ಬ್ಲ್ಯಾಕ್ ಫಂಗಸ್ ಎಫೆಕ್ಟ್: ಅಲರ್ಟ್ ಆದ ಬಾಗಲಕೋಟೆ ಜಿಲ್ಲಾಡಳಿತ
* ಕೋವಿಡ್ ನಿರ್ವಹಣೆಯ 39 ವೈದ್ಯರೊಂದಿಗೆ ಡಿಸಿ & ಡಿಎಚ್ಓ ವಿಡಿಯೋ ಕಾನ್ಪರೆನ್ಸ್
* ಮುಂಜಾಗೃತ ಕ್ರಮಗಳ ಬಗ್ಗೆ ಸೂಚನೆ
* ಬಾಗಲಕೋಟೆ ಜಿಲ್ಲೆಯ ಇಬ್ಬರಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್
ಬಾಗಲಕೋಟೆ(ಮೇ.16): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರ ಮಧ್ಯೆಯೇ ಬ್ಲ್ಯಾಕ್ ಫಂಗಸ್ ಭೀತಿ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಬ್ಲ್ಯಾಕ್ ಫಂಗಸ್ ಹಾವಳಿ ಶುರುವಾಗಿದೆ. ಇವೆಲ್ಲದರ ಮಧ್ಯೆ ಬಾಗಲಕೋಟೆ ಜಿಲ್ಲೆಗೂ ಬ್ಲ್ಯಾಕ್ ಫಂಗಸ್ ವಕ್ಕರಿಸಿದ್ದು, ಜಿಲ್ಲೆಯ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಎಚ್ಚೆತ್ತ ಜಿಲ್ಲಾಡಳಿತ ಕೋವಿಡ್ ನಿರ್ವಹಣೆಯ ವೈದ್ಯರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದೆ.
ಇಂದು(ಭಾನುವಾರ) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ 39 ಜನ ವೈದ್ಯರಿಗೆ ವಿಡಿಯೋ ಕಾನ್ಪರೆನ್ಸ್ ನಡೆದಿದೆ. ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ ಮತ್ತು ಡಿಎಚ್ಓ ಡಾ.ಅನಂತ ದೇಸಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀವ್ರ ಚರ್ಚೆ ನಡೆಸಲಾಗಿದೆ.
"
ಜಿಲ್ಲೆಯಲ್ಲಿ ಕೊರೋನಾ ಭೀತಿಯ ಮಧ್ಯೆ ಜನರು ಈಗ ಬ್ಯಾಕ್ ಫಂಗಸ್ ಬಗ್ಗೆ ಜಾಗೃತರಾಗುವಂತಾಗಿದ್ದು, ಜಿಲ್ಲೆಯ ಬೀಳಗಿ, ಬಾಗಲಕೋಟೆ ಸೇರಿದಂತೆ ಇಬ್ಬರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಇತ್ತ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾಡಳಿತ ಅಲರ್ಟ್ ಆಗಿದೆ.
ಬಾಗಲಕೋಟೆಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್: ಇಬ್ಬರಲ್ಲಿ ಸೋಂಕು ಪತ್ತೆ
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ನಿರ್ವಹಣೆ ಮಾಡುವುದು ಅದರೊಟ್ಟಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್ ಬಗ್ಗೆ ಕೈಗೊಳ್ಳಬೇಕಾದ ಸರ್ಕಾರದಿಂದ ಬಂದಿರುವ ಗೈಡ್‌ಲೈನ್ಸ್‌ಗಳನ್ವಯ ಮುಂಜಾಗೃತ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ ಕೋವಿಡ್ ಆಸ್ಪತ್ರೆ ನಿರ್ವಹಣೆ ಮಾಡುತ್ತಿರುವ ವೈದ್ಯರು ಸಹ ತಮ್ಮ ಅಹವಾಲುಗಳನ್ನ ಜಿಲ್ಲಾಡಳಿತಕ್ಕೆ ಹೇಳಿಕೊಂಡರು ಇದಕ್ಕೆ ಸಂಭಂದಪಟ್ಟಂತೆ ಸೂಕ್ತ ಕ್ರಮಗಳ ಭರವಸೆಯನ್ನು ಜಿಲ್ಲಾಡಳಿತದಿಂದ ನೀಡಲಾಯಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona