Asianet Suvarna News Asianet Suvarna News

ವೈಕುಂಠ ಏಕಾದಶಿ: ಭಕ್ತರ ಪ್ರವೇಶ ನಿಷಿದ್ಧ

ದೇವರಿಗೆ ವಿಶೇಷ ಅಲಂಕಾರ| ಆನ್‌ಲೈನ್‌ನಲ್ಲಿ ನೇರಪ್ರಸಾರ| ದೇವಾಲಯಗಳಲ್ಲಿ ಭರದಿಂದ ಸಾಗಿದ ವೈಕುಂಠ ಏಕಾದಶಿಯ ಸಿದ್ಧತೆ| ಮುಜರಾಯಿ ಇಲಾಖೆ ಆದೇಶದ ಮೇರೆಗೆ ಹೆಚ್ಚು ಜನರು ಸೇರಬಾರದು ಎಂಬ ಉದ್ದೇಶದಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ| 

Devotees Not Allowed to Entry to Temples due to Coronavirus grg
Author
Bengaluru, First Published Dec 24, 2020, 1:43 PM IST

ಬೆಂಗಳೂರು(ಡಿ.24): ಕೊರೋನಾ ಹಿನ್ನೆಲೆ ಈ ವರ್ಷ ಇಸ್ಕಾನ್‌, ಕೋಟೆ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ನಗರದ ಪ್ರತಿಷ್ಠಿತ ವೆಂಕಟೇಶ್ವರನ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ವೈಕುಂಠ ಏಕಾದಶಿ (ಡಿ.25) ವೈಭವವನ್ನು ಆನ್‌ಲೈನ್‌ ಮೂಲಕವೇ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ.

ಈಗಾಗಲೇ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಸಿದ್ಧತೆಗಳು ಭರದಿಂದ ಸಾಗಿವೆ. ಭಕ್ತರು ಆನ್‌ಲೈನ್‌ ಮೂಲಕವೇ ವೆಂಕಟೇಶ್ವರನ ದರ್ಶನ ಪಡೆಯುವ ಜತೆಗೆ ಧಾರ್ಮಿಕ ಕೈಂಕರ್ಯಗಳನ್ನು ವೀಕ್ಷಿಸಬಹುದು.
ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌ ದೇವಾಲಯ, ಜೆ.ಪಿ.ನಗರದ ತಿರುಮಲಗಿರಿ, ಚಾಮರಾಜಪೇಟೆ ಕೋಟೆ ವೆಂಕಟೇಶ್ವರ ಸ್ವಾಮಿ ದೇವಾಲಯ, ಮಹಾಲಕ್ಷ್ಮಿ ಲೇಔಟ್‌ನ ಶ್ರೀನಿವಾಸ ದೇವಾಲಯ, ಬನಶಂಕರಿ 2ನೇ ಹಂತ ದೇವಗಿರಿ ವರಪ್ರದ ವೆಂಕಟೇಶ್ವರ ದೇವಾಲಯಗಳಲ್ಲಿ ಪೂಜೆ, ವೈಕುಂಠ ದ್ವಾರ ನಿರ್ಮಾಣ ಮಾಡಲಾಗುತ್ತದೆ.

ನಗರದ ವೆಂಕಟೇಶ್ವರ, ರಾಮಮಂದಿರ ಮತ್ತಿತರ ದೇವಾಲಯಗಳಲ್ಲಿ ವಿಷ್ಣುವಿನ ಅಲಂಕಾರ ಮಾಡಿ, ವೈಕುಂಠ ದ್ವಾರವನ್ನು ನಿರ್ಮಿಸಿ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ನಾನಾ ದೇವಾಲಯಗಳಲ್ಲಿ ಗುರುವಾರ (ಡಿ.24) ಮಧ್ಯರಾತ್ರಿಯಿಂದಲೇ ವಿಶೇಷ ಪೂಜೆ, ಹೋಮ-ಹವನ ನಡೆಯಲಿದೆ. ವೈಯಾಲಿಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ, ವಿಲ್ಸನ್‌ ಗಾರ್ಡನ್‌ ಶ್ರೀರಾಮ ಮಂದಿರ, ಶ್ರೀನಗರ ಬಸ್‌ ನಿಲ್ದಾಣ ಸಮೀಪವಿರುವ ವೆಂಕಟರಮಣ ದೇವಾಲಯ, ಸಹಕಾರ ನಗರದ ಶ್ರೀ ಲಕ್ಷ್ಮೀನಾರಾಯಣ ದೇವಾಲಯ, ವಿಜಯನಗರದ ಶ್ರೀ ಕೋದಂಡರಾಮ ದೇವಾಲಯ ಮತ್ತಿತರ ದೇವಾಲಯಗಳಲ್ಲಿ ಹೂಗಳಿಂದ ವೈಕುಂಠ ದ್ವಾರ ನಿರ್ಮಿಸಲಾಗುತ್ತದೆ. ಕೆಲವು ದೇವಸ್ಥಾನಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜತೆಗೆ ಭಕ್ತರಿಗೆ ಲಡ್ಡು ಮತ್ತಿತರ ಪ್ರಸಾದ ವಿತರಣೆಯೂ ಇರಲಿದೆ.

ಮನೆಯಲ್ಲೇ ಕುಳಿತು ಇಸ್ಕಾನ್ ಟೆಂಪಲ್‌ನ ವೈಕುಂಠ ಏಕಾದಶಿ ಸಂಭ್ರಮ ಕಣ್ತುಂಬಿಕೊಳ್ಳಿ!

ರಾಜ್ಯ ಮುಜರಾಯಿ ಇಲಾಖೆ ಆದೇಶದ ಮೇರೆಗೆ ಹೆಚ್ಚು ಜನರು ಸೇರಬಾರದು ಎಂಬ ಉದ್ದೇಶದಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಚಾಮರಾಜಪೇಟೆಯ ಕೋಟೆ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇವಾಕರ್ತ ಬಿ.ಆರ್‌.ಶ್ರೀನಿವಾಸಮೂರ್ತಿ ತಿಳಿಸಿದರು.

ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಯಾರಿಗಳು ನಡೆಯುತ್ತಿವೆ. ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಈ ಸಂಬಂಧ ಮಂಗಳವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಇಸ್ಕಾನ್‌: ಗಣ್ಯರಿಗೆ ಪ್ರವೇಶ ಅವಕಾಶ

ವೈಕುಂಠ ಏಕಾದಶಿಯಂದು ನಗರದ ಇಸ್ಕಾನ್‌ ದೇವಾಲಯದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ದೇವಾಲಯದಲ್ಲಿ ಅಂದು ಬೆಳಗಿನ ಜಾವ 3ಕ್ಕೆ ದೇವರಿಗೆ ಸುಪ್ರಭಾತ ಸೇವೆ ನಡೆಸಿ ಮಹಾಮಂಗಳಾರತಿ ನೆರವೇರುತ್ತದೆ. ಬಳಿಕ ಬೆಳಗ್ಗೆ 4ಕ್ಕೆ ಅಭಿಷೇಕ ನಡೆಯಲಿದೆ. ನಂತರ ತೋಮಾಲೆ ಸೇವೆ, ಸಹಸ್ರದಳ ಸೇವೆ, ರಾಧಾ-ಕೃಷ್ಣರಿಗೆ ಲಕ್ಷ್ಮೀ-ವೆಂಕಟೇಶ್ವರ ಅಲಂಕಾರ ಮಾಡಲಾಗುತ್ತದೆ ಎಂದು ಇಸ್ಕಾನ್‌ ಬೆಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರ ಚೈತನ್ಯ ದಾಸ ತಿಳಿಸಿದ್ದಾರೆ.

ಇಸ್ಕಾನ್‌ನಲ್ಲಿ ಅಂದು ಸಂಗೀತ ಸೇವೆ, ವೈಕುಂಠ ಏಕಾದಶಿಯ ಮಹತ್ವದ ಬಗ್ಗೆ ಉಪನ್ಯಾಸ ನಡೆಯಲಿದೆ. ಬೆಳಗ್ಗೆ 5.45ರಿಂದ 6.30ರವರೆಗೆ ವೈಕುಂಠ ಮಹಾದ್ವಾರ ತೆರೆಯಲಾಗುವುದು. ಬೆಳಗ್ಗೆ 7ಕ್ಕೆ ಶೃಂಗಾರ, ಆರತಿಗಳ ಬಳಿಕ ಕೃಷ್ಣ-ರುಕ್ಮಿಣಿ, ಸತ್ಯಭಾಮರ ಉತ್ಸವ ಮೂರ್ತಿಗಳಿಗೆ ಕಲ್ಯಾಣೋತ್ಸವ ಜರುಗಲಿದೆ. ರಾತ್ರಿ 10ರ ನಂತರ ಏಕಾಂತಸೇವೆ ಮತ್ತು ಶಯನ ಪಲ್ಲಕ್ಕಿಯೊಂದಿಗೆ ವೈಕುಂಠ ಏಕಾದಶಿ ಸೇವೆಗಳು ಪೂರ್ಣಗೊಳ್ಳುತ್ತವೆ. ಈ ಎಲ್ಲಾ ಸೇವೆಗಳನ್ನು ‘ಇಸ್ಕಾನ್‌ ಬೆಂಗಳೂರು’ ವೆಬ್‌ಸೈಟ್‌ (www.iskconbangalore.org) ಮೂಲಕ ಭಕ್ತರು ಮನೆಗಳಲ್ಲೇ ಕಣ್ತುಂಬಿಕೊಳ್ಳಬಹುದು. ಆದರೆ, ಅಂದು ಕೆಲ ಗಣ್ಯರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಾಗುವುದು ಎಂದಿದ್ದಾರೆ.
 

Follow Us:
Download App:
  • android
  • ios