ತುಮಕೂರು [ಆ.30]:  ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ಆಗಮಿಸಿದ ಸತ್ಯಶೋಧನಾ ಸಮಿತಿ ಮುಂದೆ ಜಿಲ್ಲಾ ಕಾಂಗ್ರೆಸ್‌ನಲ್ಲಿದ್ದ ಭಿನ್ನಮತ ಸ್ಫೋಟಗೊಂಡ ಘಟನೆ ಗುರುವಾರ ನಡೆಯಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಪರಾಮರ್ಶೆ ನಡೆಸಲು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದ ತಂಡ ಗುರುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ವೇಳೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಬೆಂಬಲಿಗರು ಮೊದಲು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಬಸವರಾಜ ರಾಯರೆಡ್ಡಿ ಭಾಷಣಕ್ಕೆ ತಡೆವೊಡ್ಡಿದರು. ಅಲ್ಲದೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣಯ್ಯ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು. ಮೊದಲು ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ಬಳಿಕ ಮಾತನಾಡಿ ಎಂದು ಪಟ್ಟು ಹಿಡಿದರು. ಆಗ ಮುಖಂಡರೆಲ್ಲಾ ಅದರ ಬಗ್ಗೆ ಗಮನಹರಿಸುವ ಭರವಸೆ ನೀಡಿದ ಬಳಿಕ ಪರಾಮರ್ಶೆ ಸಭೆ ನಡೆಯಿತು.

ಬಳಿಕ ಸಮಿತಿ ಕಾಂಗ್ರೆಸ್‌ ಪಕ್ಷದ ಕಳಪೆ ಸಾಧನೆ ಬಗ್ಗೆ ಸ್ಥಳೀಯ ಮುಖಂಡರಿಂದ ಮಾಹಿತಿ ಕಲೆ ಹಾಕಿತು. ಸಮಿತಿಯ ಸದಸ್ಯರಾದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರು ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಪಕ್ಷದಿಂದ ಆಯ್ಕೆಯಾಗಿರುವ ಹಾಲಿ, ಮಾಜಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪಕ್ಷದ ಹಿನ್ನಡೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ದೇಶಕ್ಕೆ ಸ್ವಾತಂತ್ರ್ಯಕೊಟ್ಟಕಾಂಗ್ರೆಸ್‌ ಪಕ್ಷ ದೇಶದ ಅಭಿವೃದ್ಧಿಗಾಗಿ ಏನೇನು ಮಾಡಿದೆ ಎಂಬುದು ಯುವಜನತೆಗೆ ಗೊತ್ತಿಲ್ಲ. ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಟ್ಟಿರುವ ಕೊಡುಗೆಯ ಬಗ್ಗೆಯೂ ಮಾಹಿತಿ ಇಲ್ಲ. ಸಂವಹನದ ಅಂತರದಿಂದಾಗಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಸಣ್ಣಪುಟ್ಟಮತ್ಸರದಿಂದ ಈ ರೀತಿ ಫಲಿತಾಂಶ ಎದುರಿಸುವ ಸನ್ನಿವೇಶ ಉಂಟಾಗಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಸಭಾ ಚುನಾವಣೆಯಲ್ಲಿ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್‌ ನೀಡಬೇಕು ಎಂದು ಅಂತಿಮ ಅಂತದವರೆಗೂ ಪ್ರಯತ್ನಿಸಲಾಗಿತ್ತು. ಕಡೆ ಕ್ಷಣದಲ್ಲಿ ಸಾಧ್ಯವಾಗಲಿಲ್ಲ. ದೇವೇಗೌಡರು ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದರು. ಅವರು ಗೆಲ್ಲಬಹುದೆಂಬ ವಿಶ್ವಾಸ ಇತ್ತು. ಆದರೆ ಕಡಿಮೆ ಅಂತರದಲ್ಲಿ ಸೋತಿದ್ದು ನೋವು ತಂದಿದೆ. ಎಸ್‌.ಪಿ.ಮುದ್ದಹನುಮೇಗೌಡರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುದುಡಿದಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಪಕ್ಷಸಂಘಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಜಿ ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಜಿಪಂ ಸದಸ್ಯರು ಸೇರಿದಂತೆ ಎಲ್ಲರೂ ಕೆಲಸ ಮಾಡಿದ್ದಾರೆ. ಆದರೂ ಕಡಿಮೆ ಅಂತರದಿಂದ ಸೋಲಾಯಿತು. ಜಿಲ್ಲೆಯಲ್ಲಿ ಮೂರು ಜನ ಶಾಸಕರಿದ್ದಾರೆ. ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳು ಪಕ್ಷದ ಹಿಡಿತದಲ್ಲಿವೆ. ಹಾಗಾಗಿ, ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ರಾಮಕೃಷ್ಣ, ಮಾಜಿ ಶಾಸಕರಾದ ರಫೀಕ್‌ ಅಹಮ್ಮದ್‌, ಶಫಿ ಅಹಮ್ಮದ್‌, ಮುರಳೀಧರ ಹಾಲಪ್ಪ, ಇಕ್ಬಾಲ್‌ ಅಬ್ದುಲ್ಲಾ ಖಾನ್‌, ಆರ್‌.ರಾಜೇಂದ್ರ, ಸುಜಾತ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.