ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುವುದು ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್. ಪಾಟೀಲ್ ಮಾಹಿತಿ ನೀಡಿದರು.
ಹುಣಸೂರು [ಸೆ.17]: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ತಂಬಾಕು ಮಂಡಳಿ ಅಧಿಕಾರಿಗಳು, ಕಂಪನಿಯು ರೈತ ಪರವಾಗಿರಬೇಕು. ಮಾರುಕಟ್ಟೆಯಲ್ಲಿ ಗುಣಮಟ್ಟದ ನೆಪವೊಡ್ಡಿ ರೈತರಿಗೆ ಅನಗತ್ಯ ಕಿರುಕುಳ ನಿಲ್ಲಬೇಕು, ಉತ್ತಮ ಬೆಲೆ ನೀಡಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕಟ್ಟೆಮಳಲವಾಡಿಯ ಮೂರು ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಪ್ರಸಕ್ತ ಸಾಲಿನ ತಂಬಾಕು ಹರಾಜು ಪ್ರಕ್ರಿಯೆ ಆರಂಭಗೊಂಡು, ಬೇಲ್‌ಗಳಿಗೆ ಪೂಜೆ ಸಲ್ಲಿಸಿ, ಬೇಲ್ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ವರ್ಷ 165 ರಿಂದ ಆರಂಭಗೊಂಡು ಅತಿ ಹೆಚ್ಚು ಅಂದರೆ 188 ರು. ವರೆಗೆ ಮಾರಾಟವಾಗಿತ್ತು. ಸರಾಸರಿ 142.30 ರು. ದರ ದೊರಕಿತ್ತು. ಪ್ರತಿವರ್ಷ ಪ್ರತಿ ಕೆಜಿಗೆ ಐದು ರೂಪಾಯಯಂತೆ ಹೆಚ್ಚಿಸುತ್ತಿದ್ದ ಕಂಪನಿಗಳು, ಉತ್ತಮ ತಂಬಾಕು ಕೆಜಿಗೆ 175 ರು. ಗಳಿಗೆ ಮಾರಾಟವಾಯಿತು. ಇದೇ ಮೊದಲ ಬಾರಿಗೆ ಒಮ್ಮೆಲೆ ಕೆಜಿಗೆ ಹತ್ತು ರೂ ಹೆಚ್ಚಿರುವುದು ವಿಶೇಷವಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಂಬಾಕು ಮಾರಾಟ ಮಾಡುವ ಬೆಳೆಗಾರರಿಗೆ ಈವರೆಗಿದ್ದ ಚೆಕ್ ಪದ್ಧತಿ ರದ್ದುಗೊಳಿಸಿ, ಇದೇ ಮೊದಲ ಬಾರಿಗೆ ಬೆಳೆಗಾರರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಪದ್ದತಿ ಆರಂಭಗೊಂಡಿದೆ. ಚೆಕ್ ಹಾಗೂ ಕಲೆಕ್ಷನ್‌ಗಾಗಿ ಅಲೆದಾಟ ತಪ್ಪಲಿದ್ದು, ಪ್ರತಿಯೊಬ್ಬ ಬೆಳೆಗಾರನಿಗೆ ತಂಬಾಕು ಮಾರಾಟವಾದ 11 ದಿನಕ್ಕೆ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಪ್ರತಿ ರೈತನಿಗೆ 2 ರಿಂದ 3 ಸಾವಿರ ರೂಪಾಯಿ ಹಾಗೂ ಸಮಯ ಉಳಿತಾಯವಾಗಲಿದೆ. ಪೇಪರ್‌ಲೆಸ್ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಬಾರಿ ಉತ್ತಮ ಬೆಲೆ ನಿರೀಕ್ಷಿಸಲಾಗಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್. ಪಾಟೀಲ್ ಮಾಹಿತಿ ನೀಡಿದರು.
