Asianet Suvarna News Asianet Suvarna News

ಬಾಗಲಕೋಟೆ: ಗ್ರಾಮದ ಶಕ್ತಿ ದೇವತೆಗಾಗಿ ಮನೆಗಳನ್ನೇ ನೆಲಸಮಗೊಳಿಸಿದ ಭಕ್ತರು!

ಸ್ವಂತ ಮನೆ ನೆಲಸಮ ಮಾಡಿ ದೇವಿಗೆ ರಾಜ ಬೀದಿ ಮಾಡಿಕೊಟ್ಟ ಗ್ರಾಮಸ್ಥರು| ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಭಕ್ತರಿಂದ ಈ ಕಾರ್ಯ| 25 ಮನೆಗಳನ್ನು ತೆರವುಗೊಳಿಸಿದ ಭಕ್ತರು| 

Devotees Demolished Houses for Godess Lakashmi Devi in Bagalkot District
Author
Bengaluru, First Published Feb 28, 2020, 12:05 PM IST

ಬಾಗಲಕೋಟೆ(ಫೆ.28): ಗ್ರಾಮದ ದೇವಿಯ ಗುಡಿಗೆ ರಸ್ತೆ ಇಲ್ಲ ಎನ್ನುವ ಕಾರಣಕ್ಕೆ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ನೆಲಸಮಗೊಳಿಸಿ ಗ್ರಾಮ ದೇವಿಗೆ ರಾಜ ಬೀದಿ ನಿರ್ಮಿಸಲು ಮುಂದಾಗಿರುವ ಜಿಲ್ಲೆಯ ಮಧುರಖಂಡಿ ಗ್ರಾಮದ ಭಕ್ತರು ಭಕ್ತಿಯನ್ನು ಹೀಗೂ ಸಮರ್ಪಿಸಬಹುದು ಎಂಬುವುದಕ್ಕೆ ಸಾಕ್ಷಿಯಾಗಿದ್ದಾರೆ.

ಗ್ರಾಮದ ಶಕ್ತಿ ದೇವತೆಯಾಗಿರುವ ಲಕ್ಷ್ಮಿ ದೇವಸ್ಥಾನದ ದರ್ಶನಕ್ಕೆ ಸರಿಯಾದ ರಸ್ತೆ ಇಲ್ಲದೆ ಗ್ರಾಮದ ಚಿಕ್ಕಪುಟ್ಟ ರಸ್ತೆಗಳನ್ನು ದಾಟಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಅನಿವಾರ್ಯತೆಯನ್ನು ಗಮನಿಸಿದ ಗ್ರಾಮಸ್ಥರು ಗ್ರಾಮದೇವಿಯ ದರ್ಶನಕ್ಕೆ ಇಷ್ಟೆಲ್ಲ ಕಷ್ಟ ಏಕೆ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಗ್ರಾಮದ ಎಲ್ಲರೂ ಸೇರಿ ಕೈಗೊಂಡ ಒಮ್ಮತದ ತೀರ್ಮಾನ ಈಗ ಗ್ರಾಮ ದೇವಿಯ ದರ್ಶನಕ್ಕೆ ರಾಜ ಬೀದಿ ನಿರ್ಮಾಣವಾಗುತ್ತಿರುವುದು ನಿಜಕ್ಕೂ ಭಕ್ತಿಯ ಪರಾಕಾಷ್ಠೆಯೇ ಸರಿ.

25 ಮನೆಗಳ ನೆಲಸಮ:

ಸಾಮಾನ್ಯವಾಗಿ ಮನೆ ಮುಂದಿನ ಜಾಗ ಒಂದಿಷ್ಟು ಬೇರೆಯವರ ಪಾಲಾದರೂ ಸಾಕು ಅದಕ್ಕೆ ದೊಡ್ಡ ದೊಡ್ಡ ಗಲಾಟೆಯಾಗಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಗ್ರಾಮ ದೇವಿಯ ಕಾರಣಕ್ಕೆ ಮಧುರಖಂಡಿ ಗ್ರಾಮಸ್ಥರು 25ಕ್ಕೂ ಹೆಚ್ಚು ಮನೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ. ಮಾತ್ರವಲ್ಲ, ದೇವಾಲಯಕ್ಕೆ ತೆರಳಲು ದುಸ್ತರವಾಗಬಾರದು ಎಂದು ಮನೆಗಳನ್ನು ನೆಲಸಮ ಮಾಡಿ ಅಲ್ಲಿಯೇ ದಾರಿ ಮಾಡಿಕೊಟ್ಟಿದ್ದಾರೆ.

ಗ್ರಾಮದೇವಿಯ ದರ್ಶನಕ್ಕೆ ರಸ್ತೆಯನ್ನು ನಿರ್ಮಿಸಲು ಹೊರಟ ಗ್ರಾಮಸ್ಥರ ದೃಢ ನಿರ್ಧಾರಕ್ಕೆ ಗ್ರಾಮದ ಪ್ರತಿಯೊಬ್ಬರೂ ಹೆಗಲಿಗೆ ಹೆಗಲು ಕೊಟ್ಟು ತಮ್ಮ ತಮ್ಮ ಮನೆಗಳನ್ನು ನೆಲಸಮ ಮಾಡುವ ಜೊತೆಗೆ ರಸ್ತೆಯನ್ನು ಸಹ ತಾವೇ ನಿರ್ಮಿಸಲು ಮುಂದಾಗಿದ್ದಾರೆ. ಇದು ಗ್ರಾಮದಲ್ಲಿನ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವಾಲಯಕ್ಕೆ ರಸ್ತೆ ಮಾಡುವ ಕಾರ್ಯ ಇದಾಗಿದ್ದರಿಂದ ಗ್ರಾಮದ ಎಲ್ಲರೂ ಸೇರಿ ಸ್ವತಃ ಗುದ್ದಲಿ, ಪಿಕಾಸಿ, ಹಾರಿಯಂತಹ ವಸ್ತುಗಳನ್ನು ಹಿಡಿದು ಮನೆಗಳನ್ನು ನೆಲಸಮ ಮಾಡಿ ಅಲ್ಲಿರುವ ಕಲ್ಲು ಮಣ್ಣನ್ನು ಸಾಗಿಸುವ ಕಾರ್ಯ ಒಂದೆಡೆಯಾದರೆ, ದೇವಿಯ ಮುಖ್ಯರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸುವ ಮೂಲಕ ಯಾವುದೇ ಫಲಾಪೇಕ್ಷೆ ಬಯಸದೆ ಕಾರ್ಯ ಕೈಗೊಂಡಿದ್ದರ ಪರಿಣಾಮ ಈಗ ಲಕ್ಷ್ಮೇ ದೇವಿಯ ದರ್ಶನಕ್ಕೆ ಸುಗಮ ರಸ್ತೆ ನಿರ್ಮಾಣವಾಗಿದೆ. ಹೀಗೆ ಮನೆ ತೆರವು ಮಾಡಿಕೊಂಡ ಗ್ರಾಮಸ್ಥರು ಈಗಾಲೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಜೀವ ಸಾಗಿಸುತ್ತಿದ್ದಾರೆ.

ಶತಮಾನಗಳ ಇತಿಹಾಸ:

ನೂರಾರು ವರ್ಷಗಳ ಇತಿಹಾಸ ಇರುವ ಮಧುರಖಂಡಿ ಗ್ರಾಮದ ಲಕ್ಷ್ಮೇ ದೇವಿಯ ಆರಾಧಕರಲ್ಲಿ ಜಮಖಂಡಿಯ ಪಟವರ್ಧನ ರಾಜಕುಟುಂಬವು ಒಂದು. ಇಂದಿಗೂ ಗ್ರಾಮದಲ್ಲಿ ದವನದ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಕಾರ್ತಿಕೋತ್ಸವ ಹಾಗೂ ಪಲ್ಲಕ್ಕಿ ಕಾರ್ಯಕ್ರಮಕ್ಕೆ ರಾಜಮನೆತನದಿಂದ ಗೌರವ ಸಿಗುತ್ತದೆ. 12 ವರ್ಷಕ್ಕೊಮ್ಮೆ ಜಾತ್ರೆ, ಪ್ರತಿವರ್ಷ ನಡೆಯುವ ಕಾರ್ತಿಕೋತ್ಸವ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ನಡೆಯುವ ಉಡಿ ತುಂಬುವ ಕಾರ್ಯ ನೋಡುವುದೇ ಒಂದು ಹಬ್ಬವಾಗಿದೆ. ನೆರೆಯ ರಾಜ್ಯಗಳಿಂದ ಹಾಗೂ ಗ್ರಾಮದ ಮಹಿಳೆಯರು ಎಲ್ಲೆ ಇದ್ದರೂ ಪ್ರತಿವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಉಡಿ ತುಂಬುವ ಕಾರ್ಯವನ್ನು ಪಾಲಿಸುತ್ತಾರೆ.

ಊರ ದೇವತೆಯ ದರ್ಶನಕ್ಕೆ ಸುಗಮ ಹಾಗೂ ನೇರವಾದ ರಸ್ತೆ ಇರಲಿಲ್ಲ. ಇದನ್ನು ಗಮನಿಸಿದ ಗ್ರಾಮಸ್ಥರೆಲ್ಲ ಸೇರಿ ಮನೆಗಳನ್ನು ತೆರವುಗೊಳಿಸಲು ನಿರ್ಧರಿಸಿ ಗ್ರಾಮ ದೇವತೆಯಾದ ಲಕ್ಷ್ಮೇ ದೇವಿಗೆ ಸುಗಮ ರಸ್ತೆಯನ್ನು ನಿರ್ಮಿಸಲಿದ್ದೇವೆ. ಇದೆಲ್ಲ ಮಹಾಲಕ್ಷ್ಮಿ ಪ್ರೇರಣೆ ಎಂದು ಗ್ರಾಮದ ಪ್ರಮುಖ ಬಾಸ್ಕರ ಬಡಿಗೇರ ಹೇಳಿದ್ದಾರೆ. 
 

Follow Us:
Download App:
  • android
  • ios