದಲ್ಲಿ ಈಗ 500ಕ್ಕೂ ಅಧಿಕ ಗಿಡಗಳಿವೆ.
ಈ ಗಿಡಗಳ ಬಗ್ಗೆ ಮತ್ತು ಈಗ ಸಮರ್ಥ ನೆಡುವ ಸಸಿಗಳಿಗೆ ನೀರಿನ ಸೌಲಭ್ಯದ ಕುರಿತು ಜಿಲ್ಲಾಧಿಕಾರಿಗಳು, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅನಂತ ಪದ್ಮನಾಭ್ ಅವರನ್ನು ಕೇಳಿದಾಗ, ಕೊಂಚ ನೀರಿನ ಸೌಲಭ್ಯ ಕಡಿಮೆ ಇರುವ ಬಗ್ಗೆ ಮಾಹಿತಿ ಗೊತ್ತಾಗಿದೆ.
ಇಷ್ಟಾಗಿದ್ದೇ ತಡ ಜಿಲ್ಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳನ್ನು ಕರೆಯಿಸಿ ಶಾಲೆಗೆ ಟ್ಯಾಂಕರ್ ಮೂಲಕ ನೀರು ಇಲ್ಲವೆ ಬೋರವೆಲ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಮರ್ಥ ಎಂಬ ಶಾಲಾ ಬಾಲಕನ ಅಭಿಮಾನದ ಪರಿಸರ ಕಾಳಜಿಯಿಂದ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಶಾಲೆಗೆ ನೀರಿನ ಸೌಲಭ್ಯ ನೀಡುವಂತಾಯಿತು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ , ಶಾಲಾ ಬಾಲಕ ಸಮರ್ಥನ ಪರಿಸರ ಕಾಳಜಿ ಅಭಿಮಾನ ಕೇಳಿ ಖುಷಿಯಾಯಿತು ಎಂದು ಹೇಳಿದರು.
ಇತ್ತ ಶಾಲೆಯ ಪ್ರಾಂಶುಪಾಲ ಅನಂತ ಪದ್ಮನಾಭ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಪರಿಸರದ ಮೇಲೆ ಅಭಿಮಾನ ಉಳಿಸಿಕೊಂಡು ದರಂತೆ ಉಳಿದ ಬಾಲಕರಿಗೆ ಮಾದರಿಯಾಗಿರುವ ಸಮರ್ಥನ ಕಾರ್ಯ ನಿಜಕ್ಕೂ ಅಭಿನಂದನೀಯ ಮತ್ತು ಆತನ ಆಶಯದಂತೆ ಆತನ ಸಸಿಗಳ ಜೊತೆ ಉಳಿದ ಸಸಿಗಳನ್ನೂ ಪೋಷಿಸುತ್ತೇವೆ ಎಂದರು.
ಒಟ್ಟಿನಲ್ಲಿ ತನಗೆ ಬಂದ ಬಹುಮಾನದ ಹಣದಿಂದ ಶಾಲೆಗೆ ಸಸಿಗಳನ್ನು ನೀಡುವ ಮೂಲಕ ಸಮರ್ಥ ಇದೀಗ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿದ್ದಾನೆ.