ಗುರುರಾಜ ವಾಳ್ವೇಕರ

ಜಮಖಂಡಿ[ಫೆ.15]: ಪಾರದರ್ಶಕ ಆಡಳಿತ, ನೌಕರರ ಹಿತ ಸೇರಿದಂತೆ ನಾನಾ ರೀತಿಯ ಉದ್ದೇಶಗಳಿಗಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶ ತಾಲೂಕಿನಲ್ಲಿ ಇನ್ನೂ ಪೂರ್ಣ ಪ್ರಮಾಣವಾಗಿಲ್ಲ.

ತಾಲೂಕಿನ ಒಟ್ಟು 38 ಗ್ರಾಪಂಗಳ ಪೈಕಿ ಈಗಾಗಲೇ ಕೆಲವು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಇನ್ನೂ 30 ಗ್ರಾಪಂಗಳಲ್ಲಿ ಅಳವಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 2016ರಲ್ಲಿ ಪ್ರತಿಯೊಂದು ಗ್ರಾಪಂಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಹೇಳಿತ್ತು. ಆದರೆ, ಎಲ್ಲ ಗ್ರಾಪಂಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನಾದರೂ ಬಳಸಬೇಕು. ಇಲ್ಲವೇ 14ನೇ ಹಣಕಾಸು ಆಯೋಗದಲ್ಲಿ ಅನುದಾನವನ್ನಾದರೂ ಪಡೆದುಕೊಳ್ಳಬೇಕು ಎಂದ ಸೂಚನೆಯನ್ನು ಆದೇಶದೊಂದಿಗೆ ಹೇಳಿತ್ತು.

ಅಳವಡಿಕೆ ಏಕೆ ಕಷ್ಟವಾಗಿದೆ?:

ಗ್ರಾಪಂಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಂಗ್ರಹದ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಸಂಗ್ರಹವಾದರೂ ಸ್ಥಳೀಯ ಗ್ರಾಪಂಗಳ ವೆಚ್ಚಕ್ಕೆ ಅದನ್ನು ಸರಿದೂಗಿಸಿ, ಇನ್ನೂ ಅನುದಾನ ಬೇಕಾಗುವ ಸಂದರ್ಭ ಕೂಡ ಒದಗಿಬರುತ್ತದೆ. ಇಂತಹ ಸಂದರ್ಭದಲ್ಲಿ ಸಿಸಿಟಿವಿ ಅಳವಡಿಸಲು ಹೇಗೆ ಸಾಧ್ಯ ಎಂಬುವುದು ಸ್ಥಳೀಯ ಅಧಿಕಾರಿಗಳ ವಾದವೂ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವುದರಿಂದ ಸಾರ್ವಜನಿಕರಿಗೆ ಪಾರದರ್ಶಕವಾಗಿ ಆಡಳಿತ ನೀಡಬಹುದು. ಗ್ರಾಪಂಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಪಿಡಿಒ, ಕಾರ್ಯದರ್ಶಿ, ಇತರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದು ಸೇರಿದಂತೆ ನೌಕರರ ಮೇಲಿನ ಹಲ್ಲೆಯಂತಹ ಪ್ರಕರಣಗಳು ನಡೆದಲ್ಲಿ ಅವುಗಳಿಗೆ ಸರಿಯಾದ ಸಾಕ್ಷಿ ಕೂಡ ಸಿಗುತ್ತದೆ ಎಂಬುದು ಸರ್ಕಾರದ ಉದ್ದೇಶ ಕೂಡ ಇದರಲ್ಲಿ ಅಡಗಿದೆ.

ಜಮಖಂಡಿ ತಾಲೂಕಿನಲ್ಲಿ 38 ಗ್ರಾಪಂ ಕಚೇರಿಗಳಿದ್ದು, ಅವುಗಳಲ್ಲಿ ಎಲ್ಲ ಗ್ರಾಪಂಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆಂದು ಹೇಳಲಾದರೂ ಕೆಲವು ಗ್ರಾಪಂಗಳಲ್ಲಿ ಅವುಗಳ ಅಳವಡಿಕೆ ಸಮರ್ಪಕವಾಗಿ ನಡೆದಿಲ್ಲ. ತಾಲೂಕಿನ ಕೆಲವು ಗ್ರಾಪಂಗಳಿಗೆ ಅಳವಡಿಸಿದರೂ ಕೆಲವು ಕಡೆ ದುರಸ್ತಿಯಲ್ಲಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ನಾಮ್‌ ಕೆ ವಾಸ್ತೆಗೆ ಮಾತ್ರ ಅಳವಡಿಸಲಾಗಿದೆ. ಇನ್ನು ಕುಂಬಾರಹಳ್ಳ, ಆಲಗೂರ, ಗ್ರಾಪಂ ಕಚೇರಿಗಳಿಗೆ ಇದುವರೆಗೂ ಸಿಸಿಟಿವಿ ಕ್ಯಾಮೆರಾಗಳನ್ನೇ ಅಳವಡಿಸದಿರುವುದು ವಿಪರ್ಯಾಸದ ಸಂಗತಿ.

ಸಿಸಿಟಿವಿ ಅಳವಡಿಸಲು ಏನು ಮಾಡಬೇಕು?:

ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಅನಿವಾರ್ಯತೆ ಪಿಡಿಒ, ಕಾರ್ಯದರ್ಶಿಗಳಿಗಿದೆ. ಆದರೆ, ಅದಕ್ಕಾಗಿ ಗ್ರಾಪಂ ಸಭೆಗಳಲ್ಲಿ ಠರಾವು ಕೂಡ ಪಾಸ್‌ ಮಾಡಬೇಕು. ಇದರ ಅನಿವಾರ್ಯತೆಯನ್ನು ಗ್ರಾಪಂ ಅಧ್ಯಕ್ಷರಿಗೂ ತಿಳಿಯಹೇಳಬೇಕಿದೆ. ಇದಾದ ನಂತರ ಅದನ್ನು ಸ್ಥಳೀಯ ಸಂಪನ್ಮೂಲ ಅಥವಾ 14ನೇ ಹಣಕಾಸು ಅನುದಾನದ ಅಡಿಯಲ್ಲಿ ಜಿಪಂಗೆ ಅರ್ಜಿ ಹಾಕಬೇಕಿದೆ.

ಗ್ರಾಮಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಗ್ರಾಪಂ ಆಡಳಿತ ವ್ಯಾಪ್ತಿ, ವಸತಿ, ಶೌಚಗೃಹ, ನರೇಗಾ, ಸಮಗ್ರ ಕುಡಿಯುವ ನೀರು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಪಂ ಆಡಳಿತ ಪಾರದರ್ಶಕವಾಗಿಡುವಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸಬಲ್ಲವು ಎಂಬುವುದು ಸಾರ್ವಜನಿಕರ ವಾದ.

ಯಾರದು ಸರಿ, ಯಾರದು ತಪ್ಪು?

ಈ ಹಿಂದೆ ಪ್ರವಾಹ ಬಂದ ಸಂದರ್ಭಗಳಲ್ಲಿ ಶುಪಾರ್ಲಿ, ಮುತ್ತೂರು, ಜಂಬಗಿ ಬಿಕೆಗಳಲ್ಲಿ ಅವಳಡಿಸಿದ್ದ ಸಿಸಿ ಕ್ಯಾಮೆರಾಗಳು ಹಾಳಗಿವೆ. ಹೀಗಾಗಿ ಇಲ್ಲಿಯ ಸಿಸಿ ಕ್ಯಾಮೆರಾಗಳನ್ನು ತೆಗೆದು ಇಡಲಾಗಿದೆ. ಆದರೆ, ಇನ್ನೂವರೆಗೂ ಅಳವಡಿಸುವ ಕಾರ್ಯವಾಗಿಲ್ಲ. ಇನ್ನೂ ಲಿಂಗನೂರು, ಚಿಮ್ಮಡದ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ನಮಗೆ ಸಿಸಿಟಿವಿ ಕ್ಯಾಮೆರಾ ಅವಶ್ಯಕತೆ ಇಲ್ಲ. ಅದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಿ ಎಂದು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದರಿಂದ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿಲ್ಲ. ಇನ್ನೂ ಅಲಗೂರು, ಕುಂಬಾರ ಹಳ್ಳಿ, ಮಧುರಖಂಡ, ತುಂಗಳ, ಸಿದ್ದಾಪುರಗಳ ಗ್ರಾಪಂ ಅಧಿಕಾರಿಗಳು ಸಿಸಿ ಕ್ಯಾಮೆರಾಗೆ ಮಂಜೂರಿಗೆ ಜಿಪಂಗೆ ಕಳುಹಿಸಲಾಗಿದೆ. ಇನ್ನೂವರೆಗೂ ಬಂದಿಲ್ಲ ಎಂದು ಅಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜಿಪಂ ಸಿಇಒ ಅವರು ಜಿಲ್ಲೆಯ ಎಲ್ಲ ಗ್ರಾಪಂಗಳ ತಮ್ಮ ಸ್ಥಳೀಯ ನಿಧಿಯಿಂದ ಕಂಪ್ಯೂಟರ್‌, ಸಿಸಿಟಿವಿ ಕ್ಯಾಮೆರಾಗಳಂತಹ ವಸ್ತುಗಳನ್ನು ಖರೀದಿಸಬೇಕು. ಇವುಗಳಿಗೆ ಯಾವುದೇ ಕ್ರಿಯಾ ಯೋಜನೆ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಜಿಪಂ ಸಿಇಒ ಸುಳ್ಳು ಹೇಳುತ್ತಿದ್ದಾರೆ, ಗ್ರಾಪಂ ಅಧಿಕಾರಿಗಳು ನುಣಿಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಒಟ್ಟಿನಲ್ಲಿ ಗ್ರಾಪಂಗಳಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದೇ ಪಾರದರ್ಶಕ ಆಡಳಿತ ಮರೀಚಿಕೆಯಾಗಿದೆ. ಈ ಬಗ್ಗೆ ಜಿಪಂ ಸಿಇಒ ಅವರೇ ಕ್ರಮ ಕೈಗೊಳ್ಳಬೇಕು ಎಂಬುವುದು ಎಲ್ಲರ ಒತ್ತಾಯ.

2016ರಲ್ಲಿ ಸರ್ಕಾರ ಆದೇಶಿಸಿದಂತೆ ಜಿಲ್ಲೆಯ 198 ಗ್ರಾಪಂಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ 2017-18ನೇ ಸಾಲಿನಲ್ಲಿ ಸಮಗ್ರ ವರದಿ ಕಳಿಸಲಾಗಿದೆ. ಸದ್ಯ ಗ್ರಾಪಂ ಸುರಕ್ಷತೆಗಾದರೂ ಗ್ರಾಪಂ ಪಿಡಿಒಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲ ಗ್ರಾಪಂಗಳ ತಮ್ಮ ಸ್ಥಳೀಯ ನಿಧಿಯಿಂದ ಕಂಪ್ಯೂಟರ್‌, ಸಿಸಿಟಿವಿ ಕ್ಯಾಮೆರಾಗಳಂತಹ ವಸ್ತುಗಳನ್ನು ಖರೀದಿಸಬೇಕು. ಇವುಗಳಿಗೆ ಯಾವುದೇ ಕ್ರಿಯಾ ಯೋಜನೆ ಮಾಡುವಂತಿಲ್ಲ ಎಂದು ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಹೇಳಿದ್ದಾರೆ. 

2019-20ನೇ ಸಾಲಿನ ಕ್ರಿಯಾ ಯೋಜನೆ ಜಿಪಂ ಮಂಜೂರಿಗೆ ಕಳಿಸಿದ್ದು, ಜಿಪಂನಿಂದ ಇನ್ನೂವರೆಗೆ ಮಂಜೂರಿಯಾಗಿಲ್ಲ. ಮಂಜೂರಾಗಿ ಬಂದ ನಂತರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಜಮಖಂಡಿ  ಕುಂಬಾರಹಳ್ಳ ಗ್ರಾಪಂ ಪಿಡಿಒ ಹೇಮಾ ದೇಸಾಯಿ ಹೇಳಿದ್ದಾರೆ. 

ತಾಲೂಕಿನ ಬಹುತೇಕ ಗ್ರಾಪಂ ಕಚೇರಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಎಲ್ಲ ಗ್ರಾಪಂಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಆದರೆ ಕೆಲವೊಂದು ಕಡೆ ರಿಪೇರಿ ಹಂತದಲ್ಲಿ ಇದ್ದಿರಬಹುದು. ಎಲ್ಲ 38 ಗ್ರಾಪಂ ಕಚೇರಿಗಳಿಂದ ಮಾಹಿತಿ ಪಡೆದು, ಸ್ಥಗಿತ ಇರುವ ಮತ್ತು ರಿಪೇರಿ ಹಂತದಲ್ಲಿರುವ ಇರುವ ಹಾಗೂ ಯಾವ ಗ್ರಾಪಂಗಳಲ್ಲಿ ಸಿಸಿಟಿವಿ ಅಳವಡಿಸಿಲ್ಲದಿರುವ ಗ್ರಾಪಂಗಳ ಮೇಲೆ ಕ್ರಮ ಕೈ ಗೊಳ್ಳಲಾಗುವುದು ಎಂದು ಜಮಖಂಡಿ ತಾಪಂ ಇಓ ಸಂಜೀವ ಹಿಪ್ಪರಗಿ ಹೇಳಿದ್ದಾರೆ.