ಹುಬ್ಬಳ್ಳಿ[ಡಿ.16]: ಸ್ತ್ರೀ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಭಾನುವಾರ ನಡೆದ ದಿಶಾ ಸೈಕಲ್‌ ರೈಡ್‌ ಮತ್ತು ವಾಕ್‌ಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹುಬ್ಬಳ್ಳಿಯ ಬೈಸಿಕಲ್‌ ಕ್ಲಬ್‌ನಿಂದ ಏರ್ಪಡಿಸಿದ್ದ ತೋಳನಕೆರೆಯಿಂದ ಬಿವಿಬಿ ಆವರಣದವರೆಗಿನ ದಿಶಾ ಸೈಕಲ್‌ ರೈಡ್‌ ಮತ್ತು ವಾಕ್‌ಥಾನ್‌ ನಡೆಯಿತು.

ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಚಾಲನೆ ನೀಡಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟು ಕಠಿಣ ಕಾನೂನು ಕ್ರಮಗಳು ಜಾರಿಗೊಂಡಿವೆ. ದೌರ್ಜನ್ಯಕ್ಕೆ ಒಳಗಾದವರು ಯಾವುದಕ್ಕೂ ಹಿಂಜರಿಯದೆ ಅನ್ಯಾಯದ ವಿರುದ್ಧ ಹೋರಾಡಬೇಕು. ಪೊಲೀಸ್‌ ಇಲಾಖೆಯೂ ಮಹಿಳೆಯರ ಸುರಕ್ಷತೆಗಾಗಿ ಸಾಕಷ್ಟು ಕ್ರಮ ಕೈಗೊಂಡು ರಕ್ಷಣೆ ನೀಡುತ್ತಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗ್ಗೆ 6.30ಕ್ಕೆ ಆರಂಭವಾದ ಸೈಕಲ್‌ ರೈಡ್‌ನಲ್ಲಿ 200ಕ್ಕೂ ಹೆಚ್ಚು ಮಹಿಳೆಯರು, 300ಕ್ಕೂ ಹೆಚ್ಚು ಮಹಿಳೆಯರು ವಾಕಾಥಾನ್‌ನಲ್ಲಿ ಭಾಗವಹಿಸಿದ್ದರು. ತೋಳನಕೆರೆಯಿಂದ ಆರಂಭಗೊಂಡ ದಿಶಾ ರೈಡ್‌ ಆ್ಯಂಡ್‌ ವಾಕ್‌ ಬಿವಿಬಿ ಆವರಣದವರೆಗೆ ನಡೆದು ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ನೇತೃತ್ವದಲ್ಲಿ ಸಮಾರೋಪಗೊಂಡಿತ್ತು. ಈ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಡಿ, ಹೋರಾಟ ಮಾಡಲು ಮಹಿಳೆ ಕೂಡ ಬಲಿಷ್ಠಳು, ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು.

ಇದೇ ಸಂದರ್ಭದಲ್ಲಿ ಗಿನ್ನಿಸ್‌ ವಲ್ಡ್‌ರ್‍ ರೆಕಾರ್ಡ್‌ ಮಾಡಿದ ಓಜಲ್‌ಗೆ ಸನ್ಮಾನಿಸಲಾಯಿತು. ವಿದ್ಯಾನಗರ ಠಾಣೆ ಪಿಐ ಆನಂದ ಒಣಕುದರೆ, ಬೈಸಿಕಲ್‌ ಕ್ಲಬ್‌ನ ಚೇರ್‌ಮನ್‌ ಆನಂದ ಬೇದ್‌, ಕಾರ್ಯದರ್ಶಿ ಕೌಸ್ತುಬ ಸಂಶೀಕರ, ಸುಷ್ಮಾ ಹಿರೇಮಠ, ಅನೀಷ ಖೊಜೆ, ಚಿಂತನ ಷಾ., ಖುಷ್ಬು ಬೇದ್‌, ದೀಬಾ ಮಳಗಿ, ಅಂಜಲಿ ಮೊಕಾಶಿ, ಲೋದಿಯಾ ಸೇರಿ ಹಲವರು ಇದ್ದರು.