ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು: ಇಬ್ರಾಹಿಂ
ಮುಸ್ಲಿಮರಿಗೆ ಶೇ.4ರಷ್ಟುಸಂವಿಧಾನದತ್ತವಾಗಿ ಮೀಸಲಾತಿ ನೀಡಿದ್ದು ದೇವೇಗೌಡರು. ಇದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು
ಮಧುಗಿರಿ : ಮುಸ್ಲಿಮರಿಗೆ ಶೇ.4ರಷ್ಟುಸಂವಿಧಾನದತ್ತವಾಗಿ ಮೀಸಲಾತಿ ನೀಡಿದ್ದು ದೇವೇಗೌಡರು. ಇದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಪಟ್ಟಣದ ಆಶೂಖಾನೆ ಆವರಣದಲ್ಲಿ ಸೋಮವಾರ ಸಂಜೆ ನಡೆದ ಜೆಡಿಎಸ್ ಅಲ್ಪಸಂಖ್ಯಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕೇವಲ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದ ಮುಸ್ಲಿಮರಿಗೆ ಮೀಸಲಾತಿ ಕೊಡಲು ಹಾಗೂ ನಾಯಕ ಸಮಾಜವನ್ನು ಎಸ್ಟಿಗೆ ಸೇರಿಸಲು ದೇವೇಗೌಡರೇ ಬರಬೇಕಾಯಿತು. ಇಂತಹ ಜಾತ್ಯಾತೀತವಾದಿಯನ್ನು ನಾಡು ಮರೆಯಬಾರದು. ಇಂದು ಕಾಂಗ್ರೆಸ್ ಮನೆ ಉರಿಯುತ್ತಿದೆ. ಸಿಎಂ ಆಗಲು ಡಿಕೆಶಿ, ಸಿದ್ದು, ಪರಂ, ಖರ್ಗೆ ಪೈಪೋಟಿ ನಡೆದಿದೆ. ಈ ಭಾಗದ ಮಾಜಿ ಶಾಸಕ ಕೆ.ಎನ್.ರಾಜಣ್ಣನ ಸ್ಥಿತಿಯ ಬಗ್ಗೆ ಸಿಟ್ಟಿಲ್ಲ. ಬದಲಿಗೆ ಅನುಕಂಪವಿದೆ ಎಂದರು.
ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ನಜ್ಮಾ ನಜೀರ್ ಮಾತನಾಡಿ, ರಾಜ್ಯದಲ್ಲಿ ಕೋಮು ಗಲಭೆಯಿಂದಾಗಿ ಮುಸ್ಲಿಮರು ಭಯದ ವಾತಾವರಣದಲ್ಲಿದ್ದಾರೆ. ಇದಕ್ಕೆ ಕಾಂಗ್ರೆಸ್-ಬಿಜೆಪಿ ಕಾರಣವಾಗಿದ್ದು, ನಾವು ಧೈರ್ಯವಾಗಿ ಹಾಗೂ ಸಹಬಾಳ್ವೆಯಿಂದ ಬದುಕಲು ಕುಮಾರಸ್ವಾಮಿ ಸಿಎಂ ಆಗಬೇಕು. ಹಾಗಾಗಿ ಸರಳ ಸಜ್ಜನ ತಾಲೂಕಿನಲ್ಲಿ ದ್ವೇಷದ ರಾಜಕಾರಣ ಮಾಡದ ವೀರಭದ್ರಯ್ಯನವರಿಗೆ ನಮ್ಮ ಸಮುದಾಯದ ಬೆಂಬಲ ಇರಲಿ ಎಂದರು.
ಬಿಹಾರದ ಮಾಜಿ ಸಂಸದ ಉಬೇದುಲ್ಲಾ ಖಾನ್ ಮಾತನಾಡಿ, ದೇವೇಗೌಡರಂತಹ ಸೆಕ್ಯೂಲರ್ ನಾಯಕನನ್ನು ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಕಾಂಗ್ರೆಸ್-ಬಿಜೆಪಿಯು ಕೌರವರ ಪಾತ್ರ ಮಾಡಿ ದೇಶವನ್ನು ಹಾಳು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಅವರಿಗೆ ಎಚ್ಚರಿಕೆ ನೀಡಲು ಜೆಡಿಎಸ್‌ಗೆ ಮತ ಹಾಕಬೇಕು. ಕಾಂಗ್ರೆಸ್‌ಗೆ ಮುಸ್ಲಿಮರ ಮತ ಬೇಕಿದ್ದು ನಮ್ಮ ಅಭಿವೃದ್ಧಿ ಬೇಕಿಲ್ಲ. ಮೋದಿ ಚುನಾವಣೆ ಸಮಯದಲ್ಲಿ ಬುಡಬುಡಿಕೆ ಆಡಿಸುತ್ತಿದ್ದು ನಂತರ ಮಾಯವಾಗ್ತಾರೆ. ಇಂತವರಿಂದ ದೇಶ ಉದ್ಧಾರವಾಗಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದ ಕೆಲವು ಮುಸ್ಲಿಂ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಂಶುದ್ಧೀನ್, ಕಾರ್ಪೋರೇಟರ್ ಇಮ್ರಾನ್‌ಪಾಷ, ಜೆಡಿಎಸ್ ಅಧ್ಯಕ್ಷ ಬಸವರಾಜು, ಹಿರಿಯ ಮುಖಂಡ ತುಂಗೋಟಿ ರಾಮಣ್ಣ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಎಲ್. ಗಂಗರಾಜು,ಎಂ.ಎಸ್. ಚಂದ್ರಶೇಖರಬಾಬು, ಮಾಜಿ ಸದಸ್ಯ ಸಲೀಂುನ್ನೀಸಾ ಅಲ್ತಾಫ್,ಎಸ್. ವಿಶ್ವಾರಾದ್ಯ, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಶಪೀಕ್ ಅಹ್ಮದ್, ಮುಖಂಡರಾದ ಸರ್ದಾರ್, ಸಲ್ಮಾನ್, ದಾದು, ತಾಸು, ಆರೀಪ್, ಅಕ್ರಂ, ಜಬೀ, ನಾಸೀರ್, ಬಿಲಾಲ್, ಜಿಲಾನ್, ಅಲ್ಲುಮಾಮು, ಅಲ್ಪಸಂಖ್ಯಾತ ಸಮಾಜದವರು ಇದ್ದರು.
ಇಬ್ರಾಹಿಂ ಆಗಮನದಿಂದ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಆನೆ ಬಲ ಬಂದಿದೆ. ಕಾಂಗ್ರೆಸ್ ಕುತಂತ್ರದಿಂದ ಕುಮಾರಸ್ವಾಮಿ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ಮಧುಗಿರಿ ಅಭಿವೃದ್ಧಿಗೆ ಮಾರಕವಾಯ್ತು. ತಾಲೂಕಿನಲ್ಲಿ ದ್ವೇಷದ ರಾಜಕಾರಣ ಮಾಡದೆ 1200 ಕೋಟಿ ಅನುದಾನ ತಂದು ಜನಪರವಾಗಿ ಕೆಲಸ ಮಾಡಿದ್ದೇನೆ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಕಾರಣ ಇಂದು ಲಕ್ಷಾಂತರ ಮಂದಿಗೆ ಅದರ ಉಪಯೋಗವಾಗಿದೆ. ಗೌಡರ ಸೇವೆಯನ್ನು ಮನದಲ್ಲಿಟ್ಟುಕೊಂಡು ಜೆಡಿಎಸ್‌ಗೆ ಮತ ಹಾಕಿ ನನಗೆ ಆಶೀರ್ವಾದ ಮಾಡಿ.
ಎಂ.ವಿ.ವೀರಭದ್ರಯ್ಯ ಶಾಸಕ