ಎಸ್ಸಿ ಅಭಿವೃದ್ಧಿ ಯೋಜನೆ ಬಗ್ಗೆ ಸಿಎಂ ಜತೆ ಚರ್ಚೆ : ನಾರಾಯಣಸ್ವಾಮಿ
ಪರಿಶಿಷ್ಟಜಾತಿ ಸಮುದಾಯಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಚರ್ಚಿಸಲು ಸದ್ಯದಲ್ಲಿಯೇ ದಲಿತ ಶಾಸಕರ ನಿಯೋಗದೊಡನೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವುದಾಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮೈಸೂರು (ಜ. 09 ): ಪರಿಶಿಷ್ಟಜಾತಿ ಸಮುದಾಯಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಚರ್ಚಿಸಲು ಸದ್ಯದಲ್ಲಿಯೇ ದಲಿತ ಶಾಸಕರ ನಿಯೋಗದೊಡನೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವುದಾಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಲಲಿತ ಮಹಲ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಎಸ್ಸಿ ಮೋರ್ಚಾ ರಾಷ್ಟ್ರೀಯ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕೈಗೊಳ್ಳುವ ನಿರ್ಣಯ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲು ನನ್ನ ಮನೆ ಮತ್ತು ಮನದ ಬಾಗಿಲು ತೆರೆದಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತು ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಎಸ್ಸಿ ಸಮುದಾಯದ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಜೊತೆಗೆ ಹೊಸದಾಗಿ ಏನೆಲ್ಲ ಯೋಜನೆ ಸೇರಿಸಬೇಕು ಎಂಬ ಕುರಿತು ಶಾಸಕರೊಡನೆ ಚರ್ಚಿಸಿ, ಬಳಿಕ ಮುಖ್ಯಮಂತ್ರಿಗಳನ್ನು ಸದ್ಯದಲ್ಲಿಯೇ ಭೇಟಿ ಮಾಡುವುದಾಗಿ ಹೇಳಿದರು.
ಈ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಂಡ ರಾಜಕೀಯ ನಿರ್ಣಯಗಳನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲಾಗುತ್ತದೆ. ನಾವು ರಾಜ್ಯದಲ್ಲಿ ಕೈಗೊಳ್ಳಬೇಕಾದ ತೀರ್ಮಾನವನ್ನು ಮುಖ್ಯಮಂತ್ರಿಗಳೊಡನೆ ಚರ್ಚಿಸುತ್ತೇವೆ. ಈಗ ನಡೆದ ಕಾರ್ಯಕಾರಿಣಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ದಲಿತರ ಅಭಿವೃದ್ಧಿಪರ ಯೋಜನೆಗಳನ್ನು ಮುಕ್ತಕಂಠದಿಂದ ಸ್ವಾಗತಿಸಿ, ಅಭಿನಂದಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದರು.
ಪ್ರಮುಖವಾಗಿ ಪ.ಜಾತಿ ಮತ್ತು ಪ.ಪಂಗಡ ಸಮುದಾಯದ ಮೀಸಲಾತಿ ಹೆಚ್ಚಳ, ಕೇಂದ್ರ ಸರ್ಕಾರ ಅಂಬೇಡ್ಕರ್ ಜನ್ಮಸ್ಥಳ, ಬೌದ್ಧ ಧರ್ಮ ಸ್ವೀಕರಿಸಿದ ಸ್ಥಳ ಅಭಿವೃದ್ಧಿಪಡಿಸಿದಂತೆ ರಾಜ್ಯದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಏಳು ಸ್ಥಳಗಳಾದ ಬೆಂಗಳೂರು, ಕೆಜಿಎಫ್, ಧಾರವಾಡ, ಹಾಸನ, ವಿಜಯಪುರ, ಬೆಳಗಾವಿ ಮತ್ತು ಗುಲ್ಬರ್ಗಾ ನಗರಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ಪ್ರಾರಂಭಿಕ ಅನುದಾನವಾಗಿ 20 ಕೋಟಿ ನೀಡಿರುವುದು, ಬಡವರಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಿರುವುದು, ರಾಜ್ಯದಲ್ಲಿ ದಲಿತರಿಗಾಗಿ 100 ಹಾಸ್ಟೆಲ್ ತೆರೆಯಲು ಅನುದಾನ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸಲಾಗಿದೆ ಎಂದರು.
ಆರಂಭದಿಂದಲೂ ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸಿಕೊಂಡು ಬರಲಾಯಿತು. ಆದರೆ ಇತ್ತೀಚೆಗೆ ದಲಿತರು ಬಿಜೆಪಿಯತ್ತ ದಾವಿಸಿ ಬರುತ್ತಿದ್ದಾರೆ. ಕಾಂಗ್ರೆಸ್ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವುದು ಅವರಿಗೆ ತಿಳಿದಿದೆ. ಸಂವಿಧಾನದ ಕುರಿತು ಸದನದಲ್ಲಿ ಎಂದೂ ಕೂಡ ಚರ್ಚೆ ಆಗಿರಲಿಲ್ಲ. ಆದರೆ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಸಂಸತ್‌ನಲ್ಲಿ ಚರ್ಚೆ ಆಯಿತು ಎಂದು ಹೇಳಿದರು.
ದಲಿತ ಮುಖ್ಯಮಂತ್ರಿ ಕುರಿತು ನಾವು ಯಾವುದೇ ರೀತಿಯ ಚರ್ಚೆ ಮಾಡಲ್ಲ. ಇಂತಹ ವಿಷಯಗಳನ್ನು ರಾಜ್ಯ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಲಾಗುತ್ತದೆ. ಇದು ರಾಷ್ಟ್ರೀಯ ಕಾರ್ಯಕಾರಿಣಿಯಾದ್ದರಿಂದ ಈ ವಿಷಯ ಬಂದಿಲ್ಲ. ಆದರೆ ದೇಶದಲ್ಲಿ 75 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದಲಿತರ ಮತವನ್ನು ಅಷ್ಟೂವರ್ಷ ಪಡೆದುಕೊಂಡರೂ ಒಬ್ಬರನ್ನು ದಲಿತ ಸಿಎಂ ಮಾಡಲಿಲ್ಲ. ಆದರೆ ಬಿಜೆಪಿ ಗೋವಿಂದಕಾರಜೋಳ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದು ದಲಿತರ ಪರ ಯಾರು ಇದ್ದಾರೆ ಎಂಬುದನ್ನು ತೋರಿಸುವುದಾಗಿ ಅವರು ವಿವರಿಸಿದರು.
ಈ ಕಾರ್ಯಾಕಾರಿಣಿಯಲ್ಲಿ ದೇಶದ ವಿವಿಧೆಡೆಯಿಂದ 139 ಮಂದಿ ಪಾಲ್ಗೊಂಡಿದ್ದರು. ಅಲ್ಲದೇ, ಕರ್ನಾಟಕ ಬಿಜೆಪಿಯ ಸಂಘಟನಾತ್ಮಕ 39 ಜಿಲ್ಲೆಗಳ ಪೈಕಿ 35 ಜಿಲ್ಲೆಯಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಎಲ್ಲರೂ ಕೂಡ ಈ ಕಾರ್ಯಕಾರಿಣಿ ಆಯೋಜನೆಯ ಶಿಸ್ತು ಬದ್ಧತೆಯನ್ನು ಮೆಚ್ಚಿದ್ದಾರೆ. ನಮ್ಮ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ವಕ್ತಾರ ಮಹೇಶರಾಜೇ ಅರಸ್, ಜಿಲ್ಲಾ ವಕ್ತಾರ ಡಾ.ಕೆ. ವಸಂತಕುಮಾರ್ ಇದ್ದರು.