Chitradurga: ಕೋಟೆನಾಡಿನ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಮುಂದೆ ರೋಗಿಗಳ ಪರದಾಟ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡ್ತಿರೋ ಹಿನ್ನೆಲೆ, ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಮುಂಭಾಗ ರೋಗಿಗಳು ಪರದಾಟ ಅನುಭವಿಸ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.24): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡ್ತಿರೋ ಹಿನ್ನೆಲೆ, ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಮುಂಭಾಗ ರೋಗಿಗಳು ಪರದಾಟ ಅನುಭವಿಸ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಬಾಗಿಲು ಬಂದ್ ಮಾಡಿರೋ ಡಯಾಲಿಸಿಸ್ ಕೇಂದ್ರ. ಮತ್ತೊಂದೆಡೆ ಡಯಾಲಿಸಿಸ್ ಮಾಡಿಸೋದಕ್ಕೆ ಬಂದು ಆಸ್ಪತ್ರೆಯ ಹೊರಭಾಗದಲ್ಲಿಯೇ ಆಟೋದಲ್ಲಿಯೇ ಮಲಗಿ ನರಳಾಟ ಪಡ್ತಿರೋ ರೋಗಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದ ಮುಂಭಾಗ.
ಕಳೆದ ಎರಡು ದಿನಗಳಿಂದ ರೋಗಿಗಳು ನಿತ್ಯ ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಬಂದು ದಾರಿಗೆ ಸುಂಕವಿಲ್ಲದೇ ವಾಪಾಸ್ ಮನೆಗೆ ತೆರಳ್ತಿದ್ದಾರೆ. ಇದಕ್ಕೆ ಮೂಲ ಕಾರಣ, ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿಗಳು ಪ್ರತಿಭಟನೆ ಮಾಡ್ತಿರೋದೆ ಆಗಿದೆ. ಇದ್ರಿಂದಾಗಿ ಜಿಲ್ಲೆಯ ನಾನಾ ಗ್ರಾಮೀಣ ಭಾಗದಿಂದ ಬರುವ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಯಾಲಿಸಿಸ್ ಅನ್ನು ಕಾಲ ಕಾಲಕ್ಕೆ ಸರಿಯಾಗಿ ಮಾಡಿಸಬೇಕು. ಒಂದು ದಿನ ಮಿಸ್ ಆದಲ್ಲಿ ಆ ರೋಗಿಗಳ ಪ್ರಾಣಕ್ಕೆ ಕುತ್ತು ಬರಬಹುದು. ಅದು ಕೇವಲ ಯಾವುದೋ ಒಂದು ಇಂಜೆಕ್ಷನ್ ಅಲ್ಲ, ಅದು ಮಿಷನ್ಸ್ ಗಳಿಂದ ನೀಡುವ ಚಿಕಿತ್ಸೆ ಆಗಿದೆ.
ಸರ್ಕಾರಿ ಕಾಲೇಜಿನಲ್ಲಿ ಮೆಡಿಕಲ್ ಕಾಲೇಜು ವಿಂಗ್ , ಚಿತ್ರದುರ್ಗ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು
ಆ ವ್ಯವಸ್ಥೆ ಇರುವುದು ಕೇವಲ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ. ಆದ್ರೆ ಸಿಬ್ಬಂದಿಗಳ ಪ್ರತಿಭಟನೆಯಿಂದ ರೋಗಿಗಳಿಗೆ ತುಂಬಾ ಸಮಸ್ಯೆ ಆಗ್ತಿದೆ ಎಂದು ಅಳಲು ತೋಡಿಕೊಂಡ ಡಯಾಲಿಸಿಸ್ ಸಂಬಂಧಿತ ರೋಗಿ. ಇನ್ನೂ ಡಯಾಲಿಸಿಸ್ ಮಾಡಿಸಲು ಬೇರೆ ಖಾಸಗಿ ಆಸ್ಪತ್ರೆಗಳಿಗೆ ನಾವು ತೆರಳಿದ್ರೆ ಅವರು ಬಾಯಿಗೆ ಬಂದಂತೆ ಫೀಸ್ ಕೇಳುತ್ತಾರೆ. ಓರ್ವ ರೋಗಿಗೆ 3 ಸಾವಿರದಿಂದ 5 ಸಾವಿರದವರೆಗೆ ಕೇಳುತ್ತಾರೆ. ನಾವು ವಾರಕ್ಕೆ ಎರಡು ಬಾರಿ ಟ್ರೀಟ್‌ಮೆಂಟ್ (ಡಯಾಲಿಸಿಸ್) ಮಾಡಿಸಬೇಕು. ನಿತ್ಯ ಬಂದಾಗ ಹಣ ನೀಡಿ ಮಾಡಿಸುವ ಶಕ್ತಿ ನಮಗೆ ಇಲ್ಲ ನಾವು ಬಡವರು. ನಮಗೆ ಇಷ್ಟೆಲ್ಲಾ ಸಮಸ್ಯೆ ಆಗ್ತಿದ್ರು ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಇರುವುದು ವಿಪರ್ಯಾಸ ಎಂದು ರೋಗಿಗಳು ಹಿಡಿಶಾಪ ಹಾಕಿದರು.
ಚಿತ್ರದುರ್ಗ: ಬಡವರ ಆಶ್ರಯ ಮನೆ ಯೋಜನೆಯಲ್ಲೂ ಅಕ್ರಮದ ವಾಸನೆ
ಈ ಬಗ್ಗೆ ಜಿಲ್ಲಾಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಅವರನ್ನೇ ಕೇಳೋಣ ಅಂದ್ರೆ ಪುಣ್ಯಾತ್ಮ ಪೋನ್ ಸಂಪರ್ಕಕ್ಕೂ ಸಿಗದೇ ಬೆಂಗಳೂರಿಗೆ ಮೀಟಿಂಗ್‌ಗೆ ತೆರಳಿದ್ದಾರೆ ಎಂಬ ಮಾಹಿತಿ ದೊರೆಯಿತು. ಒಟ್ಟಾರೆಯಾಗಿ ಡಯಾಲಿಸಿಸ್ ಮಾಡಿಸಿದ್ರೆ ಇನ್ನೂ ಸ್ವಲ್ಪ ದಿನ ನೆಮ್ಮದಿಯಾಗಿ ಬದುಕಬಹುದಲ್ಲ ಎಂದು ರೋಗಿಗಳು ನರಳಾಟ ಪಡ್ತಿದ್ದಾರೆ. ಆದ್ರೆ ಸಿಬ್ಬಂದಿಗಳು ಹಾಗೂ ಸರ್ಕಾರದ ಜಂಜಾಟದಲ್ಲಿ ರೋಗಿಗಳು ನಿತ್ಯ ನರಕಯಾತನೆ ಅನುಭವಿಸ್ತಿರೋದು ನಿಜಕ್ಕೂ ಶೋಚನೀಯ ಸಂಗತಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಡಯಾಲಿಸಿಸ್ ಕೇಂದ್ರದಲ್ಲಿ ಕೆಲಸ ಶುರು ಮಾಡಿಸಲಿ ಎಂಬುದು ಎಲ್ಲರ ಬಯಕೆ.