ಬೆಳ್ತಂಗಡಿ [ಆ.18]:  ರಾಜ್ಯದ ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮುಖ್ಯಮಂತ್ರಿ ಪರಿಹಾರ ಪರಿಹಾರ ನಿಧಿಗೆ 25 ಕೋಟಿ ರು. ನೀಡುವುದಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಿಸಿದ್ದಾರೆ. ಅದೇ ರೀತಿ ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಪುನರ್‌ ನಿರ್ಮಾಣಕ್ಕಾಗಿ ಗ್ರಾಮಾಭಿವೃದ್ಧಿ ಯೋಜನೆಯಡಿ 50 ಲಕ್ಷ ರು. ಚೆಕ್‌ ಅನ್ನೂ ಸ್ಥಳೀಯ ನಿಧಿಯೊಂದಕ್ಕೆ ಹಸ್ತಾಂತರಿಸಿದ್ದಾರೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧ್ಯಕ್ಷರೂ ಆಗಿರುವ ಡಾ. ಹೆಗ್ಗಡೆ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. 25 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಹಾರದ ಮೊತ್ತದ ಚೆಕ್‌ ಹಸ್ತಾಂತರಿಸಲಾಗುವುದು ಎಂದರು.

ಚೆಕ್‌ ವಿತರಣೆ: ಬೆಳ್ತಂಗಡಿ ತಾಲೂಕಿನಲ್ಲಿ 174 ಮನೆಗಳು ಹಾನಿಯಾಗಿರುವ ವರದಿ ಲಭ್ಯವಿದ್ದು ಶಾಸಕರ ಮುಂದಾಳತ್ವದಲ್ಲಿ ಪುನರ್‌ ನಿರ್ಮಾಣ ಕೆಲಸ ಪ್ರಾರಂಭಗೊಂಡಿದೆ. ಬೆಳ್ತಂಗಡಿ ತಾಲೂಕಿನ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಯಿಂದ 50 ಲಕ್ಷ ರು. ವನ್ನು ‘ಕಾಳಜಿ ಬೆಳ್ತಂಗಡಿ ಫ್ಲಡ್‌ ರಿಲೀಫ್‌ ಫಂಡ್‌ಗೆ’ ವರ್ಗಾಯಿಸಲಾಗುವುದು ಎಂದರು. ಇದೇ ವೇಳೆ 50 ಲಕ್ಷ ರು. ಮೊತ್ತದ ಚೆಕ್‌ ಅನ್ನು ಶಾಸಕ ಹರೀಶ್‌ ಪೂಂಜ ಮೂಲಕ ‘ಕಾಳಜಿ ಬೆಳ್ತಂಗಡಿ ಫ್ಲಡ್‌ ರಿಲೀಫ್‌ ಫಂಡ್‌’ಗೆ ಡಾ. ಹೆಗ್ಗಡೆ ಹಸ್ತಾಂತರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌. ಎಚ್‌. ಮಂಜುನಾಥ್‌, ಹೇಮಾವತಿ ಹೆಗ್ಗಡೆ ಇತರರು ಇದ್ದರು.

ಪಶ್ಚಿಮ ಘಟ್ಟಅಧ್ಯಯನ ಪೀಠ ಸ್ಥಾಪನೆ-ಡಾ.ಹೆಗ್ಗಡೆ 

ಪಶ್ಚಿಮಘಟ್ಟಶ್ರೇಣಿಯಲ್ಲಿ ಪ್ರಾಕೃತಿಕ ಸಮತೋಲನ ಹಾಗೂ ಜನರ ಹಿತಾಸಕ್ತಿ ಕಾಪಾಡಲು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸರ್ಕಾರದ ಸಹಭಾಗಿತ್ವದಲ್ಲಿ .2 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸೆæ್ಥ ಸ್ಥಾಪಿಸಲಾಗುವುದು, ಅದರಲ್ಲಿ ‘ಪಶ್ಚಿಮ ಘಟ್ಟಅಧ್ಯಯನ ಪೀಠ’ವನ್ನೂ ಆರಂಭಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಜೀವವೈವಿಧ್ಯತೆಗೆ ಹೆಸರಾದ ಪಶ್ಚಿಮ ಘಟ್ಟಶ್ರೇಣಿಯಲ್ಲಿ ಈ ವರ್ಷ ಸುಮಾರು 500ಕ್ಕೂ ಹೆಚ್ಚು ಕಡೆ ಭೂಕುಸಿತ ಆಗಿರುವುದು ಆತಂಕ ಸೃಷ್ಟಿಸಿದೆ. ಜೊತೆಗೆ ಈ ಘಟ್ಟಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪ್ರಾಕೃತಿಕ ದುರಂತ ಹೆಚ್ಚಾಗಿ ಕಾಡಲು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದಲ್ಲಿ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು, ಇಲ್ಲಿ ವಾಸಿಸುತ್ತಿರುವ ಜನಸಮೂಹದ ಹಿತಾಸಕ್ತಿ ರಕ್ಷಿಸಿಕೊಳ್ಳುವ ಕುರಿತು ‘ಪಶ್ಚಿಮ ಘಟ್ಟಅಧ್ಯಯನ ಪೀಠ’ ಅಧ್ಯಯನ ಮಾಡಲಿದೆ. ಅಲ್ಲದೆ, ಪಶ್ಚಿಮ ಘಟ್ಟದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಕ್ರಮಗಳ ಕುರಿತು ಸಂಶೋಧನಾ ವರದಿಯೊಂದನ್ನು ತಯಾರಿಸಿ, ನಂತರ ಸಮಾನ ಮನಸ್ಕರ ಭಾಗವಹಿಸುವಿಕೆಯೊಂದಿಗೆ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಇದಕ್ಕಾಗಿ 2 ವರ್ಷಗಳ ಕಾಲಮಿತಿಯೊಂದಿಗೆ ಅಧ್ಯಯನ ಪೀಠವು ಕ್ರಿಯಾಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸುವುದಾಗಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.